ಕೇಂದ್ರ ವಿತ್ತ ಸಚಿವರ ಭೇಟಿ ಮಾಡಿದ ಸಿಎಂ: ಜಿಎಸ್‌ಟಿ ಪರಿಹಾರ ಬಾಕಿ 11,400 ಕೋಟಿ ರೂ. ಕೊಡಲು ಒಪ್ಪಿದ್ದಾರೆ ಎಂದ ಬೊಮ್ಮಾಯಿ

ನವದೆಹಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸದ 2ನೇ ದಿನವಾದ ಇಂದು (ಶನಿವಾರ) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಬರಬೇಕಿರುವ ಬಾಕಿ ಹಣ ಬಿಡುಗಡೆ ಬಗ್ಗೆ ಚರ್ಚೆ ನಡೆಸಿದರು.
ಬಳಿಕ ಮಾತನಾಡಿದಅವರು, ಜಿಎಸ್ ಟಿ ಪರಿಹಾರ ಬಾಕಿ ಹಣ 11,400 ಕೋಟಿ ಕೊಡಲು ನಿರ್ಮಲಾ ಸೀತಾರಾಮನ್ ಒಪ್ಪಿದ್ದಾರೆ. ಪ್ರತಿತಿಂಗಳು ಕಂತಿನ ರೂಪದಲ್ಲಿ ಕೊಡಲಿದ್ದಾರೆ. 8 ಸಾವಿರ ಕೋಟಿ ಈ ಸಾಲಿನ ಜಿಎಸ್ ಟಿ ಹಣ ಕೊಡಲು ಒಪ್ಪಿದ್ದಾರೆ ಹಾಗೂ ನಬಾರ್ಡ್ ಹಣದಿಂದ ಅನುದಾನ ಕೊಡಲಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವೀಯ ಅವರನ್ನೂ ಭೇಟಿಯಾದ ಬೊಮ್ಮಾಯಿ, ಪ್ರತಿ ತಿಂಗಳು 63 ರಿಂದ 64 ಲಕ್ಷ ಡೋಸ್​​ ಲಸಿಕೆ ಕೊಡುತ್ತಿದ್ದಾರೆ. ಮುಂದಿನ ತಿಂಗಳು 1 ಕೋಟಿ ಕೊಡಲು ಒಪ್ಪಿದ್ದಾರೆ. ಕೊರೊನಾ 3ನೇ ಅಲೆ ತಯಾರಿ ಬಗ್ಗೆ ಚರ್ಚೆ ಮಾಡಿದ್ದೇನೆ, ಅದಕ್ಕಾಗಿ 800 ಕೋಟಿ ರೂ. ಕೊಡಲು ಒಪ್ಪಿದ್ದಾರೆ ಎಂದು ತಿಳಿಸಿದರು.
ಮೇಕೆದಾಟು ವಿಚಾರವಾಗಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾ ಮಲೈ ಉಪವಾಸ ಕೂಡ್ರುವುದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಅವರು ಏನಾದರೂ ಮಾಡಿಕೊಳ್ಳಲಿ. ಮೇಕೆದಾಟು ನಮ್ಮ ಹಕ್ಕು. ನಮ್ಮ ಯೋಜನೆಯನ್ನು ನಾವು ಮಾಡುತ್ತೇವೆ. ಅವರು ಏನು ಮಾಡುತ್ತಾರೆ ಎಂಬುದು ಅವರಿಗೆ ಬಿಟ್ಟಿದ್ದು ಎಂದರು.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ಪರಿಸ್ಥಿತಿಗಳ ಹಿನ್ನಲೆಯಲ್ಲಿ ಬಾಧಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಆದ್ಯತೆ ಮೇರೆಗೆ ರಕ್ಷಣೆ, ಪರಿಹಾರ, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ಸಂತ್ರಸ್ತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು

ಪ್ರಮುಖ ಸುದ್ದಿ :-   ಬೆಂಗಳೂರಲ್ಲಿ 'ಸಿಮ್ ಬಾಕ್ಸ್' ಜಾಲ ಪತ್ತೆ ; ನಾಲ್ವರ ಬಂಧನ, 320 ಸಿಮ್‌ ಕನೆಕ್ಷನ್‌ ಸಾಮರ್ಥ್ಯದ 10 ಸಾಧನ ವಶ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement