ಮಡಿಕೇರಿ: ಕಲ್ಲು ಬಂಡೆ-ಬಳ್ಳಿ ನಡುವೆ ಸಿಲುಕಿ ಮರಿಯಾನೆ ಸಾವು

ಮಡಿಕೇರಿ: ಆಹಾರ ಅರಸಿಕೊಂಡು ಕಾಡಿನಿಂದ ನಾಡಿಗೆ ಬಂದ ಕಾಡಾನೆ ಮರಿಯೊಂದು ಮರದ ಬಳ್ಳಿ ಮತ್ತು ಕಲ್ಲು ಬಂಡೆ ನಡುವೆ ಸಿಲುಕಿ ಮೃತಪಟ್ಟ ಘಟನೆ ಮದೆನಾಡು ಸಮೀಪದ ಬೆಟ್ಟತ್ತೂರು ಗ್ರಾಮದಲ್ಲಿ ನಡೆದ ವರದಿಯಾಗಿದೆ.
ಆನೆ ಮರಿಯ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕಳೆದ ೪ ದಿನಗಳ ಹಿಂದೆಯೇ ಮೃತಪಟ್ಟಿರಬಹುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದಾರೆ. ಹಾಳುಬಿದ್ದಿರುವ ಖಾಸಗಿ ತೋಟ ಒಂದರ ಒಳಗಿನಿಂದ ಭಾರೀ ದುರ್ವಾಸನೆ ಬರುತ್ತಿರುವ ಕುರಿತು ಗ್ರಾಮಸ್ಥರೊಬ್ಬರು ಅರಣ್ಯ ಇಲಾಖೆಗೆ ವಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತೋಟದಲ್ಲಿ ಹುಡುಕಾಟ ನಡೆಸಿದ ಸಂದರ್ಭ ಮರದ ಬೇರು ಮತ್ತು ಬಂಡೆಯ ನಡುವೆ ಆನೆ ಮರಿ ಸಿಲುಕಿ ಮೃತಪಟ್ಟಿರುವುದು ಕಂಡು ಬಂದಿದೆ ಎಂದು ಆಂದೋಲನ.ಇನ್‌ ವರದಿ ಮಾಡಿದೆ.
ಆನೆ ಮರಿ ಗುಂಪು ಪಟ್ಟಿಘಾಟ್ ಮೀಸಲು ಅರಣ್ಯದಿಂದ ಬೆಟ್ಟತ್ತೂರು ಭಾಗಕ್ಕೆ ಬಂದಿರಬಹುದು. ಮಳೆ ಇದ್ದ ಹಿನ್ನೆಲೆಯಲ್ಲಿ ಕಾಲು ಜಾರಿ ಬೇರು ಹಾಗೂ ಬಂಡೆ ನಡುವೆ ಸಿಲುಕಿಕೊಂಡು ಹೊರ ಬರಲಾರದೆ ಮೃತಪಟ್ಟಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಕಳೇಬರ ಪತ್ತೆಯಾದ ಸ್ಥಳದಲ್ಲಿ ಇತರ ಆನೆಗಳು ಓಡಾಡಿರುವ ಕುರುಹುಗಳು ಕೂಡ ಕಂಡು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿ ಹೇಳಿದೆ.
ಮರಿ ಆನೆ ಅಂದಾಜು ೨ ವರ್ಷ ಪ್ರಾಯದ್ದಾಗಿದೆ ಎಂದು ತಿಳಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಡಿಸಿಎಫ್ ಪೂವಯ್ಯ ಅವರ ಸೂಚನೆುಂಂತೆ ಮಡಿಕೇರಿ ವನ್ಯಜೀವಿ ವಿಭಾಗದ ಎಸಿಎಫ್ ದಯಾನಂದ, ಆರ್‌ಎಫ್‌ಓ ಮಧುಸೂದನ್, ಡಿಆರ್‌ಎಫ್‌ಓ ಬಾಬು ರಾಥೋಡ್, ಅರಣ್ಯ ರಕ್ಷಕರಾದ ಯತೀಶ್, ಸಂದೇಶ್, ಚರಣ್ ಮತ್ತು ಕ್ಯೂಆರ್‌ಟಿ ತಂಡದ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಪ್ರಮುಖ ಸುದ್ದಿ :-   ಇಂದು ಸಿಎಂ ಆಗಿ ಡಿಕೆ ಶಿವಕುಮಾರ ಪ್ರಮಾಣ ವಚನ: ಪರಮೇಶ್ವರ ಡಿಸಿಎಂ ; 13 ಶಾಸಕರಿಗೆ ಸಚಿವ ಸ್ಥಾನ ; ಪಟ್ಟಿ ಇಲ್ಲಿದೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement