ಪಾಕಿಸ್ತಾನದಲ್ಲಿ ಹಣಕಾಸು ಬಿಕ್ಕಟ್ಟು:ತಮ್ಮ ಪ್ರಧಾನಿ ನಿವಾಸವನ್ನೇ ಬಾಡಿಗೆಗೆ ಇಟ್ಟ ಪಾಕಿಸ್ತಾನ ಸರ್ಕಾರ..!

ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್ ಸರ್ಕಾರಿ ನಿವಾಸ ಈಗ ಬಾಡಿಗೆಗೆ ಇದೆ..!
ಈ ನಿವಾಸ ಇಸ್ಲಮಾಬಾದ್​​ನ ರೆಡ್ ಝೋನ್​ ಏರಿಯಾದಲ್ಲಿದೆ. ಹಾಗೇ ಇದನ್ನು ಬಾಡಿಗೆಗೆ ಕೊಡುವ ಬಗ್ಗೆ ​ ಪಾಕಿಸ್ತಾನದ ಫೆಡರಲ್ ಕ್ಯಾಬಿನೆಟ್ಟಿನಲ್ಲಿ ಮಂಗಳವಾರ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಪಾಕಿಸ್ತಾನ ಸರ್ಕಾರ ಹಣದ ಕೊರತೆಯಿಂದ ಬಳಲುತ್ತಿದೆ. ಅದನ್ನು ನೀಗಿಸಲು, ಆದಾಯದ ಮೂಲವಾಗಿ ಈ ಸರ್ಕಾರಿ ನಿವಾಸವನ್ನು ಬಾಡಿಗೆಗೆ ಕೊಡಲಾಗುವುದು ಎಂದು ಕ್ಯಾಬಿನೆಟ್​ ತಿಳಿಸಿದೆ. ಸಾಂಸ್ಕೃತಿಕ, ಫ್ಯಾಷನ್, ಶೈಕ್ಷಣಿಕ ಸೇರಿ ಕೆಲವು ಕಾರ್ಯಕ್ರಮ ಹಾಗೂ ಸಮಾರಂಭಗಳಿಗೆ ಬಾಡಿಗೆ ಕೊಡಲಾಗುವುದು ಎಂದು ತಿಳಿಸಲಾಗಿದೆ.
ಪ್ರಧಾನಿ ಇಮ್ರಾನ್​ ಖಾನ್​ ನಿವಾಸವನ್ನು ಬಾಡಿಗೆ ಕೊಡುವ ಸಂದರ್ಭದಲ್ಲಿ ಅಲ್ಲಿನ ಶಿಸ್ತು-ಶಿಷ್ಟಾಚಾರಗಳು ಉಲ್ಲಂಘನೆ ಆಗದಂತೆ ನೋಡಿಕೊಳ್ಳಲು, ನಿರ್ವಹಣೆ ಮಾಡಲು ಎರಡು ಸಮಿತಿ ರಚಿಸಲಾಗಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಪ್ರಧಾನಮಂತ್ರಿ ಇಮ್ರಾನ್​ ಖಾನ್​ ಅವರ ಸರ್ಕಾರಿ ನಿವಾಸವನ್ನು ಅತ್ಯಾಧುನಿಕ ಶಿಕ್ಷಣ ಸಂಸ್ಥೆಯನ್ನಾಗಿ ಮಾರ್ಪಾಡಿಸುವ ಯೋಜನೆ ಇದೆ ಎಂದು ಮೊದಲ ಬಾರಿಗೆ 2019ರ ಆಗಸ್ಟ್​​ನಲ್ಲಿ, ಪಾಕಿಸ್ತಾನ ತೆಹ್ರೀಕ್​-ಇ-ಇನ್​ಸಾಫ್​ ಸರ್ಕಾರ ಹೇಳಿತ್ತು.
ಪಾಕ್​ನಲ್ಲಿ ವಸಹಾತುಶಾಹಿ ಸಂಸ್ಕೃತಿ ಹೋಗಲಾಡಿಸಲು ಮತ್ತು ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ವೆಚ್ಚವನ್ನು ಕಡಿಮೆ ಮಾಡುವ ದೃಷ್ಟಿಯಿಂದ ರಾಜ್ಯಪಾಲರು ರಾಜಭವನಗಳಲ್ಲಿ ವಾಸಿಸುವಂತಿಲ್ಲ ಎಂದೂ ಸರ್ಕಾರ ಹೇಳಿತ್ತು. ಅದೇ ಸಮಯದಲ್ಲಿ ಇಮ್ರಾನ್ ಖಾನ್​ ಕೂಡ ತಮ್ಮ ಸರ್ಕಾರಿ ಬಂಗಲೆಯನ್ನು ತೊರೆದು, ಇಸ್ಲಮಾಬಾದ್​ನಲ್ಲಿರುವ ಬನಿ ಗಾಲಾದಲ್ಲಿರುವ ತಮ್ಮ ಮನೆಗೆ ಶಿಫ್ಟ್ ಆಗಿದ್ದರು. ಇನ್ನೊಂದು ಆಸಕ್ತಿದಾಯಕ ವಿಚಾರವೆಂದರೆ 2019ರಲ್ಲಿ, ಬ್ರಿಗೇಡಿಯರ್​ ವಾಸೀಮ್​ ಇಫ್ರಿಕಾರ್​ ಚೀಮಾ ಅವರ ಮಗಳ ಮದುವೆಗೆ ಇಮ್ರಾನ್​ ಸರ್ಕಾರಿ ಬಂಗಲೆಯನ್ನು ಬಾಡಿಗೆಗೆ ನೀಡಲಾಗಿತ್ತು. ಆ ಮದುವೆಯಲ್ಲಿ ಇಮ್ರಾನ್​ ಖಾನ್​ ಕೂಡ ಪಾಲ್ಗೊಂಡಿದ್ದರು. ಇನ್ನು ಈ ಬಂಗಲೆಗೆ ನಿರ್ವಹಣೆಗೇ ಏನಿಲ್ಲವೆಂದರೆ 470 ಮಿಲಿಯಲ್ ರೂಪಾಯಿ ಖರ್ಚಾಗುತ್ತದೆ. ಹಾಗಾಗಿ ಅವರು ನಿವಾಸ ತೊರೆದಿದ್ದಾರೆ ಎಂದು ಪಾಕಿಸ್ತಾನದ ಶಿಕ್ಷಣ ಸಚಿವ ಶಫ್ಕತ್ ಮೆಹಮೂದ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement