ಅಫ್ಘಾನಿಸ್ತಾನದಲ್ಲಿ ಕ್ರೂರ ಶಿಕ್ಷೆ ಶುರು; ಗುಂಡಿಕ್ಕಿ ಕೊಂದು ನಗರದ ಮಧ್ಯೆ ಹೆಣ ನೇತಾಕಿದ ತಾಲಿಬಾನಿಗಳು..!

ಕಾಬೂಲ್: ಅಫ್ಘಾನಿಸ್ತಾನ (Afghanistan)ದಲ್ಲಿ ಬದಲಾಗಿದ್ದೇವೆ ಎಂದು ಹೇಳಿಕೊಂಡು ಬರುತ್ತಿರುವ ತಾಲಿಬಾನಿಗಳ ಅಸಲಿ ಮುಖ ಅನಾವರಣಗೊಳ್ಳುತ್ತಿದೆ. ಆದರೆ ಅವರ ಒಂದೊಂದೇ ನೈಜ ಬಣ್ಣ ಬಯಲಾಗುತ್ತಿದೆ.
ಇಂದು ಪಶ್ಚಿಮ ಅಫ್ಘಾನಿಸ್ತಾನದ ಹೆರತ್ ನಗರದಲ್ಲಿ (Herat city in western Afghanistan) ತಾಲಿಬಾನಿಗಳ ಕ್ರೂರ ಶಿಕ್ಷೆಗೆ ಜನ ಬೆಚ್ಚಿಬಿದ್ದಿದ್ದಾರೆ. ಶನಿವಾರ ನಾಲ್ಕು ಜನರಿಗೆ ಗುಂಡು ಹೊಡೆದಿರುವ ತಾಲಿಬಾನಿಗಳು ಅದರಲ್ಲಿ ಒಬ್ಬನ ಶವವನ್ನು ಕ್ರೇನ್ ಗೆ ಕಟ್ಟಿ ನಗರದ ಹೃದಯಭಾಗದಲ್ಲಿ ನೇತು ಹಾಕಿದ್ದಾರೆ. ಸುಮಾರು ನಾಲ್ಕೈದು ಗಂಟೆಗಳ ಕಾಲ ಶವ ನೇತಾಡುತ್ತಿತ್ತು ಎಂದು ವರದಿಯಾಗಿದೆ.
ಹೆರಾತ್ ನಗರದ ನಿವಾಸಿಯಾಗಿರುವ ವಜೀರ್ ಅಹಮದ್ ಸಿದ್ಧಿಕಿ ಘಟನೆಯನ್ನು ಮಾಧ್ಯಮವೊಂದರ ಜೊತೆ ಹಂಚಿಕೊಂಡಿದ್ದಾರೆ. ತಾಲಿಬಾನಿ ಪೊಲೀಸರು ನಾಲ್ಕು ಶವಗಳನ್ನು ಅಡ್ಡದಾರಿಯಿಂದ ಎಳೆದು ತಂದರು. ಒಂದು ಶವವನ್ನು ಕ್ರೇನ್ ಗೆ ಕಟ್ಟಿ ತೂಗು ಹಾಕಿದರು. ಇನ್ನುಳಿದ ಮೂರು ಶವಗಳನ್ನು ನಗರದ ಮತ್ತೊಂದು ಭಾಗಕ್ಕೆ ತೆಗೆದುಕೊಂಡು ಹೋಗಲಾಯ್ತು. ಶವದ ಮೇಲೆ ಕೆಲ ಬರಹವುಳ್ಳ ಭಿತ್ತಿ ಪತ್ರ ಅಂಟಿಸಲಾಗಿತ್ತು ಎಂದು ಘಟನೆ ಬಗ್ಗೆ ಅವರು ಹೇಳಿದ್ದಾರೆ.
ತಾಲಿಬಾನಿಗಳು ಮಾತ್ರ ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಂತಹ ಕ್ರೂರ ಶಿಕ್ಷೆಗಳು ಜನರಲ್ಲಿ ಭಯ ಮೂಡಿಸುತ್ತಿದೆ. ತಾಲಿಬಾನಿಗಳ ಶಿಕ್ಷೆ ಬಗ್ಗೆ ಮಾತನಾಡಿರುವ ವಜೀರ್, ತಪ್ಪಿಗೆ ಶಿಕ್ಷೆ ನೀಡಬೇಕು ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಈ ರೀತಿ ಅಮಾನವೀಯವಾಗಿ ಶಿಕ್ಷಿಸುವುದು ಖಂಡನೀಯ ಕ್ರಮ ಎಂದು ಸದ್ಯದ ಪರಿಸ್ಥಿತಿಯ ಕರಾಳತೆಯನ್ನು ಬಿಚ್ಚಿಟ್ಟಿದ್ದಾರೆ.
ತಾಲಿಬಾನಿಗಳು ನಾಲ್ಕು ಶವಗಳನ್ನು ಪಿಕಪ್ ವಾಹನದಲ್ಲಿ ತಂದಿದ್ದಾರೆ. ನೋಡ ನೋಡುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಂತೆ ಮೈಕ್ ಮೂಲಕ ತಾಲಿಬಾನಿಗಳು ಮಾತನಾಡಿ ಈ ನಾಲ್ವರು ಅಪಹರಣ ಪ್ರಕರಣದಲ್ಲಿ ಭಾಗಿಯಾಗಿದ್ದರು. ಹಾಗಾಗಿ ಎಲ್ಲರನ್ನೂ ಕೊಲ್ಲಲಾಗಿದೆ ಎಂದು ಹೇಳಿ ಒಂದು ಶವವನ್ನು ನೇತು ಹಾಕಿದ್ದಾರೆ. ಆದರೆ ಮೃತರು ಎಲ್ಲಿಯವರು? ಅವರನ್ನು ಹೇಗೆ ಕೊಂದರು ಎಂಬ ಬಗ್ಗೆ ಖಚಿತ ಮಾಹಿತಿ ನೀಡಿಲ್ಲ
ಈ ಮಧ್ಯೆ ನ್ಯೂಸ್ ಏಜೆನ್ಸಿಗೆ ಸಂದರ್ಶನ ನೀಡಿರುವ ತಾಲಿಬಾನಿ ಮುಖಂಡ ಮುಲ್ಲಾ ನೂರೂದ್ಧೀನ್ (Mullah Nooruddin Turabi), ತಪ್ಪು ಮಾಡೋರನ್ನ ಕೊಲ್ಲುವುದು ಮತ್ತು ಅವರ ಅಂಗಾಂಗಗಳನ್ನು ಕತ್ತರಿಸುವ ಶಿಕ್ಷೆಗಳು ಶೀಘ್ರದಲ್ಲೇ ಮರಳಲಿವೆ. ಕೈ ಕತ್ತರಿಸುವಂತಹ ಶಿಕ್ಷೆಗಳು ಜನರ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು. ಬಹುಶಃ ಈ ಬಾರಿ ಶಿಕ್ಷೆ ಸಾರ್ವಜನಿಕವಾಗಿ ಇರಲಾರದು ಹೇಳಿರುವ ಬಗ್ಗೆ ಸುದ್ದಿಗಳು ಪ್ರಕಟವಾಗಿತ್ತು. ಆದರೆ ಅವರು ಹೇಳಿದ ಮಾರನೇ ದಿನವೇ ಸಾರ್ವಜನಿಕವಾಗಿ ಸತ್ತವರ ಹೆಣವನ್ನು ನೇತು ಹಾಕಲಾಗಿದೆ.

ಪ್ರಮುಖ ಸುದ್ದಿ :-   ಸಿಂಗಾಪುರದಲ್ಲಿ ಮತ್ತೆ ವಿಜೃಂಭಿಸುತ್ತಿರುವ ಕೋವಿಡ್‌-19 ; 6 ದಿನಗಳಲ್ಲಿ 25,900 ಪ್ರಕರಣಗಳು ದಾಖಲು : ಮಾಸ್ಕ್‌ ಧರಿಸಲು ಶಿಫಾರಸು

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement