ಬೆಂಗಳೂರು: ನೆರೆಯ ಮಹಾರಾಷ್ಟ್ರ ಹಾಗೂ ಕೇರಳದಿಂದ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ 72 ಗಂಟೆಗಳ ಒಳಗೆ ಮಾಡಿಸಿರುವ ಆರ್ಟಿಪಿಸಿಆರ್ ಪರೀಕ್ಷೆಯ ನೆಗೆಟೀವ್ ವರದಿ ಹಾಜರುಪಡಿಸಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ತಾಂತ್ರಿಕ ಸಲಹಾ ಸಮಿತಿಯ ಶಿಫಾರಸು ಆಧರಿಸಿ ರಾಜ್ಯ ಸರ್ಕಾರ ಪರಿಷ್ಕøತ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮೊದಲು ಕೋವಿಡ್ನ ಎರಡನೇ ಲಸಿಕೆ ಪಡೆದವರಿಗೆ ಪರೀಕ್ಷಾ ವರದಿ ಇಲ್ಲದೇ ಇದ್ದರೂ ಕೂಡ ರಾಜ್ಯ ಪ್ರವೇಶಿಸಲು ಅವಕಾಶವಿತ್ತು.
ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚುತ್ತಿದೆ. ರೂಪಾಂತರ ವೈರಸ್ ಲಸಿಕೆ ಪಡೆದವರನ್ನು ಬಾಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮೊದಲನೆ ಹಾಗೂ ಎರಡನೆ ಡೋಸ್ ಪಡೆದಿದ್ದರೂ ಅಥವಾ ಪಡೆಯದೇ ಇದ್ದರೂ 72 ಗಂಟೆಗಳ ಒಳಗೆ ಆರ್ಟಿ-ಪಿಸಿಆರ್ ಮಾಡಿಸಿರುವ ನೆಗೆಟೀವ್ ವರದಿ ಕಡ್ಡಾಯಗೊಳಿಸಲಾಗಿದೆ. ವಿಮಾನ, ರೈಲು ಹಾಗೂ ರಸ್ತೆ ಮಾರ್ಗಗಳಲ್ಲಿ ಸಂಚರಿಸುವವರು ಕಡ್ಡಾಯವಾಗಿ ಈ ವರದಿ ಹಾಜರಿಪಡಿಸಲೇಬೇಕಾಗಿದೆ.
ಕೇರಳದಿಂದ ಕರ್ನಾಟಕಕ್ಕೆ ವಿದ್ಯಾಭ್ಯಾಸ, ಕಚೇರಿ ಕೆಲಸ, ವ್ಯಾಪಾರ, ವ್ಯವಹಾರ ಸೇರಿದಂತೆ ಇತರ ಕಾರಣಗಳಿಗೆ ದೈನಂದಿನವಾಗಿ ಭೇಟಿ ನೀಡುವವರು ಪ್ರತಿ 15 ದಿನಗಳಿಗೊಮ್ಮೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೇರಳದ ಗಡಿ ಭಾಗದಲ್ಲಿರುವ ದಕ್ಷಿಣ ಕನ್ನಡ, ಕೊಡಗು, ಮೈಸೂರು ಜಿಲ್ಲೆಗಳು. ಮಹಾರಾಷ್ಟ್ರ ಗಡಿಯ ಬೆಳಗಾವಿ, ವಿಜಯಪುರ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳ ವಾಹನಗಳ ಪ್ರಯಾಣಿಕರು, ಚಾಲಕರು, ಸಹಾಯಕರುಗಳನ್ನು ತಪಾಸಣೆಗೊಳಪಡಿಸಲು ಚೆಕ್ಪೋಸ್ಟ್ಗಳಲ್ಲಿ ಅಗತ್ಯ ಸಿಬ್ಬಂದಿ ನೇಮಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಸಾಂವಿಧಾನಿಕ ಕಾರ್ಯಕಾರಿಗಳು, ವೈದ್ಯಕೀಯ ಸಿಬ್ಬಂದಿ, ಸಂಬಂಧಿಕರು ಮರಣ ಹೊಂದಿದ ಸಂದರ್ಭದಲ್ಲಿ ಆಗಮಿಸುವವರಿಗೆ ಆರ್ಟಿಪಿಸಿಆರ್ ವರದಿಯಿಂದ ವಿನಾಯ್ತಿ ನೀಡಲಾಗಿದೆ.
ಪ್ರಯಾಣಿಕರ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ, ಗುರುತಿನ ಚೀಟಿ, ಆಧಾರ್ ಸಂಖ್ಯೆ ಸೇರಿಂತೆ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಜಾವೇದ್ ಅಕ್ತರ್ ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ