ನವದೆಹಲಿ: ಸ್ವಿಟ್ಜರ್ ಲ್ಯಾಂಡ್ ದೇಶದ ಜೊತೆ ಏರ್ಪಡಿಸಿಕೊಂಡ ಸ್ವಯಂಚಾಲಿತ ಮಾಹಿತಿ ವಿನಿಮಯ ಒಪ್ಪಂದದಡಿ ಭಾರತವು ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ತನ್ನ ಪ್ರಜೆಗಳು ಸ್ವಿಸ್ ಬ್ಯಾಂಕುಗಳಲ್ಲಿ ಹೊಂದಿರುವ ಖಾತೆಗಳ ವಿವರಗಳನ್ನು ಈ ತಿಂಗಳಲ್ಲಿ ಪಡೆಯಲಿದೆ.
ಇದೇ ಮೊದಲ ಬಾರಿಗೆ ಭಾರತೀಯ ಆ ದೇಶದಲ್ಲಿ ಹೊಂದಿರುವ ರಿಯಲ್ ಎಸ್ಟೇಟ್ ಆಸ್ತಿಗಳ ವಿವರಗಳು ಕೂಡಾ ಬಹಿರಂಗಗೊಳ್ಳಲಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ವಿದೇಶಗಳಲ್ಲಿ ಭಾರತೀಯರು ಕೂಡಿಹಾಕಿರುವ ಕಪ್ಪುಹಣದ ವಿರುದ್ಧ ಭಾರತ ಸರ್ಕಾರ ಹೂಡಿರುವ ಸಮರದಲ್ಲಿ ಇದು ಮಹತ್ವದ ಮೈಲುಗಲ್ಲಾಗಲಿದೆ ಎಂದು ಹೇಳಲಾಗಿದೆ. ಸ್ವಿಟ್ಜರ್ ಲ್ಯಾಂಡ್ ನಲ್ಲಿ ಭಾರತೀಯರ ಒಡೆತನದ ಫ್ಲಾಟುಗಳು, ಅಪಾರ್ಟ್ಮೆಂಟುಗಳು ಹಾಗೂ ವಸತಿಕಟ್ಟಡಗಳ ಸಂಪೂರ್ಣ ಮಾಹಿತಿ ಕೂಡಾ ಲಭ್ಯವಾಗಲಿದೆ. ಈ ಆಸ್ತಿಗಳಿಂದ ದೊರೆಯುವ ಆದಾಯ ಕೂಡಾ ಬಹಿರಂಗವಾಗಲಿದೆ. ಈ ಆಸ್ತಿಗಳಿಗಾಗಿ ಅವರು ಪಾವತಿಸಬೇಕಾಗಿರುವ ತೆರಿಗೆಗಳ ಬಗ್ಗೆ ಪರಿಶೋಧನೆ ನಡೆಸಲು ಅವಕಾಶ ದೊರೆಯಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸ್ವಿಟ್ಜರ್ ಲ್ಯಾಂಡಿನ ಬ್ಯಾಂಕುಗಳಲ್ಲಿ ಭಾರತೀಯರ ಖಾತೆಗಳು ಹಾಗೂ ಇತರ ಆರ್ಥಿಕ ಸಂಪತ್ತುಗಳ ಕುರಿತಾಗಿ ಭಾರತದ ಜೊತೆ ಮಾಹಿತಿ ಹಂಚಿಕೊಳ್ಳಲಿರುವುದು ಇದು ಮೂರನೇ ಸಲವಾಗಿದೆ. ಆದರೆ ಭಾರತೀಯರು ಅಲ್ಲಿ ಹೊಂದಿರುವ ರಿಯಲ್ಎಸ್ಟೇಟ್ ಆಸ್ತಿಗಳ ವಿವರ ಹಂಚಿಕೊಳ್ಳುವುದು ಇದೇ ಮೊದಲ ಬಾರಿಗೆ.
ಆದರೆ ಲಾಭೋದ್ದೇಶರಹಿತ ಅಥವಾ ಇತರ ಪ್ರತಿಷ್ಠಾನಗಳಿಗೆ ನೀಡಲಾದ ದೇಣಿಗೆಗಳ ವಿವರಗಳನ್ನು, ಅಥವಾ ಬಿಟ್ಕಾಯಿನ್ನಂತಹ ಡಿಜಿಟಲ್ ಕರೆನ್ಸಿ ಗಳಲ್ಲಿ ಹೂಡಿಕೆಯ ಕುರಿತ ಮಾಹಿತಿಗಳು ‘ಸ್ವಯಂಚಾಲಿತ ಮಾಹಿತಿ ವಿನಿಮಯ ಚೌಕಟ್ಟಿನ’ ಕಾರ್ಯವ್ಯಾಪ್ತಿಯಲ್ಲಿ ಇಲ್ಲ ಎಂದು ಅದು ಹೇಳಿದೆ.
ಸ್ವಿಟ್ಜರ್ ಲ್ಯಾಂಡ್ ಆಸ್ತಿಗಳಲ್ಲಿ ಭಾರತೀಯರ ಹೂಡಿಕೆಯ ಹಣವು ಅಕ್ರಮವಾದುದೆಂಬ ತಪ್ಪುಕಲ್ಪನೆಯನ್ನು ನಿವಾರಿಸಲು ಈ ನಡೆಯು ನೆರವಾಗಲಿದೆಯೆಂದು ತಜ್ಞರು ಹಾಗೂ ಆ ದೇಶಕ್ಕೆ ಹೂಡಿಕೆಗಳನ್ನು ಆಕರ್ಷಿಸುವ ಉದ್ಯಮದಲ್ಲಿ ತೊಡಗಿರುವವರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಸ್ವಿಟ್ಜರ್ ಲ್ಯಾಂಡ್ ತನ್ನ ದೇಶದ ಬ್ಯಾಂಕುಗಳಲ್ಲಿ ಗ್ರಾಹಕರು ಇಟ್ಟಿರುವ ಹಣದ ಕುರಿತ ವಿವರಗಳನ್ನು ಹಂಚಿಕೊಳ್ಳುತ್ತಿರುವ ಪ್ರಮುಖ ದೇಶಗಳಲ್ಲಿ ಭಾರತ ಕೂಡಾ ಒಂದು. ಈಗಾಗಲೇ ಸ್ವಿಸ್ ಬ್ಯಾಂಕುಗಳಲ್ಲಿ ಸಂಪತ್ತು ಕೂಡಿಹಾಕಿರುವ ನೂರಕ್ಕೂ ಅಧಿಕ ಭಾರತೀಯ ನಾಗರಿಕರು ಹಾಗೂ ಸಂಸ್ಥೆಗಳ ವಿವರಗಳನ್ನು ಸ್ವಿಸ್ ಅಧಿಕಾರಿಗಳು ಭಾರತಕ್ಕೆ ಹಸ್ತಾಂತರಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ