ಶಿವಮೊಗ್ಗ: ಅಡಿಕೆ ಬೇಯಿಸುವ ವೇಳೆ ಆಕಸ್ಮಿಕವಾಗಿ ಕುದಿಯುತ್ತಿದ್ದ ಚೊಗರಿನ ಹಂಡೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ನಗರದ ವಡ್ಡಿನಕೊಪ್ಪದ ನಿವಾಸಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರನ್ನು ರುದ್ರಪ್ಪ ಅವರ ಪುತ್ರ ಜೇನುಕುಮಾರ ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 8ರಂದು ಮನೆ ಸಮೀಪದ ಶೆಡ್ನಲ್ಲಿ ಅಡಿಕೆ ಬೇಯಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಬೆಂದ ಅಡಿಕೆಯನ್ನು ಹಂಡೆಯಿಂದ ಹೊರತೆಗೆದ ಬಳಿಕ ಅದರಲ್ಲಿದ್ದ ಚೊಗರು ತೆಗೆಯುವ ಸಂದರ್ಭದಲ್ಲಿ ಆಯತಪ್ಪಿ ಕುದಿಯುತ್ತಿದ್ದ ಚೊಗರಿನ ಹಂಡೆಯೊಳಗೆ ಜೇನುಕುಮಾರ ಬಿದ್ದಿದ್ದಾರೆ ಎನ್ನಲಾಗಿದೆ.
ತಕ್ಷಣವೇ ಶೆಡ್ನಲ್ಲಿದ್ದ ಕಾರ್ಮಿಕರು ಅವರನ್ನು ಹಂಡೆಯಿಂದ ಹೊರತೆಗೆದಿದ್ದಾರೆ. ಆದಾಗ್ಯೂ, ಅವರ ದೇಹದ ಬಹುಭಾಗ ಸುಟ್ಟುಹೋಗಿತ್ತು ಎನ್ನಲಾಗಿದೆ. ತಕ್ಷಣ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ