ಮುಂಗಾರು ಮಳೆಗೆ ರಾಜ್ಯದ ೨೮೩ ಗ್ರಾಮಗಳು ಭಾಗಶಃ ಮುಳುಗಡೆ: ಸಂಕಷ್ಟಕ್ಕೆ ಸಿಲುಕಿದ ೩೬ ಸಾವಿರಕ್ಕೂ ಅಧಿಕ ಜನರು

posted in: ರಾಜ್ಯ | 0

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಕಳೆದ ಹತ್ತಕ್ಕೂ ಹೆಚ್ಚು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಉತ್ರರ ಕರ್ನಾಟಕ ಹಾಗೂ ಕರಾವಳಿ ಕರ್ನಾಟಕದ ೨೮೩ ಗ್ರಾಮಗಳು ನದಿ ಹಾಗೂ ಮಳೆಯ ನೀರಿನಿಂದ ಜಲಾವೃತವಾಗಿದ್ದು, ಗ್ರಾಮಿಣ ಭಾಗದ ಸಾವಿರಾರು ಜನ ಮನೆ, ಆಸ್ತಿಗಳನ್ನು ಕಳೆದುಕೊಂಡು ನಿರಾಶ್ರತರಾಗಿದ್ದಾರೆ.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ವರದಿಯ ಪ್ರಕಾರ, ಸುಮಾರು ೨೮೩ ಗ್ರಾಮಗಳು, ೪೫ ತಾಲೂಕುಗಳು ಮಳೆಯ ಹೊಡೆತಕ್ಕೆ ಸಿಕ್ಕಿದ್ದು, ೩೬,೪೯೮ ಜನರು ಅಕ್ಷರಶಃ ನಲುಗಿದ್ದಾರೆ.

ವರುಣನ ಆರ್ಭಟಕ್ಕೆ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಭಾರೀ ಮಳೆಗೆ ರಾಜ್ಯದಲ್ಲಿ ನದಿಗಳು ಪ್ರವಾಹ ಮಟ್ಟದಲ್ಲಿ ಹರಿಯುತ್ತಿದ್ದು, ಜನರಿಗೆ ಆತಂಕ ಮೂಡಿಸಿದೆ. ಬಹುತೇಕ ಡ್ಯಾಂಗಳು ಭರ್ತಿಯಾಗಿದ್ದು, ನದಿಗಳಿಗೆ ನೀರು ಬಿಡಲಾಗುತ್ತಿದೆ. ಇದರಿಂದ ನದಿಪಾತ್ರದ ಜನರಿಗೆ ಪ್ರವಾಹ ಭೀತಿ ಎದುರಾಗಿದೆ. ಹಲವೆಡೆ ಮನೆಗಳು ಕುಸಿದಿವೆ. ಇನ್ನೂ ಕೆಲವೆಡೆ ಸೇತುವೆಗಳು ಮುಳುಗಡೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಬೆಳೆಗಳು ನಾಶವಾಗಿವೆ. ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿಗಳು ಜಲಾವೃತಗೊಂಡಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸುಮಾರು ೩೧,೩೬೦ ಮಂದಿಯನ್ನು ತಗ್ಗು ಪ್ರದೇಶಗಳಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸುಮಾರು ೨೨,೪೧೭ ಜನರು ೨೩೭ ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಪ್ರಮುಖ ಸುದ್ದಿ :-   ತಮ್ಮ ವಿರುದ್ಧ ಮಾನಹಾನಿಕರ ಸುದ್ದಿ- ದೃಶ್ಯ ಪ್ರಕಟಿಸದಂತೆ ತಡೆಯಾಜ್ಞೆ ತಂದ ಈಶ್ವರಪ್ಪ ಪುತ್ರ ಕಾಂತೇಶ

ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಳೆಯಿಂದಾಗಿ ಕಳೆದ ೭೨ ಗಂಟೆಗಳಲ್ಲಿ ೯ ಮಂದಿ ಸಾವನ್ನಪ್ಪಿದ್ದು, ಮೂರು ಜನರು ಕಣ್ಮರೆಯಾಗಿದ್ದಾರೆ. ಸುಮಾರು ೩,೫೦೨ ವಿದ್ಯುತ್ ಕಂಬಗಳು ಧರೆಗುರುಳಿವೆ. ೩೪೨ ಟ್ರಾನ್ಸ್ಫಾರ್ಮರ್ಗಳು ಹಾನಿಯಾಗಿದ್ದು, ಹಲವಾರು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಸುಮಾರು ೫೯,೦೦೦ ಹೆಕ್ಟೇರ್ ಬೆಳೆ ಮಳೆಯಿಂದಾಗಿ ನಾಶವಾಗಿದೆ. ಅಧಿಕ ಮಳೆಯಿಂದಾಗಿ ಸುಮಾರು ೨,೦೦೦ ಹೆಕ್ಟೇರ್ ತೋಟಗಾರಿಕಾ ಬೆಳೆ ನಾಶವಾಗಿದೆ. ಮಳೆಯ ಅಬ್ಬರಕ್ಕೆ ೧೩೪ ಮನೆಗಳು ಸಂಪೂರ್ಣವಾಗಿ ಕುಸಿದಿವೆ, ೨,೪೮೦ ಮನೆಗಳು ಭಾಗಶಃ ಹಾನಿಯಾಗಿವೆ. ೨೧೩ ಶಾಲೆಗಳು ಭಾಗಶಃ ಹಾನಿಯಾಗಿವೆ.

ಶಿವಮೊಗ್ಗ ಜಿಲ್ಲೆ ಮಳೆಯ ಆರ್ಭಟಕ್ಕೆ ಸಿಕ್ಕಿ ಸಂಪೂರ್ಣ ನಲುಗಿದೆ. ಇಲ್ಲಿ ೨೮೬೪ ವಿದ್ಯುತ್ ಕಂಬಗಳು ಧರೆಗುರುಳಿವೆ. ೨೭೪ ಟ್ರಾನ್ಸ್ ಫಾರ್ಮರ್ ಗಳು ಹಾನಿಯಾಗಿವೆ. ಇಲ್ಲಿನ ಅನೇಕ ಹಳ್ಳಿಗಳಿಗೆ ಕಳೆದ ೨ ವಾರಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಪಶ್ಚಿಮ ಘಟ್ಟ ಭಾಗದಲ್ಲಿ ೧೬ ಕಡೆ ದೊಡ್ಡ ಭೂಕುಸಿತ ಸಂಭವಿಸಿದ್ದರೆ, ಉತ್ತರ ಕರ್ನಾಟಕ ಭಾಗದಲ್ಲಿ ೭೩ ಕಡೆ ಸಣ್ಣದಾಗಿ ಭೂ ಕುಸಿತವಾಗಿದ್ದು, ಹೆದ್ದಾರಿಗಳು ಬಂದ್ ಆಗಿವೆ. ಕೆಎಸ್ ಡಿಎಂಎ ಮಳೆಯ ಪರಿಸ್ಥಿತಿಯನ್ನು ನಿಭಾಯಿಸಲು ೧೬ ಎಸ್ ಡಿಆರ್‌ಎಫ್ ತಂಡ ಮತ್ತು ೭ ಎನ್ ಡಿ ಆರ್ ಎಫ್ ತಂಡಗಳನ್ನು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ನಿಯೋಜಿಸಿದೆ.

ಪ್ರಮುಖ ಸುದ್ದಿ :-   ದೇವರಾಜೇಗೌಡಗೆ ಪೆನ್ ಡ್ರೈವ್ ಕೊಟ್ಟಿದ್ದು ನಾನೇ, ಬೇರೆ ಯಾರಿಗೂ ಕೊಟ್ಟಿಲ್ಲ : ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ ಹೇಳಿಕೆ

ರಾಜ್ಯದಲ್ಲಿ ಮುಂದಿನ ೫ ದಿನಗಳ ಕಾಲ ಮಳೆಯ ಆರ್ಭಟ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ ೨೬ ರಂದು ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ ೪-೫ ದಿನಗಳಲ್ಲಿ ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರತೆ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಮುಂಗಾರು ಮಳೆ ಪ್ರಾರಂಭವಾದಾಗಿನಿಂದ ೫೦೧.೬ ಮಿ.ಮೀ. ಮಳೆ ಸುರಿದಿದೆ. ಸಾಮಾನ್ಯವಾಗಿ ೪೦೩.೮ ಮಿ.ಮೀ ಮಳೆಯಾಗುತ್ತಿತ್ತು. ಈ ಬಾರಿ ಹೆಚ್ಚುವರಿ ಶೇ.೨೪ರಷ್ಟು ಮಳೆಯಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement