ಕೇಂದ್ರ ಸರ್ಕಾರದಿಂದ ಶೀಘ್ರವೇ ಹೊಸ ಸಹಕಾರಿ ನೀತಿ ಪ್ರಕಟ: ಕೇಂದ್ರ ಸಚಿವ ಅಮಿತ್ ಶಾ ಘೋಷಣೆ

ನವದೆಹಲಿ: ಭಾರತದ ಗ್ರಾಮೀಣ ಸಮಾಜವನ್ನು ಉತ್ತೇಜಿಸುವ ಹೊಸ ಸಹಕಾರಿ ನೀತಿಯನ್ನು ಕೇಂದ್ರ ಸರ್ಕಾರ ಶೀಘ್ರವೇ ಘೋಷಿಸಲಿದೆ ಮತ್ತು ಸಹಕಾರ ಚಳವಳಿಯನ್ನು ಬಲಪಡಿಸಲು ಕೇಂದ್ರವು ರಾಜ್ಯಗಳೊಂದಿಗೆ ನಿಕಟವಾಗಿ ಕೆಲಸ ಮಾಡಲಿದೆ ಎಂದು ಕೇಂದ್ರದ ಗೃಹ ಹಾಗೂ ಸಹಕಾರ ಖಾತೆ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.
ಇಲ್ಲಿ ನಡೆದ ಮೊದಲ ರಾಷ್ಟ್ರೀಯ ಸಹಕಾರ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಸುಮಾರು 91 ಪ್ರತಿಶತ ಹಳ್ಳಿಗಳು ಸಣ್ಣ ಅಥವಾ ದೊಡ್ಡ ಸಹಕಾರಿ ಸಂಸ್ಥೆಗಳನ್ನು ಹೊಂದಿವೆ ಎಂದು ಹೇಳಿದರು.
ಮುಂದಿನ ಐದು ವರ್ಷಗಳಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಂಖ್ಯೆಯನ್ನು (ಪಿಎಸಿ) 3 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಷಾ ಇದೇ ಸಂದರ್ಭದಲ್ಲಿ ಘೋಷಿಸಿದರು.
ಸಹಕಾರ ಸಚಿವಾಲಯವನ್ನು ಸ್ಥಾಪಿಸುವುದರ ಹಿಂದೆ ಗ್ರಾಮೀಣ ಪ್ರದೇಶಗಳಿಗೆ, ಗ್ರಾಮೀಣ ಭಾಗದಿಂದ ಅತ್ಯಂತ ವಂಚಿತರಿಗೆ ಅಭಿವೃದ್ಧಿ ತಲುಪುವಂತೆ ಮಾಡುವುದು ಪ್ರಧಾನಿ ಮೋದಿಯವರ ಉದ್ದೇಶ ಅಡಗಿದೆ ಎಂದು ಹೇಳಿದ ಅವರು, 2021 ರಲ್ಲಿ ಕೇಂದ್ರ ಬಜೆಟ್ ನಲ್ಲಿ ಸಹಕಾರ ಸಚಿವಾಲಯದ ರಚನೆಯನ್ನು ಸರ್ಕಾರ ಘೋಷಿಸಿತ್ತು ಎಂದರು.
ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುವಾಗ ಸರ್ಕಾರವು ಹೊಸ ಸಹಕಾರಿ ನೀತಿ ಆರಂಭಿಸಲಿದೆ, ಇದು ಭಾರತದ ಗ್ರಾಮೀಣ ಸಮಾಜವನ್ನು ಉತ್ತೇಜಿಸುತ್ತದೆ … ಇಂದು, ದೇಶದ ಸುಮಾರು 91 ಪ್ರತಿಶತ ಹಳ್ಳಿಗಳು ಸಣ್ಣ ಅಥವಾ ದೊಡ್ಡ ಸಹಕಾರಿ ಸಂಸ್ಥೆಗಳನ್ನು ಹೊಂದಿವೆ” ಎಂದು ಶಾ ಹೇಳಿದರು.
ಸಹಕಾರ (ಸಚಿವಾಲಯ) ದೇಶದ ಅಭಿವೃದ್ಧಿಗೆ ಬಹಳ ಮಹತ್ವದ ಕೊಡುಗೆ ನೀಡಬಲ್ಲದು. ನಾವು ಹೊಸದಾಗಿ ಯೋಚಿಸಬೇಕು, ಹೊಸದಾಗಿ ರೂಪಿಸಬೇಕು, ಕೆಲಸದ ವ್ಯಾಪ್ತಿಯನ್ನು ವಿಸ್ತರಿಸಬೇಕು ಮತ್ತು ಅದರಲ್ಲಿ ಪಾರದರ್ಶಕತೆಯನ್ನು ತರಬೇಕು” ಎಂದು ಅವರು ಒತ್ತಿ ಹೇಳಿದರು.
ಸಹಕಾರಿ ಸಂಸ್ಥೆಗಳು ದೇಶದ ಅಭಿವೃದ್ಧಿಯಲ್ಲಿ ಸಾಕಷ್ಟು ಕೊಡುಗೆ ನೀಡಬಲ್ಲವು ಮತ್ತು ಇದು ಭಾರತವನ್ನು 5 ಟ್ರಿಲಿಯನ್ ಅಮೆರಿಕನ್‌ ಡಾಲರ್‌ ಆರ್ಥಿಕತೆಯನ್ನಾಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಅಮಿತ್‌ ಶಾ ಹೇಳಿದರು.
ದೇಶದ ಅಭಿವೃದ್ಧಿಯಲ್ಲಿ ಅಮೂಲ್ ಮತ್ತು ಲಿಜ್ಜತ್ ಪಾಪದ್ ನಂತಹ ಸಹಕಾರ ಸಂಘಗಳ ಕೊಡುಗೆಯನ್ನು ಎತ್ತಿ ತೋರಿಸಿದ ಶಾ, ಅವುಗಳು ಕ್ರಮವಾಗಿ 202-2021 ರಲ್ಲಿ 53,000 ಕೋಟಿ ಮತ್ತು 16,00 ಕೋಟಿ ರೂ. ದಾಟಿದೆ. ಮತ್ತು ಸಹಕಾರಿ ಸಂಘಗಳ ಯಶಸ್ಸಿನಲ್ಲಿ ಮಹಿಳೆಯರ ದೊಡ್ಡ ಪಾತ್ರವಿದೆ ಎಂಬುದನ್ನು ಒತ್ತಿ ಹೇಳಿದರು.
ಇಂದು ಹೆಚ್ಚಿನ ಸಂಖ್ಯೆಯ ಮಹಿಳೆಯರು ಮತ್ತು ರೈತರು ಈ ಎರಡು ಸಹಕಾರಿ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು ಅವರ ಜೀವನೋಪಾಯವನ್ನು ಗಳಿಸುತ್ತಿದ್ದಾರೆ. 36 ಲಕ್ಷ ರೈತರು ಅಮುಲ್ ಜೊತೆ ಸಂಬಂಧ ಹೊಂದಿದ್ದಾರೆ ಮತ್ತು 45,000 ಮಹಿಳೆಯರು ಲಿಜ್ಜತ್ ಪಾಪಡ್‌ ಜೊತೆ ಸಂಬಂಧ ಹೊಂದಿದ್ದಾರೆ” ಎಂದು ಶಾ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಶಾಲೆಯಲ್ಲೇ ಹೊಡೆದಾಡಿಕೊಂಡ ಪ್ರಾಂಶುಪಾಲೆ-ಶಿಕ್ಷಕಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement