ಬಂಧಿತ ಐವರು ಆರೋಪಿಗಳಲ್ಲಿ ಒಬ್ಬ ಅಪ್ರಾಪ್ತ; ಪೊಲೀಸ್ ತಂಡಕ್ಕೆ 5 ಲಕ್ಷ ರೂ. ಬಹುಮಾನ- ಡಿಜಿ ಐಜಿಪಿ ಪ್ರವೀಣ್​ ಸೂದ್

ಮೈಸೂರು: ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಶನಿವಾರ ಐವರು ಆರೋಪಿಗಳನ್ನು ಬಂಧಿಸಿದ್ದು, ಅವರಲ್ಲಿ ಒಬ್ಬ ಅಪ್ರಾಪ್ತ ಬಾಲಕ ಎಂದು ಕರ್ನಾಟಕ ಡಿಜಿಪಿ ಹೇಳಿದ್ದಾರೆ. ಅಲ್ಲದೆ ಪ್ರಕರಣ ಭೇದಿಸಿದ್ದಕ್ಕಾಗಿ ಪೊಲೀಸ್ ತಂಡಕ್ಕೆ 5 ಲಕ್ಷ ಬಹುಮಾನ ಘೋಷಿಸಿದ್ದಾರೆ.
ಮೈಸೂರಿನ ಐಜಿಪಿ ಕಚೇರಿಯಲ್ಲೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಜಿಪಿ ಪ್ರವೀಣ್ ಸೂದ್​, ಎಲ್ಲ ಆರೋಪಿಗಳು ಕೂಲಿ ಕಾರ್ಮಿಕರು. ಅವರು ಆಗಾಗ್ಗೆ ಮೈಸೂರಿಗೆ ಭೇಟಿ ನೀಡುತ್ತಿದ್ದರು. ಅಪರಾಧದ ದಿನ, ಐವರು ಮೈಸೂರಿನ ಹೊರವಲಯದಲ್ಲಿರುವ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮದ್ಯಪಾನ ಮತ್ತು ಪಾರ್ಟಿ ಮಾಡುತ್ತಿದ್ದರು. ತಾಂತ್ರಿಕ ಮತ್ತು ವೈಜ್ಞಾನಿಕ ಸುಳಿವುಗಳ ಸಹಾಯದಿಂದ ಅವರನ್ನು ಸೆರೆಹಿಡಿಯಲಾಯಿತು. ಕಿಡಿಗೇಡಿಗಳು 3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದಕ್ಕೆ ಈ ಘೋರ ಕೃತ್ಯ ಎಸಗಿದ್ದಾರೆ’‘ ಎಂದು ಹೇಳಿದರು.
ಕೆಲವು ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾರೆ; ಆದಾಗ್ಯೂ, ಇದನ್ನು ಇನ್ನೂ ಪರಿಶೀಲಿಸಬೇಕಾಗಿದೆ. ನೆರೆಯ ತಮಿಳುನಾಡಿನಲ್ಲಿ ಅವರು ಕೆಲವು ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂದು ಕೆಲವು ಮಾಹಿತಿಗಳಿವೆ ಎಂದು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಬಂಧಿತ ಎಲ್ಲರೂ ತಿರುಪುರ ಮೂಲದವರು. ಆಗಾಗ ಮೈಸೂರು ನಗರಕ್ಕೆ ಬರುತ್ತಿದ್ದರು. 7ನೇ ತರಗತಿ 8 ತರಗತಿ ಓದಿದ ಇವರೆಲ್ಲರೂ ಕಾರ್ಮಿಕರಾಗಿದ್ದಾರೆ.ಅದರಲ್ಲಿ ಒಬ್ಬ ಬಾಲಕ 17 ವರ್ಷದವನಿದ್ದಾನೆ ಎನ್ನುವುದು ಪ್ರಾಥಮಿಕ ಮಾಹಿತಿಯಲ್ಲಿ ಲಭ್ಯವಾಗಿದೆ. ಆದರೆ, ಅದು ಇನ್ನೂ ಖಚಿತವಾಗಬೇಕಿದೆ ಎಂದು ಅವರು ಹೇಳಿದ್ದಾರೆ.
ಇದರಲ್ಲಿ ಓರ್ವ ಬಾಲಾಪರಾಧಿ ಇದ್ದರೂ ಈ ಹಿಂದಿನ ಪ್ರಕರಣಗಳಂತೆ ಆಗುವುದಿಲ್ಲ. ಏಕೆಂದರೆ, ಬಾಲಕಾಯ್ದೆಯಲ್ಲೂ ಬದಲಾವಣೆಯಾಗಿದೆ. ಗಂಭೀರ ಪ್ರಕರಣದಲ್ಲಿ 16 ವರ್ಷ ಆಗಿದ್ದರೆ ನ್ಯಾಯಾಲಯದಲ್ಲಿ ವಿಚಾರಣೆ ಆಗಲಿದೆ. 6 ಆರೋಪಿಗಳ ಪೈಕಿ ಓರ್ವ ತಲೆಮರೆಸಿಕೊಂಡಿದ್ದಾನೆ. ಇವರೆಲ್ಲರೂ ಕೆಲಸಕ್ಕೆ ಮೈಸೂರಿಗೆ ಬಂದಿದ್ದು, ವಾಪಸ್ಸು ಹೋಗುವಾಗ ಕುಡಿದು ಪಾರ್ಟಿ ಮಾಡುತ್ತಿದ್ದರು ಎಂದು ಗೊತ್ತಾಗಿದೆ. ಆರೋಪಿಗಳನ್ನು ಬಂಧಿಸಿದ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಆರೋಪಿಗಳು ತಮಿಳುನಾಡಿನಿಂದ ಮೈಸೂರಿನ ಬಂಡೀಪಾಳ್ಯ ಮಾರುಕಟ್ಟೆಗೆ ಬಂದು ಹೋಗುತ್ತಿದ್ದರು. ಚಾಲಕನಾಗಿದ್ದ ಆರೋಪಿ ಆಗಾಗ ಮೈಸೂರಿಗೆ ಬಂದುಹೋಗ್ತಿದ್ದ. ಅವರೆಲ್ಲ ಎಲೆಕ್ಟ್ರಿಕಲ್, ಕಾರ್ಪೆಂಟಿಗ್, ಡ್ರೈವರ್​ ಕೆಲಸ ಮಾಡುತ್ತಿದ್ದರು. ಮೈಸೂರಿನಿಂದ ವಾಪಸ್ ಹೋಗುವಾಗ ಪಾರ್ಟಿ ಮಾಡ್ತಿದ್ದರು. ಮೈಸೂರಿನ ಹೊರವಲಯದಲ್ಲಿ ಮದ್ಯ ಸೇವಿಸಿ ಹೋಗ್ತಿದ್ದರು. ಅದೇ ರೀತಿ ಆಗಸ್ಟ್ 24ರಂದು ನಿರ್ಜನ ಪ್ರದೇಶದಲ್ಲಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿಗೆ ಯುವಕ, ಯುವತಿ ಹೋಗಿದ್ರು. ಜೋಡಿಯನ್ನು ದರೋಡೆ ಉದ್ದೇಶದಿಂದ 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದಕ್ಕೆ ಈ ಘೋರ ಕೃತ್ಯ ಎಸಗಿದ್ದಾರೆ’ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆದರೆ, ಇದೇ ಅಂತಿಮವಲ್ಲ. ಇನ್ನೂ ಹೆಚ್ಚಿನ ತನಿಖೆಯ ಬಳಿಕವಷ್ಟೆ ನಿಖರವಾಗಿ ಹೇಳಬಹುದು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement