ಅಫ್ಘಾನಿಸ್ತಾನದ ಖ್ಯಾತ ಹಾಸ್ಯ ನಟನ ಹತ್ಯೆ ಮಾಡಿದ ತಾಲಿಬಾನ್‌ ಉಗ್ರರು: ಹತ್ಯೆಗೂ ಮುನ್ನ ಚಿತ್ರಹಿಂಸೆ ನೀಡಿದ ಶಾಕಿಂಗ್‌ ವಿಡಿಯೋ ವೈರಲ್

ಕಾಬೂಲ್: ಅಫ್ಘಾನಿಸ್ತಾನದ ಖ್ಯಾತ ಹಾಸ್ಯನಟ ನಜರ್ ಮೊಹಮ್ಮದ್ ಅಲಿಯಾಸ್ ಖಾಶಾ ಜ್ವಾನ್ ಅವರನ್ನು ಅಪಹರಿಸಿದ ತಾಲಿಬಾನ್ ಉಗ್ರರು ನಂತರ ಹತ್ಯೆ ಮಾಡಿದ್ದಾರೆ.
ಖಾಶಾ ಜ್ವಾನ್ ಎಂದೇ ಕರೆಸಿಕೊಳ್ಳುತ್ತಿದ್ದ ನಟ ನಜರ್ ಮೊಹಮ್ಮದ್ ಅವರ ಕತ್ತು ಸೀಳಿ, ಬಳಿಕ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ.
ಎರಡು ದಿನಗಳ ಹಿಂದೆ ಅಫ್ಘಾನಿಸ್ತಾನದ ಗಡಿಭಾಗದಲ್ಲಿ ಕಂದಹಾರ್ ಬಳಿ ಹಾಸ್ಯ ನಟ ಖಾಶಾ ಜ್ವಾನ್ ಅವರ ಮೃತದೇಹ ಪತ್ತೆಯಾಗಿತ್ತು.
ಅಪರಿಚಿತ ದುಷ್ಕರ್ಮಿಗಳು ಖಾಶಾ ಅವರ ಮನೆ ಮೇಲೆ ಗುಂಡಿನ ದಾಳಿ ನಡೆಸಿ, ಅವರನ್ನು ಅಪಹರಣ ಮಾಡಿದ್ದರು.
ಬಳಿಕ, ನಟ ಖಾಶಾ ಅವರ ಕುಟುಂಬಸ್ಥರು ನೀಡಿದ ಮಾಹಿತಿಯ ಆಧಾರದಲ್ಲಿ ತನಿಖೆ ನಡೆಸಿದಾಗ ಅದು ತಾಲಿಬಾನ್ ಸಂಘಟನೆಯ ಉಗ್ರರ ಕೃತ್ಯ ಎಂಬುದು ಬಯಲಾಗಿತ್ತು. ಅದಾದ ಬಳಿಕ ಕಂದಹಾರ್ ಬಳಿ ನಟನ ಮೃತದೇಹ ಪತ್ತೆಯಾಗಿತ್ತು.
ಆ ಕೊಲೆಗೂ ಹಿಂದಿನ ದಿನ ಅಂದರೆ ನಟನನ್ನು ಅಪಹರಣ ಮಾಡಿದ ದಿನ ಉಗ್ರರು ಅವರಿಗೆ ಚಿತ್ರಹಿಂಸೆ ನೀಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಹತ್ಯೆಗೂ ಮುನ್ನ ಕಾರಿನಲ್ಲಿ ಉಗ್ರರು ನಟ ನಜರ್ ಮೊಹಮ್ಮದ್ ಅವರ ಕೆನ್ನೆಗೆ ಹೊಡೆದು, ಹಿಂಸೆ ನೀಡಿರುವ ಶಾಕಿಂಗ್ ವಿಡಿಯೋವೊಂದನ್ನು ರಿಲೀಸ್ ಮಾಡಲಾಗಿದೆ
ಈ ಹಿಂದೆ ಕಂದಹಾರ್ ಪೊಲೀಸ್ ಇಲಾಖೆಯಲ್ಲೂ ಖಾಶ್ ಜ್ವಾನ್ ಸೇವೆ ಸಲ್ಲಿಸಿದ್ದರು. ಬಳಿಕ, ಪೂರ್ಣಪ್ರಮಾಣದಲ್ಲಿ ನಟನೆಯಲ್ಲಿ ತೊಡಗಿಸಿಕೊಂಡಿದ್ದರು. ಕಂದಹಾರ್​ನ ಹಾಸ್ಯನಟನನ್ನು ಉಗ್ರರು ಬರ್ಬರವಾಗಿ ಹತ್ಯೆ ಮಾಡಿರುವುದಕ್ಕೆ ವಿಶ್ವಾದ್ಯಂತ ವಿರೋಧ ವ್ಯಕ್ತವಾಗಿದೆ. ಇತ್ತೀಚೆಗೆ ಕಂದಹಾರ್​ನಲ್ಲಿ ತಾಲಿಬಾನ್ ಉಗ್ರರ ದಾಳಿಯ ವಿರುದ್ಧ ನಟ ಖಾಶಾ ಹೇಳಿಕೆ ನೀಡಿದ್ದರು. ಅದೇ ಕಾರಣಕ್ಕೆ ಅವರನ್ನು ಅಪಹರಿಸಿ, ಹತ್ಯೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಈಗಾಗಲೇ ತಾಲಿಬಾನ್ ಉಗ್ರರು ಕಂದಹಾರಿನ ಶೇ. 70ರಷ್ಟು ಭಾಗ ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಇಲ್ಲಿ ವರದಿ ಮಾಡಲು ಹೋಗಿದ್ದ ಭಾರತದ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ಧಿಕಿಯನ್ನು ಕೂಡ ಹತ್ಯೆ ಮಾಡಲಾಗಿತ್ತು.

ಪ್ರಮುಖ ಸುದ್ದಿ :-   ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement