ಸಚಿವರಿಗೆ ಒಂದೆರಡು ದಿನದಲ್ಲಿ ಖಾತೆ ಹಂಚಿಕೆ, ಶೀಘ್ರದಲ್ಲೇ ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ: ಬೊಮ್ಮಾಯಿ

ಬೆಂಗಳೂರು: ಎಸ್​ಟಿಪಿಎಸ್​​ ಹಣ ಬೇರೆ ಇಲಾಖೆಗೆ ನೀಡುತ್ತಿದ್ದ ಹಿನ್ನೆಲೆ ಶೀಘ್ರದಲ್ಲೇ ಎಸ್​ಟಿ ಸಚಿವಾಲಯ ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನೂತನ ಸಚಿವರೊಂದಿಗೆ ಸಭೆ ನಡೆಸಿದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಸ್​ಟಿ ಸಮುದಾಯದ ಬೇಡಿಕೆಯಂತೆ ಪ್ರತ್ಯೇಕ ಸಚಿವಾಲಯ​ ರಚನೆ ಮಾಡುತ್ತೇವೆ.  ಪರಿಶಿಷ್ಟ ಪಂಗಡ ಸಮುದಾಯದ ಬಹುದಿನಗಳ ಬೇಡಿಕೆಯಂತೆ ಎಸ್.ಟಿ.ಪಿ. ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಪೂರಕವಾಗಿ ಪ್ರತ್ಯೇಕ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವಾಲಯ ಸ್ಥಾಪನೆಗೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಮಹಿಳೆಯರು ಮತ್ತು ಮಕ್ಕಳ ಸಬಲೀಕರಣಕ್ಕೆ ಅಭಿಯಾನ ನಡೆಸುತ್ತೇವೆ. ಅಭಿಯಾನ ನಡೆಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಸಂಪುಟದ ನೂತನ ಸಚಿವರಿಗೆ ಕೊವಿಡ್, ನೆರೆ ವೀಕ್ಷಣೆಗೆ ಜಿಲ್ಲೆ ಹಂಚಿಕೆ ಮಾಡುತ್ತೇವೆ. ಸಚಿವರು ನಾಳೆಯೇ ಜಿಲ್ಲೆಗಳಿಗೆ ತೆರಳಿ ಪರಿಹಾರ ಕಾರ್ಯ ಕೈಗೊಳ್ಳಲಿದ್ದಾರೆ. ಕೊರೊನಾ 3ನೇ ಅಲೆ, ನೆರೆ ವೀಕ್ಷಣೆ ಜೊತೆ ಪರಿಹಾರದ ವ್ಯವಸ್ಥೆ ಮಾಡಲಾಗುತ್ತದೆ. ಸ್ಥಳೀಯವಾಗಿ ಪರಿಹಾರ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದ ಬೊಮ್ಮಾಯಿ ಕೊವಿಡ್ ಟಾಸ್ಕ್​ಫೋರ್ಸ್​ ಪುನಾರಚನೆ ಮಾಡಲಾಗುವುದು. ಸಚಿವರಿಗೆ ಖಾತೆ ಹಂಚಿಕೆ ನಂತರ ಟಾಸ್ಕ್​ಫೋರ್ಸ್​ ರಚನೆ ಆಗಲಿದೆ ಎಂದು ಮಾಹಿತಿ ನೀಡಿದರು.
ಒಂದೆರಡು ದಿನಗಳಲ್ಲಿ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುತ್ತದೆ. ಯಾವುದೇ ಸಚಿವರು ಇಂಥದ್ದೇ ಖಾತೆ ಬೇಕೆಂದು ಆಗ್ರಹಿಸಿಲ್ಲ. ಇಂದಿನ ಸಂಪುಟ ಸಭೆಯಲ್ಲಿ ನೂತನ ಸಚಿವರು ಒತ್ತಾಯಿಸಿಲ್ಲ. ಸಂಪುಟ ರಚನೆಗೆ ಹಿಂದೆ 10-15 ದಿನ ಅಥವಾ ತಿಂಗಳು ಹಿಡಿಯುತ್ತಿತ್ತು. ಆದರೆ, ಈ ಬಾರಿ 3 ದಿನದಲ್ಲಿ ಸಚಿವರ ಪಟ್ಟಿ ಅಂತಿಮ ಮಾಡಿಕೊಂಡು ಬಂದಿದ್ದೇನೆ. ಹೀಗಾಗಿ ಖಾತೆ ಹಂಚಿಕೆಗೆ ಹೆಚ್ಚು ದಿನ ತೆಗೆದುಕೊಳ್ಳುವುದಿಲ್ಲ. ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತೇನೆ. ಯಾರೊಬ್ಬರೂ ಮೊದಲ ಖಾತೆಯಲ್ಲಿ ಮುಂದುವರಿಸಿ ಅಂದಿಲ್ಲ. ಯಾವುದೇ ಖಾತೆ ನೀಡಿದರೂ ನಿಭಾಯಿಸುತ್ತೇವೆ ಎಂದು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿ ಸರಿಯಾಗಿ ಒಂದು ವಾರದ ಬಳಿಕ ಇಂದು (ಆಗಸ್ಟ್ 4) ಸಚಿವ ಸಂಪುಟ ಅಸ್ಥಿತ್ವಕ್ಕೆ ಬಂದಿದೆ. ಹೊಸ ಸಚಿವರಾಗಿ 29 ಮಂದಿ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ರಾಜ್ಯಪಾಲ ಥಾವರಚಂದ ಗೆಹಲೋತ್ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದ್ದಾರೆ.

ಪ್ರಮುಖ ಸುದ್ದಿ :-   ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement