ಬೆಂಗಳೂರು: ಬೆಂಗಳೂರು ನಗರದಲ್ಲಿ ಮತ್ತೊಂದು ಮೂರು ಅಂತಸ್ತಿನ ಕಟ್ಟಡ ಕುಸಿದುಬಿದ್ದ ಘಟನೆ ನಡೆದಿದೆ. ಕೆಎಂಎಫ್ ಕ್ವಾರ್ಟರ್ಸ್ ನೊಳಗಿರುವ 50 ವರ್ಷಗಳಷ್ಟು ಹಳೆಯ ಕಟ್ಟಡ ಕುಸಿದುಬಿದ್ದಿದೆ. ಇಂದು (ಮಂಗಳವಾರ) ಬೆಳಿಗ್ಗೆ ಒಂಭತ್ತರ ಸುಮಾರಿಗೆ ಈ ಘಟನೆ ನಡೆದಿದೆ.ನಗರದ ಡೇರಿ ಸರ್ಕಲ್ ಬಳಿಯಿರುವ ಬಮೂಲ್ ನೌಕರ ಕ್ವಾರ್ಟರ್ಸ್ ಇದಾಗಿದೆ.
ಇದು ನಿನ್ನೆ ಬಿದ್ದಿದ್ದ ಕಟ್ಟಡದಿಂದ ಅರ್ಧ ಕಿಮೀ ದೂರದಲ್ಲಿದೆ.ಕಟ್ಟಡ ಕುಸಿಯಲು ಆರಂಭವಾಗುತ್ತಿದ್ದಂತೆ ಕೆಎಂಎಫ್ ಸಿಬ್ಬಂದಿ ಹಾಗೂ ಕುಟುಂಬಸ್ಥರು ಮನೆಯಿಂದ ಹೊರ ಓಡಿದ್ದಾರೆ. ಇದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೂ ಘಟನೆಯಲ್ಲಿ ನಾಲ್ವರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ತಲುಪಿದ್ದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಟ್ಟಡ ಕುಸಿತದ ವೇಳೆ ಸಿಕ್ಕಿಬಿದ್ದಿದ್ದ ಎರಡು ಶ್ವಾನಗಳನ್ನು ರಕ್ಷಿಸಲಾಗಿದೆ. ಕಟ್ಟಡ ಬೀಳುವ ಸೂಚನೆ ಸಿಕ್ಕ ಕೂಡಲೇ ಪೋಷಕರು ಮಕ್ಕಳನ್ನು ಹೊರಗೆ ಕರೆದುಕೊಂಡು ಹೊರಗೆ ಓಡಿದ್ದಾರೆ. ರಕ್ಷಿಸಿದ್ದಾರೆ. ಹೀಗಾಗಿ ಭಾರೀ ಅನಾಹುತ ತಪ್ಪಿದೆ.
ಕಟ್ಟಡದ ಎರಡನೇ ಅಂತಸ್ತಿನಲ್ಲಿ ತಂದೆ, ತಾಯಿ ಮತ್ತು ಮಗು ಸಿಲುಕಿಕೊಂಡಿದ್ದರು. ಮಗುವನ್ನ ಉಳಿಸಲು ಎರಡನೇ ಅಂತಸ್ತಿನಿಂದ ಕೆಳಗೆ ಎಸೆಯಲಾಗಿದೆ. ಕೆಳಗಡೆ ನಿಂತಿದ್ದ ಜನ ಮಗುವನ್ನ ತಕ್ಷಣ ಹಿಡಿದಿದ್ದಾರೆ ಎಂದು ಹೇಳಲಾಗಿದೆ.ಹೆಚ್ಚಿನ ವಿವರ ತಿಳಿದುಬರಬೇಕಿದೆ.
ನಾಳೆ ಕೆಎಂಎಫ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
.


ನಿಮ್ಮ ಕಾಮೆಂಟ್ ಬರೆಯಿರಿ