ಸಂದರ್ಶನ: ರಘುಪತಿ ಯಾಜಿ
ಹುಬ್ಬಳ್ಳಿ : ಕರ್ನಾಟಕದಲ್ಲಿ ರಾಜಕೀಯ ವಾಕ್ಯೂಮ್ ಇದೆ.ಇಲ್ಲಿ ಕೇವಲ ಅಧಿಕಾರಕ್ಕಾಗಿ ರಾಜಕಾರಣ ನಡೆಯುತ್ತಿದೆಯೇ ಹೊರತು ಆಡಳಿತಕ್ಕಾಗಿ ರಾಜಕಾರಣ ನಡೆಯುತ್ತಿಲ್ಲ. ಇದು ಜನರಿಗೂ ಗೊತ್ತಿದೆ. ಆದರೆ ಅವರ ಮುಂದೆ ಪರ್ಯಾಯ ಆಯ್ಕೆಗಳಿಲ್ಲ. ಈ ವ್ಯಾಕ್ಯೂಮ್ (ಜಾಗ) ತುಂಬಲೇ ಬೇಕಿದೆ. ಇಲ್ಲದಿದ್ದರೆ ಇಲ್ಲಿ ಕೇವಲ ಅಧಿಕಾರ (ಪವರ್) ನಡೆಯುತ್ತದೆಯೇ ಹೊರತು ಆಡಳಿತ (ಅಡ್ಮಿನಿಸ್ಟ್ರೇಶನ್) ನಡೆಯುವುದಿಲ್ಲ. ಈ ಕಾರಣಕ್ಕಾಗಿಯೇ ದೆಹಲಿ ಮಾದರಿ ಮುಂದಿಟ್ಟುಕೊಂಡು ಜನಾಡಳಿತಕ್ಕಾಗಿ ಜನಾಧಿಕಾರದ ಧ್ಯೇಯದೊಂದಿಗೆ ಆಮ್ ಆದ್ಮಿ ಪಾರ್ಟಿ ಕರ್ನಾಟಕಕ್ಕೆ ಗಟ್ಟಿಯಾಗಿ ಕಾಲಿಡುತ್ತಿದೆ. ಇಲ್ಲಿಯ ರಾಜಕೀಯ ಪರಿಸ್ಥಿತಿ ಗಂಭೀರವಾಗಿರುವುದರಿಂದ ನಾವು ಸಹ ಬಹಳ ಗಂಭೀರವಾಗಿಯೇ ಕರ್ನಾಟಕದ ಸವಾಲನ್ನು ಸ್ವೀಕರಿಸಿದ್ದೇವೆ. ಇದು ಶೀಘ್ರವೇ ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆಗಳು, ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ ಚುನಾವಣೆಯಿಂದ ಆರಂಭವಾಗಲಿದೆ. ನಾವು ಏನು ಎಂಬುದು ಈ ಚುನಾವಣೆಯಿಂದಲೇ ಗೊತ್ತಾಗಲಿದೆ.
ಹೀಗೆಂದವರು ಆಮ್ ಆದ್ಮಿ ಪಾರ್ಟಿಯ (ಆಪ್) ರಾಜ್ಯ ಉಸ್ತುವಾರಿ ರೋಮಿ ಭಾಟಿ ಅವರು. ಕರ್ನಾಟಕ ರಾಜ್ಯದಲ್ಲಿ ಆಮ್ ಆದ್ಮಿ ಪಾರ್ಟಿ ಕ್ರಮಿಸಲಿರುವ ಪಥ, ಮುಂಬರುವ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅದರ ಪಾಲ್ಗೊಳ್ಳುವಿಕೆ, ಜನಸಂಘಟನೆ, ಚುನಾವಣಾ ಕಾರ್ಯತಂತ್ರದ ಬಗ್ಗೆ ಕನ್ನಡಿ.ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ವಿಸ್ತಾರವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅವರ ಪ್ರಕಾರ ಆಮ್ ಆದ್ಮಿ ಪಾರ್ಟಿ ಕರ್ನಾಟಕವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ದಕ್ಷಿಣ ಭಾರತದಲ್ಲಿ ಪಕ್ಷದ ಪ್ರವೇಶಕ್ಕೆ ಕರ್ನಾಟಕ ಅವರಿಗೆ ಮೊದಲ ಹೆಜ್ಜೆ. ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆ ಇದ್ದು, ಆ ವ್ಯಾಕ್ಯೂಮ್ ತುಂಬುವ ಕೆಲಸವನ್ನು ಆಮ್ ಆದ್ಮಿ ಪಾರ್ಟಿ ಖಂಡಿತವಾಗಿ ಮಾಡಲಿದೆ ಎಂದು ಅವರು ದೃಢವಾಗಿ ಹೇಳುತ್ತಾರೆ.
* ಆದ್ಮಿ ಪಾರ್ಟಿಯು ಕರ್ನಾಟಕದಲ್ಲಿ ಚುನಾವಣಾ ರಾಜಕೀಯವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ..? ನಿಮ್ಮ ದೃಷ್ಟಿಯಲ್ಲಿ ಈ ಸಮಯ ಹಾಗೂ ಸಂದರ್ಭ ಆಪ್ ಪಕ್ಷಕ್ಕೆ ಎಷ್ಟರಮಟ್ಟಿಗೆ ಸೂಕ್ತ ಹಾಗೂ ಪೂರಕ..?
ನೋಡಿ, ಕಳೆದು ಮೂರು ವರ್ಷಗಳಿಂದ ಕರ್ನಾಟಕದಲ್ಲಿ ರಾಜಕಾರಣ ಹೇಗೆ ನಡೆಯುತ್ತಿದೆಯೆಂದು ನೀವೇ ನೋಡ್ತಾ ಇದ್ದೀರಿ, ಇಲ್ಲಿ ಉತ್ತಮ ಆಡಳಿತಕ್ಕಾಗಿ ರಾಜಕಾರಣ ನಡೆಯುತ್ತಿಲ್ಲ. ಬದಲಾಗಿ ಕೇವಲ ಹಾಗೂ ಕೇವಲ ಅಧಿಕಾರಕ್ಕಾಗಿ ರಾಜಕಾರಣ ನಡೆಯುತ್ತಿದೆ. ಅಂದರೆ ಅಧಿಕಾರ ಪಡೆಯುವ ಮೂಲಕ ರಾಜ್ಯದ ಸಂಪತ್ತು ಹಾಗೂ ಸಂಪನ್ಮೂಲ ಲೂಟಿಗಾಗಿ ರಾಜಕಾರಣ ನಡೆಯುತ್ತಿದೆ.
ಮೂರು ವರ್ಷಗಳಲ್ಲಿ ಮೂರು ಮುಖ್ಯಮಂತ್ರಿಗಳು. ಎಲ್ಲವನ್ನೂ ತಮ್ಮ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವುದು ಮುಖ್ಯವಾಗುತ್ತಿದೆಯೇ ಹೊರತು ಉತ್ತಮ ಆಡಳಿತ ಎಂಬುದು ಮರೀಚಿಕೆಯಾಗಿದೆ. ಅಧಿಕಾರದ ಮೂಲಕ ಎಷ್ಟು ಸಾಧ್ಯವೋ ಅಷ್ಟು ಹಣ ಸಂಪಾದನೆ ಮಾಡುವುದೇ ಆಡಳಿತ ಎಂಬಂತಾಗಿದೆ. ಈ ತರಹದ ಸ್ಥಿತಿಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷಗಳು ಸಮಾನ ಪಾಲುದಾರರು. ಅದಕ್ಕಾಗಿಯೇ ನಾನು ಹೇಳಿದ್ದು ಇಲ್ಲಿ ಆಡಳಿತಕ್ಕಾಗಿ ರಾಜಕಾರಣ ನಡೆಯುತ್ತಿಲ್ಲ ಎಂದು. ಉತ್ತಮ ಆಡಳಿತಕ್ಕಾಗಿ ರಾಜಕಾರಣ ಎಂಬುದು ಬೇಕು. ಈಗ ಸೃಷ್ಟಿಯಾಗಿರುವ ಈ ವ್ಯಾಕ್ಯೂಮ್ ತುಂಬುವ ಬಹಳ ದೊಡ್ಡ ಅವಕಾಶ ಹಾಗೂ ಸವಾಲು ಎರಡೂ ನಮ್ಮ ಮುಂದಿದೆ. ಸಮಯ, ಸಂದರ್ಭ ಹಾಗೂ ಪರಿಸ್ಥಿತಿ ನಮಗೆ ಪೂರಕವಾಗಿದೆ. ನಮ್ಮ ಧ್ಯೇಯ ಉತ್ತಮ ಆಡಳಿತ ನೀಡುವುದು. ಜನರ ಬಳಿ ನಾವು ಜನಾಡಳಿತಕ್ಕಾಗಿ ಮತ ಕೇಳುತ್ತೇವೆ. ಇದನ್ನು ನಾವು ದೆಹಲಿಯಲ್ಲಿ ಇದನ್ನು ಮಾಡಿ ತೋರಿಸಿದ್ದೇವೆ. ಅದನ್ನೇ ಇಲ್ಲಿಯೂ ಮಾಡುತ್ತೇವೆ. ನಾನಿಲ್ಲಿ ಕೆಲ ತಿಂಗಳಿಂದ ಕೆಲಸ ಮಾಡುತ್ತಿದ್ದೇನೆ. ನಮಗೆ ವ್ಯಾಕ್ಯೂಮ್ ತುಂಬಲು ಬೇಕಾದ ಪೂರಕ ವಾತಾವರಣವಿದೆ ಎಂದು ಅನ್ನಿಸುತ್ತಿದೆ.
*ದೆಹಲಿ ಹಾಗೂ ಕರ್ನಾಟಕದ ರಾಜಕಾರಣಕ್ಕೂ ಬಹಳ ವ್ಯತ್ಯಾಸವಿದೆ ಎಂದು ಅನ್ನಿಸುವುದಿಲ್ಲವೇ..? ಕೇವಲ ನಗರ ಕೇಂದ್ರಿತ ಹಾಗೂ ದೇಶದ ಬಹುತೇಕ ರಾಜ್ಯಗಳ ಜನಸಂಖ್ಯೆ ಹೊಂದಿರುವ ದೆಹಲಿ ರಾಜಕಾರಣಕ್ಕೂ, ಗ್ರಾಮೀಣ ಹಾಗೂ ಅರೆನಗರ ಪ್ರದೇಶಗಳನ್ನೇ ಹೆಚ್ಚಾಗಿ ಹೊಂದಿರುವ ಕರ್ನಾಟಕದ ರಾಜಕಾರಣಕ್ಕೂ ವ್ಯತ್ಯಾಸ ಇರುವಾಗ ನೀವು ಹೇಗೆ ಇಲ್ಲಿ ನೆಲೆ ಕಂಡುಕೊಳ್ಳುತ್ತೀರಿ..?
ನೀವು ಹೇಳುವುದು ಒಂದು ದೃಷ್ಟಿಕೋನದಲ್ಲಿ ಸರಿ. ಆದರೆ ದೆಹಲಿಯಲ್ಲಿಯೂ ಶೇ.೨೦ರಷ್ಟು ಗ್ರಾಮೀಣ ಪ್ರದೇಶವಿದೆ. ಅಲ್ಲಿ ನಮ್ಮ ಸಾಧನೆ ಬಹಳ ಉತ್ತಮವಾಗಿದೆ. ಜೊತೆಗೆ ಕರ್ನಾಟಕದಲ್ಲಿ ಈವರೆಗೆ ಆಡಳಿತ ಮಾಡಿದವರು ನಗರ ಹಾಗೂ ಗ್ರಾಮೀಣ ಮತ್ತು ರೈತಾಪಿ ವರ್ಗಕ್ಕೆ
ಏನು ಮಾಡಿದ್ದಾರೆ ಎಂಬ ಪ್ರಶ್ನೆಯೂ ಮುಖ್ಯವಾಗುತ್ತದೆ. ಎಷ್ಟೋ ಯೋಜನೆಗಳು ೨೫-೩೦ ವರ್ಷಗಳಾದರೂ ಅನುಷ್ಠಾನವೇ ಆಗಿಲ್ಲ. ಪ್ರತಿವರ್ಷ ಬಜೆಟ್‌ನಲ್ಲಿ ಹಣವೇನೋ ನಿಗದಿ ಮಾಡುತ್ತಾರೆ. ಆದರೆ ಯೋಜನೆ ಅನುಷ್ಠಾನ ಆಗುವುದೇ ಇಲ್ಲ. . ಹಣ ಎಲ್ಲಿ ಹೋಯಿತು ಎಂಬುದೂ ಗೊತ್ತಿಲ್ಲ. ಇದರ ಅರಿವು ಜನರಿಗೆ ಇದೆ. ಉದಾಹರಣೆಗೆ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳನ್ನೇ ತೆಗೆದುಕೊಳ್ಳಿ. ಮಹದಾಯಿ ಇರಲಿ, ಕೃಷ್ಣಾ ನೀರಾವರಿ ಯೋಜನೆಗಳಿರಲಿ. ಯಾವುದೂ ಆಗಿಯೇ ಇಲ್ಲ. ಈ ಬಗ್ಗೆ ಜನರಿಗೆ ಬಹಳ ನೋವಿದೆ. ಆದರೆ ಅವರಿಗೆ ಪರ್ಯಾಯ ಆಯ್ಕೆಗಳಿಲ್ಲ.ನಾವು ಆ ಪರ್ಯಾಯ ಆಯ್ಕೆ ಆಗುತ್ತೇವೆ ಎಂಬ ನಂಬಿಕೆ ನಮಗಿದೆ.
ಹೀಗಾಗಿಯೇ ನಾನು ದೃಢವಾಗಿ ಹೇಳಿದ್ದು ಕರ್ನಾಟಕಕ್ಕೇ ಬೇಕಿರುವ ಪರ್ಯಾಯ ರಾಜಕಾರಣದ ವ್ಯಾಕ್ಯೂಮ್ ತುಂಬುತ್ತೇವೆ ಎಂದು. ಈ ಮಾತನ್ನು ಕೇವಲ ಎಲ್ಲಿಯೋ ಕುಳಿತು ನಾನು ಹೇಳುತ್ತಿಲ್ಲ. ಕಳೆದ ಕೆಲ ತಿಂಗಳಿಂದ ಕರ್ನಾಟಕದಲ್ಲಿ ಓಡಾಡಿ, ಪಕ್ಷ ಸಂಘಟನೆ ಮಾಡಿ ಹೇಳುತ್ತಿದ್ದೇನೆ. ಇದಕ್ಕೆ ನಮ್ಮ ಮೊದಲ ಗುರಿಯೇ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು.
* ಹಾಗಾದರೆ ನೀವು ನೋಡಿದಂತೆ ಈಗ ಕರ್ನಾಟಕದಲ್ಲಿ ಪ್ರಮುಖ ಚುನಾವಣಾ ವಿಷಯಗಳು ಯಾವವು..?
ಮುಖ್ಯವಾದದ್ದು ಭ್ರಷ್ಟಾಚಾರ. ನಾನು ಅದಕ್ಕಾಗಿಯೇ ಹೇಳಿದ್ದು, ಇಲ್ಲಿ ಅಧಿಕಾರಕ್ಕಾಗಿ ರಾಜಕಾರಣ ನಡೆಯುತ್ತಿದೆಯೇ ಹೊರತು ಉತ್ತಮ ಆಡಳಿತಕ್ಕಾಗಿ ಅಲ್ಲ ಎಂದು. ನೀವೇ ಕಳೆದ ಕೆಲದಿನಗಳಿಂದ ನೋಡುತ್ತಿದ್ದೀರಿ, ಮಂತ್ರಿಗಳಾಗಲು ಏನೆಲ್ಲ ಕಸರತ್ತು ನಡೆಯುತ್ತಿದೆಯೆಂದು. ಅವರಿಗೆ ಆಡಳಿತ ಮುಖ್ಯವಲ್ಲ, ಅಧಿಕಾರ ಹಾಗೂ ಹಣ ಸಂಪಾದನೆ ಮಾಡುವುದು ಮುಖ್ಯ. ಅದಕ್ಕಾಗಿಯೇ ನಾನು ಹೇಳಿದ್ದು ಪ್ರಮುಖ ವಿಷಯ ಭ್ರಷ್ಟಾಚಾರ ಎಂದು. ಎರಡನೆಯದ್ದು ಕರ್ನಾಟಕದಲ್ಲಿರುವ ನೈಸರ್ಗಿಕ ಸಂಪನ್ಮೂಲಗಳ ದುರುಪಯೊಗ ಮತ್ತು ಲೂಟಿ. ಇಷ್ಟೊಂದು ಸಂಪನ್ಮೂಲ ಇದ್ದರೂ ಇದರ ಲಾಭ ಕರ್ನಾಟಕದ ಜನರಿಗೆ ಸಿಕ್ಕಿಲ್ಲ. ಇದು ಗಣಿ ವಿಷಯವೇ ಆಗಿರಬಹುದು, ನೀರಾವರಿ ಯೋಜನೆಗಳೇ ಆಗಿರಬಹುದು.ಟೈರ್-೨ ನಗರಗಳಲ್ಲಿ ಉದ್ಯೋಗ ಸೃಷ್ಟಿ ವಿಚಾರವೇ ಆಗಿರಬಹುದು, ಪ್ರವಾಸೋದ್ಯಮದ ಅವಕಾಶವೇ ಇರಬಹುದು. ಹೀಗೆ ಅನೇಕವುಗಳು. ನಮ್ಮ ದೃಷ್ಟಿಯಲ್ಲಿ ಇವೆಲ್ಲವೂ ಮುಖ್ಯ ಚುನಾವಣಾ ವಿಷಯಗಳೇ.
*ನೀವು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಬಹಳ ಮಹತ್ವ ನೀಡಿದಂತೆ ಕಾಣುತ್ತಿದೆ. ಆದರೆ ಈಗಷ್ಟೆ ಇದೇ ಮಹಾನಗರದವರೇ ಮುಖ್ಯಮಂತ್ರಿಯಾಗಿರುವಾಗ ಅದರ ಪ್ರಭಾವ ಹಾಗೂ ಅಭಿಮಾನ ಮುಂಬರುವ ಚುನಾವಣೆಯಲ್ಲಿ ಆಗುವುದಿಲ್ಲವೇ..?
ನೀವು ಹೇಳಿದ್ದು ಮೇಲ್ನೋಟಕ್ಕೆ ಕಾಣುವಂಥದ್ದು. ಆದರೆ ಹಕೀಕತ್ ಬೇರೆಯೇ ಇದೆ ಎಂಬುದು ಈಗಾಗಲೇ ಗೋಚರವಾಗಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ನಂತರ ಪ್ರಥಮ ಬಾರಿಗೆ ಹುಬ್ಬಳ್ಳಿಗೆ ಬಂದಾಗ ಬಹಳಷ್ಟು ಬಿಜೆಪಿ ಶಾಸಕರು ಹಾಗೂ ಪದಾಧಿಕಾರಿಗಳು ಅವರಿಂದ ದೂರವೇ ಉಳಿದರು. ಸೌಜನ್ಯಕ್ಕೂ ಕೆಲವರು ಅವರನ್ನು ಭೇಟಿಯಾಗಿಲ್ಲ. ಭೇಟಿಯಾಗಲೇ ಬೇಕಾದ ಹುದ್ದೆ ನಿಭಾಯಿಸುವವರು ಸಹ ಅವರನ್ನು ಭೇಟಿಯಾಗಿಲ್ಲ. ಇದು ಪ್ರಭಾವ ಹಾಗೂ ಅಭಿಮಾನವನ್ನು ಸೂಚಿಸುತ್ತದೆಯೇ..? ನಮ್ಮ ದೃಷ್ಟಿಯಲ್ಲಿ ಚುನಾವಣೆಯಲ್ಲಿ ಇದರ ಪ್ರಭಾವ ಆಡಳಿತ ಪಕ್ಷದ ಮೇಲೆಯೇ ಆಗುತ್ತದೆ. ಇದು ಹೆಚ್ಚಾಗುತ್ತದೆ ಹೋಗುತ್ತದೆ ಹೊರತು ಕಡಿಮೆಯಾವುದಿಲ್ಲ. ಮಂತ್ರಿ ಮಂಡಲ ರಚನೆಯಾದ ಮೇಲೆ ಇದು ಇನ್ನಷ್ಟು ಹೆಚ್ಚಾಗುತ್ತದೆ.
* ಹುಬಳ್ಳಿ-ಧಾರವಾಡದಲ್ಲಿ ನಿಮ್ಮ ಪಕ್ಷದ ಪ್ರಗತಿ ಹೇಗಿದೆ..? ಚುನಾವಣೆಯಲ್ಲಿ ಜನರನ್ನು ಹೇಗೆ ಮನವರಿಕೆ ಮಾಡುತ್ತೀರಿ..?
ನಾವು ಮುಖ್ಯವಾಗಿ ಅವರಿಗೇ ಹೇಳುವುದೇ ಪರ್ಯಾಯ ರಾಜಕಾರಣ ಹಾಗೂ ಆಡಳಿತದ ಬಗ್ಗೆ. ಜನರು ಎಲ್ಲರ ಅಧಿಕಾರವನ್ನೂ ನೋಡಿದ್ದಾರೆ. ಆದರೆ ನಮಗೆ ಚಾನ್ಸ್ ಸಿಕ್ಕಿಲ್ಲ. ನಾವು ದೆಹಲಿ ಮೂಲಕ ದೇಶಕ್ಕೇ ಪರ್ಯಾಯ ರಾಜಕಾರಣದ ಮಾದರಿ ತೋರಿಸಿದ್ದೇವೆ. ಶಿಕ್ಷಣ, ನೀರು, ವಿದ್ಯುತ್ ಹೀಗೆ ಅನೇಕ ಕ್ಷೇತ್ರಗಳಲ್ಲಿ ಕ್ರಾಂತಿಯನ್ನೇ ಮಾಡಿದ್ದೇವೆ, ಅದೇ ಮಾದರಿಯನ್ನೇ ಮುಂದಿಟ್ಟು ಜನರ ಬಳಿ ಹೋಗುತ್ತಿದ್ದೇವೆ. ಇದನ್ನು ಗುಜರಾತ್‌ನಲ್ಲಿಯೂ ಜನರ ಮುಂದಿಟ್ಟಿದ್ದೆವು. ನಮಗೆ ಅಲ್ಲಿನ ಸ್ಥಳೀಯ ಸಂಸ್ಥೆಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ. ಗುಜರಾತ್ ರಾಜ್ಯದ ಉಸ್ತುವಾರಿ ನಾನೇ ಇದ್ದೆ, ಆಗ ಎಲ್ಲರೂ ನಾವು ಏನೂ ಅಲ್ಲ ಎಂಬಂತೆ ವರ್ತಿಸಿದ್ದರು. ಆದರೆ ನಂತರ ಅನೇಕ ಪಾಲಿಕೆ ಹಾಗೂ ಮುನ್ಸಿಪಲ್ ಚುನಾವಣೆಯಲ್ಲಿ ನಾವು ಉತ್ತಮ ಫಲಿತಾಂಶ ಪಡೆದೆವು. ಇಲ್ಲಿ ನಾವು ಬಹಳ ಮೊದಲೇ ತಯಾರಿ ಮಾಡುತ್ತಿದ್ದೇವೆ. ಜನರಿಗೆ ಜನಾಡಳಿತ ಬಗ್ಗೆಯೇ ಮನವರಿಕೆ ಮಾಡುತ್ತಿದ್ದೇವೆ. ಆಡಳಿತ ಮತ್ತು ಅಧಿಕಾರದ ಮಧ್ಯದ ಅಂತರವನ್ನು ಹೇಳುತ್ತಿದ್ದೇವೆ. ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.
* ನಿಮ್ಮ ಚುನಾವಣೆ ಪ್ರಣಾಳಿಕೆ ಹೇಗಿರುತ್ತದೆ..? ಏನಾದರೂ ಪ್ರಮುಖ ಆಶ್ವಾಸನೆ..?
ಜನರ ಪ್ರಣಾಳಿಕೆಯೇ ನಮ್ಮ ಪ್ರಣಾಳಿಕೆ. ದೆಹಲಿಯಲ್ಲಿ ಜನರ ಪ್ರಣಾಳಿಕೆಯನ್ನೇ ಸರ್ಕಾರದ ಪ್ರಣಾಳಿಕೆ ಮಾಡಿದ್ದೇವೆ. ಇಲಲ್ಲಿಯೂ ಅದನ್ನೇ ಮಾಡುತ್ತೇವೆ. ಜನರಿಗೆ ನಾವು ಹೇಳುವುದಿಷ್ಟೇ. ನಮಗೆ ಅವಕಾಶ ಕೊಡಿ, ನಾವು ಜನಾಡಳಿತ ಕೊಡುತ್ತೇವೆ, ಅಧಿಕಾರ ನಡೆಸುವುದಿಲ್ಲ ಎಂಬ ಭರವಸೆ ಕೊಡುತ್ತೇವೆ.
*ನಿಮ್ಮ ದೃಷ್ಟಿಯಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಏನಾಗಬೇಕಿತ್ತು..? ಯಾಕೆ ಆಗಲಿಲ್ಲ..?
ಹುಬ್ಬಳ್ಳಿ-ಧಾರವಾಡ ಎಷ್ಟು ಅಭಿವೃದ್ಧಿಯಾಗಬೇಕಿತ್ತೋ ಅಷ್ಟು ಅಭಿವೃದ್ಧಿಯಾಗಿಲ್ಲ ಎಂಬುದು ಯಾರಿಗಾದರೂ ಕಂಡುಬರುವ ಅಂಶ. ಅಂದರೆ ಇಲ್ಲಿ ಮೂಲಸೌಕರ್ಯಗಳು ಎಷ್ಟು ಅಭಿವೃದ್ದಿ ಆಗಬೇಕಿತ್ತೋ ಆಗಿಲ್ಲ. ಮತ್ತೊಂದು ಸಮಸ್ಯೆಯಿದೆ. ಇದು ನೇರವಾಗಿ ಕಣ್ಣಿಗೆ ಕಾಣುವುದಿಲ್ಲ. ಅದೆಂದರೆ ಈ ಭಾಗದ ಮೂವರು ಮುಖ್ಯಮಂತ್ರಿಗಳಾದರೂ ಇಲ್ಲಿನ ಜನರು ಉದ್ಯೋಗಕ್ಕೆ ಬೆಂಗಳೂರು, ಮುಂಬೈ ಮತ್ತು ಪುಣೆ ಮೊದಲಾದೆಡೆ ಹೋಗುವುದು ತಪ್ಪಿಲ್ಲ. ಉತ್ತರ ಕರ್ನಾಟಕದ ವಾಣಿಜ್ಯದ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಇದು ಸುತ್ತಮುತ್ತಲಿನವರಿಗೆ ಉದ್ಯೋಗ ಕೊಡುವ ಕೆಲಸ ಮಾಡಬೇಕಿತ್ತು. ಅದು ಹೋಗಲಿ. ಕನಿಷ್ಠ ಪಕ್ಷ ಈ ನಗರದವರೇ ಪ್ರತಿಯೊಂದು ಉದ್ಯೋಗಕ್ಕೂ ಬೇರೆ ನಗರಗಳನ್ನೇ ಆಶ್ರಯಿಸಬೇಕಾಗಿದೆ.
ಉದಾಹರಣೆಗೆ ಹೇಳುವುದಾದರೆ ಇನ್ಫೋಸಿಸ್ ಇಲ್ಲಿಗೆ ಬರುತ್ತದೆ ಎಂದು ಹೇಳಲು ಆರಂಭಿಸಿ ಎಷ್ಟು ವರ್ಷಗಳಾಯಿತು? ಕಟ್ಟಡಗಳಾದವು, ಉದ್ಯೋಗ ಸೃಷ್ಟಿಯಾಗುತ್ತದೆ ಎಂದರು. ಆದರೆ ಈವರೆಗೂ ಇನ್ಫೋಸಿಸ್ ಇಲ್ಲಿಗೆ ಬಂದಿಲ್ಲ.. ಯಾಕೆ ಬಂದಿಲ್ಲ ಎಂಬ ಬಗ್ಗೆ ವಿಚಾರ ಮಾಡುವವರು ವಿಚಾರ ಮಾಡಿದ್ದರೆ ಅದು ಇಷ್ಟೊತ್ತಿಗಾಗಲೇ ಬರುತ್ತಿತ್ತು. ಅದು ಬಂದರೆ ಸುತ್ತಮುತ್ತಲಿನವರಿಗೆ ಹಾಗೂ ನಗರಕ್ಕೆ ನೇರ ಉದ್ಯೋಗ ಹಾಗೂ ಪರ್ಯಾಯ ಉದ್ಯೋಗ ಎಷ್ಟು ಸೃಷ್ಟಿಯಾಗುತ್ತಿತ್ತು. ಇದು ಒಂದು ಉದಾಹರಣೆ ಮಾತ್ರ. ಹುಬ್ಬಳ್ಳಿ-ಧಾರವಾಡದ ಸಾಮರ್ಥ್ಯ ಯಾವುದೋ ಅದರಲ್ಲಿಯೂ ಅವಳಿ ನಗರ ಗುರುತಿಸಿಕೊಂಡಿಲ್ಲ, ಸಣ್ಣ ಕೈಗಾರಿಕೆಗಳು ಇದ್ದಿದ್ದು ಬಂದ್ ಆಗುತ್ತಿವೆ ಎಂದು ಇಲ್ಲಿನವರು ಹೇಳುತ್ತಿದ್ದಾರೆ. ಶಿಕ್ಷಣಕ್ಕೆ ಬೇರೆಬೇರೆ ರಾಜ್ಯಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿಯವರು ಉದ್ಯೋಗಕ್ಕೆ ಬೇರೆಡೆ ಹೋಗುತ್ತಾರೆ. ಇದು ವಿಪರ್ಯಾಸವಲ್ಲವೇ..? ಇಂಥ ಸಂಗತಿಗಳೆಲ್ಲ ನಮಗೆ ಚುನಾವಣಾ ವಿಷಯಗಳೇ. ಹುಬ್ಬಳ್ಳಿ ಬ್ರ್ಯಾಂಡ್ ಇಲ್ಲದ ನಗರವಾಗಿ ರೂಪುಗೊಳ್ಳುತ್ತಿದೆ. ನಾವು ಇದಕ್ಕೆ ಬ್ರ್ಯಾಂಡ್ ಸೃಷ್ಟಿ ಮಾಡುತ್ತೇವೆ.
*ನಿಮಗೆ ಯಾರು ಮತ ಹಾಕುತ್ತಾರೆ.. ಯಾಕೆ ಮತ ಹಾಕುತ್ತಾರೆ..? ಎಷ್ಟು ವಾರ್ಡುಗಳಲ್ಲಿ ಸ್ಪರ್ಧಿಸುತ್ತೀರಿ..?
೧೮ರಿಂದ ೪೫ ವರ್ಷದವರೇ ನಮ್ಮ ಕೋರ್ ಮತದಾರರು. ಉಳಿದವರು ನಮಗೆ ಮತ ಹಾಕುವುದಿಲ್ಲ ಎಂದು ಇದರ ಅರ್ಥವಲ್ಲ. ಆದರೆ ಇವರು ಕೋರ್ ಮತದಾರರು. ನಮ್ಮ ಗುರಿಯೂ ಇವರೇ. ಇವರು ಮನೆಯಲ್ಲಿ ಒಬ್ಬರು ನಮ್ಮ ಪರವಾಗಿ ಪರಿವರ್ತನೆಯಾದರೆ ಅವರು ಮತ್ತಷ್ಟು ಮತಗಳನ್ನು ಪರಿವರ್ತಿಸುತ್ತಾರೆ. ಇದು ನಮ್ಮ ವಿಶ್ವಾಸ ಹಾಗೂ ಅನುಭವ. ಹೊಸ ಮತದಾರರಿಗೆ ಹುಸಿ ಭರವಸೆಗಳು, ಭಾವನಾತ್ಮಕ ವಿಷಯಗಳು ಬೇಕಿಲ್ಲ. ಅವರಿಗೆ ಭವಿಷ್ಯ ಬೇಕು. ಹೀಗಾಗಿ ಅವರು ಯಾರು ರಾಜಕಾರಣ ಮಾಡುವವರು ಹಾಗೂ ಯಾರು ಜನಾಡಳಿತ ನೀಡುವವರು ಎಂದು ವಿಚಾರ ಮಾಡುತ್ತಾರೆ. ನಮಗೆ ಅತ್ಯುತ್ತಮ ಸ್ಪಂದನೆ ಸಿಗುತ್ತಿದೆ. ನಾವು ಎಲ್ಲ ೮೪ ವಾರ್ಡುಗಳಲ್ಲಿಯೂ ಸ್ಪರ್ಧೆ ಮಾಡುತ್ತೇವೆ. ಈಗಾಗಲೇ ಪ್ರತಿ ವಾರ್ಡುಗಳಿಗೆ ೩೦-೪೦ ಅರ್ಜಿಗಳನ್ನು ಸ್ವೀಕರಿಸಿದ್ದೇವೆ. ಪಕ್ಷವು ಅವರ ಕಾರ್ಯಚಟುವಟಿಕೆ, ಅವಳಿ ನಗರದ ಬೆಳವಣಿಗೆ ಬಗ್ಗೆ ಅವರ ಚಿಂತನೆ , ಅವರ ಜನಸಂಪರ್ಕ ಇತ್ಯಾದಿ ಅಂಶಗಳನ್ನು ಗಮನದಲ್ಲಿರಿಸಿ ಅವರಿಗೆ ಟಿಕೆಟ್ ನೀಡುತ್ತದೆ. ಸ್ಪರ್ಧಿಸುವವರಿಂದ ಶಪಥ ಪತ್ರ ಪಡೆದ ನಂತರವೇ ಟಿಕೆಟ್ ಕೊಡುತ್ತೇವೆ.
* ಕರ್ನಾಟಕದ ಮತದಾರರಿಗೆ ನೀವು ಕೊಡುವ ಸ್ಪಷ್ಟ ಹಾಗೂ ದೃಢ ಭರವಸೆ ಯಾವುದು..?
ಕರ್ನಾಟಕದಲ್ಲಿ ಆಡಳಿತ ಮಾಡುವವರು ಕರ್ನಾಟಕದವರೇ ಹೊರತು ಅನ್ಯರಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ. ಕಳೆದ ಕೆಲವರ್ಷಗಳಿಂದ ಕರ್ನಾಟಕದಲ್ಲಿ ಅಧಿಕಾರ ನಡೆಸಿದ ಹಾಗೂ ನಡೆಸುತ್ತಿರುವ ರಾಜಕೀಯ ಪಕ್ಷಗಳ ಅಧಿಕಾರ ದೆಹಲಿಯಿಂದ ಚಲಾಯಿಸಲ್ಪಡುತ್ತಿದೆ. ಪ್ರತಿಯೊಂದಕ್ಕೂ ಹೈಕಮಾಂಡ್ ಮೂಗು ತೂರಿಸುತ್ತಿದೆ. ಇದು ಕರ್ನಾಕಟದ ಆಡಳಿತವನ್ನು ಕನ್ನಡಿಗರೇ ಹೇಗೆ ನಡೆಸಿದಂತೆ ಆಗುತ್ತದೆ? ಪ್ರಾದೇಶಿಕ ಪಕ್ಷ ಕೇವಲ ಕುಟುಂಬಕ್ಕಷ್ಟೇ ಅಧಿಕಾರ ಎಂಬಂತಾಗಿದೆ. ಹೀಗಾಗಿ ನಾವು ಸ್ಪಷ್ಟವಾಗಿ ಹೇಳುತ್ತೇವೆ. ಕರ್ನಾಟಕದ ಆಡಳಿತ ದೆಹಲಿಯಿಂದ ನಡೆಯುವುದಿಲ್ಲ, ಅದು ಕರ್ನಾಟಕದವರಿಂದೇ ನಡೆಯುತ್ತದೆ. ಅದು ಇಲ್ಲಿನ ಜನರಿಂದಲೇ ನಡೆಯುತ್ತದೆ.
* ಬಿಬಿಎಂಪಿ ಚುನಾವಣೆಯಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಹೇಗೆ..?
ಸಂಪೂರ್ಣ. ಎಲ್ಲ ವಾರ್ಡುಗಳಲ್ಲಿಯೂ ಸ್ಪರ್ಧಿಸುತ್ತೇವೆ. ಆದರೆ ಸದ್ಯ ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಸ್ಥಳೀಯ ಸಂಸ್ಥೆ ಚುನಾವಣೆ ಮೂಲಕ ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷ ಬಹಳ ಗಂಭೀರವಾಗಿ ಕರ್ನಾಟಕದಲ್ಲಿ ಹೆಜ್ಜೆ ಇಡುತ್ತಿದೆ. ಮುಂದಿನ ದಿನಗಳಲ್ಲಿ ಇದು ಗೊತ್ತಾಗಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ