ಕೋವಿಡ್‌ ಡೆಲ್ಟಾ ರೂಪಾಂತರಿ ಉಲ್ಬಣ: ಅಮೆರಿಕದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ..!

ವಾಷಿಂಗ್ಟನ್: ಅಮೆರಿಕದಲ್ಲಿ ಡೆಲ್ಟಾ ರೂಪಾಂತರಿ ಉಲ್ಬಣಗೊಂಡಿದ್ದು, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ.
ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ 6 ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದೆ ಎಂದು ಹೇಳಲಾಗಿದೆ.
ಕಳೆದ ಮೂರು ದಿನಗಳಿಂದ ಅಮೆರಿಕದಲ್ಲಿ ಸರಾಸರಿ ದೈನಂದಿನ ಒಂದು ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಇದರೊಂದಿಗೆ ಹೊಸ ಪ್ರಕರಣಗಳ ಪ್ರಮಾಣದಲ್ಲಿ ಶೇ.35ರಷ್ಟು ಏರಿಕೆಯಾಗಿದೆ. ಲೂಯಿಸಿಯಾನ, ಫ್ಲೋರಿಡಾ, ಅರ್ಕಾನ್ಸಾಸ್‌ಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.ಫ್ಲೋರಿಡಾ ರಾಜ್ಯದಲ್ಲಿ ಒಂದೇ ದಿನ 28,317 ಪ್ರಕರಣಗಳು ವರದಿಯಾಗಿವೆ ಎಂದು ಅಮೆರಿಕ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ ತಿಳಿಸಿದೆ.
ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವೂ ಶೇ.40ರಷ್ಟು ಹೆಚ್ಚಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಇದು ಶೇ.18ರಷ್ಟು ಹೆಚ್ಚಾಗಿದೆ. ಕೊರೊನಾ ವೈರಸ್ ಸೋಂಕಿನ ಡೆಲ್ಟಾ ಪ್ರಭೇದ ವೈರಸ್‌ ಕುರಿತು ಈವರೆಗೂ ತಿಳಿದಿರುವ ಲಕ್ಷಣಗಳಿಗಿಂತಲೂ ಹೆಚ್ಚು ಗಂಭೀರ ಕಾಯಿಲೆಗೆ ಕಾರಣವಾಗಬಹುದು ಮತ್ತು ಚಿಕನ್‌ಪಾಕ್ಸ್‌ನಂತೆ ಬಹಳ ಸುಲಭವಾಗಿ ಹರಡಬಹುದು ಎಂದು ಅಮೆರಿಕ ಆರೋಗ್ಯ ಪ್ರಾಧಿಕಾರದ ಆಂತರಿಕ ದಾಖಲೆಗಳನ್ನು ಉಲ್ಲೇಖಿಸಿ ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಡೆಲ್ಟಾ ತಳಿ ತಗುಲಿದ ವ್ಯಕ್ತಿಗಳು ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದರೂ ಅವರು ಲಸಿಕೆ ಪಡೆಯದ ಜನರಷ್ಟೇ ಪ್ರಮಾಣದಲ್ಲಿ ರೋಗ ಹರಡುತ್ತಾರೆ. ಹೀಗಾಗಿ ಅದರ ಹರಡುವಿಕೆ ಅಪಾಯಕಾರಿಯಾಗಿದೆ ಎಂದು ಸಿಡಿಸಿ ನಿರ್ದೇಶಕಿ ಡಾ. ರೋಚೆಲ್ಲೆ ಪಿ ವಾಲೆನ್ಸ್ಕಿ ತಿಳಿಸಿದ್ದಾರೆ.
ಡೆಲ್ಟಾ ತಳಿ ಹೆಚ್ಚು ಪ್ರಸಾರ ಸಾಮರ್ಥ್ಯ ಹೊಂದಿದೆ. ಇದು ಮೆರ್ಸ್, ಸಾರ್ಸ್, ಎಬೋಲಾ, ಸಾಮಾನ್ಯ ಶೀತ, ವಿಷಮ ಶೀತ ಮತ್ತು ಸ್ಮಾಲ್‌ಪಾಕ್ಸ್‌ ಹಾಗೂ ಚಿಕನ್‌ಪಾಕ್ಸ್‌ಗಿಂತಲೂ ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement