ತಾಲಿಬಾನಿಗೆ ಮೊದಲ ಶಾಕ್‌..:9/11 ದಿನದ ಅಧಿಕಾರ ಪದಗ್ರಹಣ ಸಮಾರಂಭಕ್ಕೆ ಬರಲು ಆಹ್ವಾನಿತರ ನಕಾರ; ಕಾರ್ಯಕ್ರಮ ದಿಢೀರ್‌ ಮುಂದಕ್ಕೆ..!

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚಿಸಲು ಪ್ರಯತ್ನಿಸುತ್ತಿರುವ ತಾಲಿಬಾನ್ ಸೆ.11ರ ಶನಿವಾರ ನಡೆಯಬೇಕಿದ್ದ ಅಧಿಕಾರ ಸ್ವೀಕಾರ ಸಮಾರಂಭವನ್ನು ದಿಢೀರ್‌ ಮುಂದೂಡಿದೆ.
ಇದೇ ವೇಳೆ ಹಮೀದ್ ಕರ್ಜಾಯ್ ವಿಮಾನ ನಿಲ್ದಾಣದ ಹೆಸರು ಬದಲಿಸಿದ ತಾಲಿಬಾನ್ ಆಡಳಿತ ಅದನ್ನು ಕಾಬೂಲ್ ಇಂಟರ್‌ನ್ಯಾಷನಲ್ ಏರ್ಪೋರ್ಟ್ ಎಂದು ಘೋಷಿಸಿದೆ.
ಸೆ.೧೧ರಂದು ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಈ ಹಿಂದೆ ತಾಲಿಬಾನ್‌ ಘೋಷಿಸಿತ್ತು. ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ ದಿನದಂದು ಅಫ್ಘಾನಿಸ್ತಾನದಲ್ಲಿ ತನ್ನ ಹೊಸ ಸರ್ಕಾರ ಅಸ್ತಿತ್ವಕ್ಕೆ ತರುವುದು ತಾಲಿಬಾನ್ ಉದ್ದೇಶವಾಗಿತ್ತು.ಆದರೆ ಅಫ್ಘಾನಿಸ್ತಾನದಲ್ಲಿ ಇಂದು ನಡೆಯಬೇಕಿದ್ದ ತಾಲಿಬಾನ್ ಸರ್ಕಾರದ ಪದಗ್ರಹಣ ಸಮಾರಂಭವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಸೆಪ್ಟೆಂಬರ್ 11 ದಿನವಾದ ಇಂದು ಅಮೆರಿಕ ಅವಳಿ ಕಟ್ಟಡಗಳ ಮೇಲೆ ಉಗ್ರರ ದಾಳಿಯಾಗಿ 20 ವರ್ಷವಾಗಿದೆ. ಈ ಶೋಕದ ದಿನದಂದು ತಾಲಿಬಾನ್ ಸರ್ಕಾರ ರಚಿಸುತ್ತಿರುವುದಕ್ಕೆ ಅಮೆರಿಕ ಆಕ್ಷೇಪಿಸಿದೆ. ಕಾರ್ಯಕ್ರಮ ರದ್ದು ಮಾಡುವಂತೆ ಅಮೆರಿಕ ಹಾಗೂ ನ್ಯಾಟೋ ಮೈತ್ರಿ ರಾಷ್ಟ್ರಗಳು ಕತಾರ್ ದೇಶದ ಮೇಲೆ ಒತ್ತಡ ಹಾಕಿವೆ. ಕತಾರ್​ನ ಒತ್ತಡಕ್ಕೆ ಮಣಿದು ತಾಲಿಬಾನ್ ತನ್ನ ಸರ್ಕಾರದ ಪದಗ್ರಹಣ ಸಮಾರಂಭವನ್ನ ಮುಂದೂಡಬೇಕಾಯಿತು ಎಂದು ಹೇಳಲಾಗುತ್ತಿದೆ. ಜೊತೆಗೆ ಪದಗ್ರಹಣ ಸಮಾರಂಭಕ್ಕೆ ತಾಲಿಬಾನ್ ಆಹ್ವಾನ ನೀಡಿದ ರಾಷ್ಟ್ರಗಳು ಪಾಲ್ಗೊಳ್ಳಲು ಹಿಂದೇಟು ಹಾಕಿವೆ.
ತಾಲಿಬಾನ್ ತನ್ನ ಸರ್ಕಾರ ರಚನೆ ಕಾರ್ಯಕ್ರಮಕ್ಕೆ ಪಾಕಿಸ್ತಾನ್‌, ಚೀನಾ, ರಷ್ಯಾ, ಇರಾನ್, ಟರ್ಕಿ ಮತ್ತು ಕತಾರ್ ದೇಶಗಳಿಗೆ ಆಹ್ವಾನ ನೀಡಿತ್ತು. ರಷ್ಯಾ ದೇಶ ತಾನು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವುದಾಗಿ ಮೊದಲು ಹೇಳಿತ್ತು. ಆದರೆ ಕೊನೆಯ ಕ್ಷಣದಲ್ಲಿ ರಷ್ಯಾ ತನ್ನ ನಿರ್ಧಾರ ಬದಲಿಸಿ ತಾನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿತು. ಇದು ತಾಲಿಬಾನ್‌ಗೆ ಅಮೆರಿಕ ವಿರೋಧಿಯಾದ ರಷ್ಯ ನೀಡಿದ ಮೊದಲನೇ ಆಘಾತವಾಗಿದೆ. ಯಾಕೆಂದರೆ ಸೆಪ್ಟೆಂಬರ್ 11 ದಿನವಾದ ಇಂದು ಅಮೆರಿಕ ಅವಳಿ ಕಟ್ಟಡಗಳ ಮೇಲೆ ಉಗ್ರರ ದಾಳಿ ದಿನವೇ ಅಧಿಕಾರ ಗ್ರಹಣ ಕಾರ್ಯಕ್ರಮ ನಿಗದಿ ಮಾಡಿದರೆ ಅಮೆರಿಕ ವಿರೋಧಿ ರಷ್ಯಾ ಪಾಲ್ಗೊಳ್ಳಬಹುದು ಎಂದು ತಾಲಿಬಾನ್‌ ನಿರೀಕ್ಷಿಸಿತ್ತು. ಆದರೆ ರಷ್ಯಾ ತಾಲಿಬಾನ್‌ ನಿರೀಕ್ಷೆ ಹುಸಿ ಮಾಡಿತು. ಇದೇವೇಳೆ ಚೀನಾ ಮೊದಲಾ ದೇಶಗಳೂ ಕೂಡ ಸೆಪ್ಟೆಂಬರ್ 11 ರಂದು ತಮ್ಮ ಪಾಲ್ಗೊಳ್ಳುವಿಕೆಯನ್ನ ಖಚಿತಪಡಿಸಲಿಲ್ಲ. ಹೀಗಾಗಿ, ತಾಲಿಬಾನ್ ಅನಿವಾರ್ಯವಾಗಿ ತನ್ನ ಸರ್ಕಾರದ ಪದಗ್ರಹಣ ಕಾರ್ಯಕ್ರಮ ಮುಂದೂಡಿತು ಎಂದು ಹೇಳಲಾಗುತ್ತಿದೆ.

ಕುತೂಹಲವೆಂದರೆ, 2001, ಸೆಪ್ಟೆಂಬರ್ 11ರಂದು ಅಲ್​-ಖೈದಾ ಉಗ್ರಗಾಮಿಗಳು ಅಮೆರಿಕದ ಎರಡು ಕಟ್ಟಡಗಳ ಮೇಲೆ ವಿಮಾನಗಳನ್ನ ಅಪ್ಪಳಿಸಿದ್ದರು. ಈ ಘೋರ ಘಟನೆಯಲ್ಲಿ ಸಾವಿರಾರು ಜನರು ಅಸುನೀಗಿದ್ದರು. ಈ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಒಸಾಮ ಬಿನ್ ಲಾಡೆನ್ ಹಾಗೂ ಅಲ್-ಖೈದಾ ಉಗ್ರರಿಗೆ ಆಗ ಅಫ್ಘಾನಿಸ್ತಾನದಲ್ಲಿ ಅಧಿಕಾರದಲ್ಲಿದ್ದ ತಾಲಿಬಾನ್‌ ಆಶ್ರಯ ಕೊಟ್ಟಿತ್ತು. ಅಮೆರಿಕ ಕ್ಷಿಪ್ರ ಸೇನಾ ಕಾರ್ಯಾಚರಣೆ ನಡೆಸಿ ತಾಲಿಬಾನ್ ಪಡೆಯನ್ನ ಸೋಲಿಸಿ ಅಧಿಕಾರದಿಂದ ಕೆಳಗಿಳಿಸಿತ್ತು. ಹೀಗಾಗಿ, ತಾಲಿಬಾನ್ ಪತನದ ಹಿಂದೆ 9/11 ದಿನ ಅಡಗಿದೆ. ಇದೇ ದಿನ ತಾಲಿಬಾನ್ ತನ್ನ ಸರ್ಕಾರದ ಪದಗ್ರಹಣ ಮಾಡಲು ಹೊರಟಿದ್ದು ತನ್ನ ವಿರುದ್ಧ ತಾಲಿಬಾನ್ ಯಾವುದೋ ಸಂದೇಶ ರವಾನಿಸುತ್ತಿರುವಂತಿದೆ ಎಂಬುದು ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳ ಅನುಮಾನಕ್ಕೆ ಕಾರಣವಾಯಿತು.ಹೀಗಾಗಿ, ತಾಲಿಬಾನ್ ಹಾಗೂ ಅಮೆರಿಕ ಮಧ್ಯೆ ಕೊಂಡಿಯಾಗಿರುವ ಕತಾರ್ ಮೂಲಕ ಅಮೆರಿಕದ ಸಂದೇಶ ರವಾನೆಯಾಗಿ ಕೊನೆಕ್ಷಣದಲ್ಲಿ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎನ್ನಲಾಗುತ್ತಿದೆ.
ಈ ಮಧ್ಯೆ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬರುವುದಕ್ಕೆ ಮುನ್ನವೇ ಆಫ್ಘನ್ ರಾಜಧಾನಿ ಕಾಬೂಲ್ ವಿಮಾನನಿಲ್ದಾಣದ ಹೆಸರನ್ನು ಬದಲಾವಣೆ ಮಾಡಲಾಗಿದೆ. ಹಮೀದ್ ಕರ್ಜಾಯ್ ಏರ್‌ಪೋರ್ಟ್ ಹೆಸರು ಬದಲಿಸಿದ ತಾಲಿಬಾನ್ ಸರ್ಕಾರ ಅದನ್ನು ಕಾಬೂಲ್ ಇಂಟರ್ನ್ಯಾಷನಲ್ ಏರ್ಪೋರ್ಟ್ ಎಂದು ಪರಿವರ್ತಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement