ಮೈಸೂರು: ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಸ್ನೇಹಿತ ಪೊಲೀಸರಿಗೆ ಘಟನೆ ಹೇಗೆ ನಡೆಯಿತು ಎಂದು ಮಾಹಿತಿ ನೀಡಿದ್ದಾನೆ.
ಯುವಕ ಮತ್ತು ಯುವತಿ ಜಾಗಿಂಗ್ಗೆ ಹೋದಾಗ ದುಷ್ಕೃತ್ಯ ನಡೆದಿದೆ ಎಂದು ಹೇಳಲಾಗಿದ್ದು, ತನ್ನ ಮೇಲೂ ಹಲ್ಲೆ ನಡೆದಿರುವುದಾಗಿ ಯುವಕ ಹೇಳಿಕೊಂಡಿದ್ದಾನೆ.
ಸ್ನೇಹಿತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಬಳಿಕ ನನ್ನ ತಂದೆಗೆ ಕರೆ ಮಾಡಿ 3 ಲಕ್ಷ ರೂ. ಹಣ ತರಿಸುವಂತೆ ಒತ್ತಾಯಿಸಿದರು ಎಂದು ಸಂತ್ರಸ್ತೆಯ ಸ್ನೇಹಿತ ಹೇಳಿಕೆ ನೀಡಿದ್ದಾನೆ.
ಆಗಸ್ಟ್ 24ರ ಸಂಜೆ 7.25 ರಿಂದ 7.30ರ ಸುಮಾರಿಗೆ ಜೆಎಸ್ಎಸ್ ಆಯುರ್ವೇದಿಕ್ ಕಾಲೇಜಿನ ಮುಂದಿನ ವಾಟರ್ ಟ್ಯಾಂಕ್ ಬಳಿ ಕಚ್ಚಾ ರಸ್ತೆಯಲ್ಲಿ ನಾವಿಬ್ಬರೂ ಹೋಗಿದ್ದೆವು. ಅದು ನಾನು ಯಾವಾಗಲೂ ಜಾಗಿಂಗ್ಗೆ ಹೋಗುವ ಸ್ಥಳ. ಅಲ್ಲಿ ಹೋಗಿ ಬೈಕ್ ನಿಲ್ಲಿಸಿದಾಗ 25 ರಿಂದ 30 ವರ್ಷದ ಸುಮಾರು 6 ಮಂದಿ ಬಂದರು. ಬಲ ಭಾಗದಿಂದ ದೊಣ್ಣೆಯಿಂದ ಹಲ್ಲೆ ಮಾಡಿದರು. ನಂತರ ಸ್ನೇಹಿತೆಯನ್ನು ಪೊದೆಗಳಿರುವ ಜಾಗಕ್ಕೆ ಎಳೆದುಕೊಂಡು ಹೋದರು. ಅದರಲ್ಲಿ ತೆಳ್ಳಗಿರುವ ಒಬ್ಬ ನನ್ನ ಹಣೆಗೆ ಕಲ್ಲಿನಿಂದ ಹೊಡೆದ. ಆಗ ಪ್ರಜ್ಞೆ ಹೋಗಿತ್ತು. 15 ನಿಮಿಷದ ನಂತರ ಪ್ರಜ್ಞೆ ಬಂತು. ಆಗ 4 ಜನ ನನ್ನ ಮುಂದೆ ನಿಂತು ನನ್ನ ತಂದೆಗೆ ಕಾಲ್ ಮಾಡಿಸಿ 3 ಲಕ್ಷ ರೂಪಾಯಿ ಹಣ ಕೊಡುವಂತೆ ಒತ್ತಾಯ ಮಾಡಿದರು. ನಾನು ಗೆಳತಿ ಎಲ್ಲಿ ಎಂದು ಕೇಳಿದಾಗ ಇಬ್ಬರು ಆಕೆಯನ್ನು ಎಳೆದುಕೊಂಡು ಬಂದು ನನ್ನ ಪಕ್ಕ ಕೂರಿಸಿದರು. ಅವಳು ತೀವ್ರವಾಗಿ ಗಾಯಗೊಂಡು ನಿತ್ರಾಣಗೊಂಡಿದ್ದಳು. ಅವಳಿಗೆ ತರಚಿದ ಗಾಯಗಳಾಗಿದ್ದವು. ಎಂದು ಪೊಲೀಸರಿಗೆ ಸಂತ್ರಸ್ತೆಯ ಸ್ನೇಹಿತ ಹೇಳಿಕೆ ನೀಡಿದ್ದಾನೆ.
ಮಂಗಳವಾರ ರಾತ್ರಿ7.30ರ ಸುಮಾರಿಗೆ ಸುಮಾರಿಗೆ ವಿದ್ಯಾರ್ಥಿನಿ ತನ್ನ ಸ್ನೇಹಿತನ ಜೊತೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮೋರಿ ಮೇಲೆ ಕುಳಿತಿದ್ದಳು. ಈ ವೇಳೆ ಪಾನಮತ್ತ ಯುವಕರ ತಂಡವೊಂದು ಅಲ್ಲಿಗೆ ಬಂದು ಯುವಕನಿಗೆ ಕಲ್ಲಿನಿಂದ ಹಲ್ಲೆ ಮಾಡಿ ವಿದ್ಯಾರ್ಥಿನಿಯನ್ನು ದೂರ ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಂತರ ನಿತ್ರಾಣವಾಗಿದ್ದ ಇವರನ್ನು ನೋಡಿದ ಯುವಕನ ಸ್ನೇಹಿತರು ಕೂಡಲೇ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಅಲ್ಲದೆ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ


ನಿಮ್ಮ ಕಾಮೆಂಟ್ ಬರೆಯಿರಿ