
ಬೆಂಗಳೂರು: ಕರ್ನಾಟಕ ಸರ್ಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನೀಡುವ “ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ” 2020 ಮತ್ತು 2021 ನೇ ಸಾಲಿಗೆ ಎರಡು ವರ್ಷಗಳ ಪ್ರಶಸ್ತಿ ಪ್ರಕಟಿಸಿದೆ.
ಕೋವಿಡ್- 19ರ ಹಿನ್ನಲೆಯಲ್ಲಿ ಕಳೆದ ವರ್ಷದ ಪ್ರಶಸ್ತಿಯನ್ನು ಸರ್ಕಾರ ಪ್ರಕಟಿಸಿರಲಿಲ್ಲ, ಈ ವರ್ಷ ಕೋವಿಡ್ ಪ್ರಕರಣ ಕಡಿಮೆಯಾಗುತ್ತಾ ಬಂದಿರುವ ಹಿನ್ನೆಲೆಯಲ್ಲಿ, ಸಕಾರವು ಈ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಆಯ್ಕೆ ಸಮಿತಿಯು 2020 ರ ಸಾಲಿಗೆ ಬಾಗಲಕೋಟೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ “ಶ್ರೀಮತಿ ಮೀರಾಬಾಯಿ ಕೊಪ್ಪಿಕರ್” ಮತ್ತು 2021 ನೇ ಸಾಲಿಗೆ “ಶ್ರೀ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಸಿದ್ಧಗಂಗಾ ಮಠವನ್ನು ಪ್ರಶಸ್ತಿಗೆ ಆಯ್ಕೆಮಾಡಿದೆ.
ಅಕ್ಟೋಬರ್ 2ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿಯಂದು ಬೆಂಗಳೂರಿನ ಗಾಂಧಿಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ತಲಾ ಐದು ಲಕ್ಷ ರೂ. ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಗುತ್ತದೆ.
ಶ್ರೀ ಸಿದ್ದಗಂಗಾ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಸಿದ್ದಗಂಗಾ ಮಠ:
ಪರಮಪೂಜ್ಯ ಡಾ: ಶಿವಕುಮಾರ ಸ್ವಾಮೀಜಿಯವರ ಮಹದಾಶಯದಂತೆ ಸತತವಾಗಿ 80 ವರ್ಷಗಳ ಕಾಲ ಅನ್ನದಾಸೋಹ ಹಾಗೂ ಅಕ್ಷರ ದಾಸೋಹದ ತವರಾಗಿ ಜಾತಿ-ಧರ್ಮ ಬೇಧವಿಲ್ಲದೇ, ಪ್ರಾಂತ್ಯ-ಪ್ರದೇಶ ತಾರತಮ್ಯ ಮಾಡದೇ ಲಕ್ಷಾಂತರ ಮಕ್ಕಳಿಗೆ ಅನ್ನ, ಆಶ್ರಯ ಮತ್ತು ವಿದ್ಯೆಯನ್ನು ದಾನ ಮಾಡಿದ, ರಾಷ್ಟ್ರದಲ್ಲೇ ಪ್ರತಿಷ್ಠಿತ ಸಂಸ್ಥೆ ಎಂದು ಹೆಸರಾದ ಶ್ರೀ ಸಿದ್ದಗಂಗಾ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಸಿದ್ದಗಂಗಾ ಮಠವನ್ನು ಆಯ್ಕೆ ಮಾಡಲಾಗಿದೆ.
ಮೀರಾಬಾಯಿ ಕೊಪ್ಪಿಕರ್:
ಮೀರಾಬಾಯಿ ಕೊಪ್ಪಿಕರ್, ಹುಬ್ಬಳ್ಳಿಯ ಅತ್ಯಂತ ಶ್ರೀಮಂತರಾಗಿದ್ದ ಕೊಪ್ಪಿಕರ ವಂಶದ ಕುಡಿ. ಸದ್ಯ ಇವರಿಗೆ 96 ವರ್ಷ. ಈಗ ಅವರು ಮುಧೋಳದಲ್ಲಿರುವ ವಾತ್ಸಲ್ಯ ಧಾಮದಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಪಕ್ಕಾ ಗಾಂಧಿವಾದಿಯಾಗಿದ್ದ ಇವರು ಇತ್ತೀಚಿನವರೆಗೂ ತಾವೇ ನೂಲು ನೇಯ್ದು ಅದರಲ್ಲಿ ವಸ್ತ್ರವನ್ನು ಮಾಡಿಕೊಳ್ಳುತ್ತಿದ್ದರು. ಈಗ ವಯಸ್ಸಾದ ನಿಮಿತ್ತ ನೇಯ್ಗೆ ಮಾಡುತ್ತಿಲ್ಲ.
ಗಾಂಧಿವಾದಿಯಾಗಿರುವ ಮೀರಾಬಾಯಿ ಕೊಪ್ಪಿಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಸಬರಮತಿ ಆಶ್ರಮದಲ್ಲಿ ಇದ್ದರು. ವಿನೋಬಾ ಭಾವೆಯವರ ಜೊತೆಗೂಡಿ ಭೂದಾನ ಚಳವಳಿಯಲ್ಲಿ ಪಾಲ್ಗೊಂಡು, ಕರ್ನಾಟಕದಿಂದ ಒಟ್ಟು 40 ಸಾವಿರ ಎಕರೆ ಭೂಮಿಯನ್ನು ದಾನ ಮಾಡಿಸುವಲ್ಲಿ ಯಶಸ್ವಿಯಾದವರು.
ಯಾರಿಂದಲೂ ಏನನ್ನೂ ಅಪೇಕ್ಷೆ ಇಲ್ಲ. ಇವರ ಮೂಲ ಧ್ಯೇಯ “ಸಮಾಜಕ್ಕೆ ಏನನ್ನಾದರೂ ಕೊಡಬೇಕು. ಏನನ್ನೂ ಬಯಸಬಾರದು” ಎಂಬುದು. ಸಾವಯವ ಕೃಷಿ ಮಾಡುತ್ತಿದ್ದ ಇವರು ತಾವೇ ಬೆಳೆದ ವಸ್ತುಗಳನ್ನು ಮಾರಿ ಅದರಲ್ಲಿ ಬಂದ ಆದಾಯದಿಂದ ಜೀವನ ಮಾಡುತ್ತಿದ್ದಾರೆ.
ವಾತ್ಸಲ್ಯ ಧಾಮ” ಮುಧೋಳದಲ್ಲಿ ಅವರು 2.5 ಎಕರೆ ಜಾಗ ವಿಸ್ತಾರವಾಗಿದೆ. ಭೂಮಿ ಕೊಂಡು ಅದರಲ್ಲಿ ಆಶ್ರಮ ನಿರ್ಮಿಸಲಾಗಿದೆ. ಆರಂಭದಲ್ಲಿ 20 ಜನರಿದ್ದರು. ಈಗ ಮೂರು ಜನರಷ್ಟೇ ವಾಸ ಮಾಡುತ್ತಾರೆ. ಮೀರಾಬಾಯಿ ಕೊಪ್ಪಿಕರ್ ಅವರನ್ನು ಸಂದರ್ಶಿಸಲು ಅತಿಥಿಗಳು ಆಗಾಗ್ಗೆ ಬರುತ್ತಿರುತ್ತಾರೆ.
2008 ರಲ್ಲಿ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯನ್ನು ಇವರಿಗೆ ಕೊಡಲು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ಆಶ್ರಮಕ್ಕೆ ಆಗಮಿಸಿ, ಚೆಕ್ ಹಾಗೂ ಮೂರು ಗ್ರಾಂ ಬಂಗಾರದ ಪದಕವನ್ನು ಕೊಟ್ಟಿದ್ದರು. ಅವರು ನೀಡಿ ಚೆಕ್ ಹಣ ಇನ್ನೂ ಬ್ಯಾಂಕ್‍ನಲ್ಲಿದ್ದು, ಅದನ್ನು ಜನತೆಯ ಕಲ್ಯಾಣಕ್ಕೆ ಬಳಸಲು ಹೇಳಿದ್ದಾರೆ. ಬಂಗಾರದ ಪದಕವನ್ನು ಬಡವರಿಗೆ ದಾನ ಮಾಡಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ