ವಿಧಾನಸಭೆಯಲ್ಲಿ ಜಿಪಂ, ತಾಪಂ ಚುನಾವಣೆ ಮುಂದೂಡಿಕೆ ವಿಧೇಯಕ ಮಂಡನೆ

posted in: ರಾಜ್ಯ | 0

ಬೆಂಗಳೂರು:ಜಿಲ್ಲಾ ಪಂಚಾಯತ ಮತ್ತು ತಾಲೂಕಾ ಪಂಚಾಯತ ಚುನಾವಣೆಗಳನ್ನು ಮುಂದೂಡುವ ನಿಟ್ಟಿನಲ್ಲಿ ಸರ್ಕಾರ ಅಧಿಕೃತ ಹೆಜ್ಜೆಯಿಟ್ಟಿದೆ. ವಿಧಾನಸಭೆಯಲ್ಲಿ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ವಿಧೇಯಕ ತಿದ್ದುಪಡಿ ವಿಧೇಯಕ ಮಂಡನೆ ಮಾಡಲಾಗಿದೆ.
ಈ ತಿದ್ದುಪಡಿಯು ಪಂಚಾಯತ್ ರಾಜ್ ಸೀಮಾ ನಿರ್ಣಯಿಸಲು ಆಯೋಗ ರಚನೆಗೆ ಅವಕಾಶ ಮಾಡಿಕೊಡುವ ವಿಧೇಯಕವಾಗಿದೆ. ಜಿಲ್ಲಾ ಪಂಚಾಯತ ಕ್ಷೇತ್ರಗಳ ಮರು ವಿಂಗಡಣೆ, ವಾರ್ಡ್ ಮತ್ತು ಕ್ಷೇತ್ರಗಳ ಗಡಿ ಗುರುತಿಸಲು ಆಯೋಗ ರಚಿಸಲು ಸರ್ಕಾರ ಚಿಂತನೆ ನಡೆಸಿದೆ.
ಇದಲ್ಲದೆ, ಬೆಂಗಳೂರಿನಲ್ಲಿ ಮನೆ ಕಟ್ಟಿಸುವವರಿಗೆ ಮಳೆನೀರು ಕೊಯ್ಲು ಕಡ್ಡಾಯ ಮಾಡುವ ಪ್ರಸ್ತಾಪ ಇರುವ ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ ತಿದ್ದುಪಡಿ ವಿಧೇಯಕವನ್ನು ಸರ್ಕಾರ ಇಂದು (ಮಂಗಳವಾರ) ವಿಧಾನಸಭೆಯಲ್ಲಿ ಮಂಡಿಸಿದೆ. ವಿಧೇಯಕವು 30X40 ಚದರಡಿ ಮೇಲ್ಪಟ್ಟ ನಿವೇಶನದಲ್ಲಿ ಮನೆ ಕಟ್ಟುವವರಿಗೆ ಮಳೆ ನೀರು ಕೊಯ್ಲು ಮಾಡುವುದು ಕಡ್ಡಾಯ ಮಾಡುತ್ತದೆ. 40X60 ಚದರಡಿ ಮೇಲ್ಪಟ್ಟ ನಿವೇಶನದಲ್ಲಿರುವ ಕಟ್ಟಡಗಳಿಗೂ ಮಳೆ ನೀರು ಕೊಯ್ಲು ಕಡ್ಡಾಯ ಮಾಡಲಿದೆ.
ವಿಧಾನಸಭೆಯಲ್ಲಿ ಒಟ್ಟು 10 ವಿಧೇಯಕಗಳನ್ನು ಮಂಡಿಸಲಾಗಿದೆ. ಬೆಂಗಳೂರು ನೀರು‌ ಸರಬರಾಜು ಮತ್ತು ಗ್ರಾಮಸಾರ ವ್ಯವಸ್ಥೆ ತಿದ್ದುಪಡಿ ವಿಧೇಯಕ, ಬಂಧಿಗಳ ಗುರುತಿಸುವಿಕೆ ವಿಧೇಯಕ, ದಂಡ ಪ್ರಕ್ರಿಯಾ ಸಂಹಿತೆ ವಿಧೇಯಕ, ಬಂಧೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ, ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ತಿದ್ದುಪಡಿ ವಿಧೇಯಕ, ಸ್ಟ್ಯಾಂಪ್ ತಿದ್ದುಪಡಿ ವಿಧೇಯಕ, ಖಾದಿ ಮತ್ತು ಗ್ರಾಮೋದ್ಯೋಗಗಳ ತಿದ್ದುಪಡಿ ವಿಧೇಯಕ, ಪೌರಸಭೆಗಳ ಮತ್ತು ಇತರೆ ಕೆಲವು ಕಾನೂನು ತಿದ್ದುಪಡಿ ವಿಧೇಯಕ, ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ ವಿಧೇಯಕ, ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಗಳನ್ನು ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ