ಸರ್ಕಾರದಿಂದ 40,000 ಕೋಟಿ ರೂ.ಗಳ ಬೆಂಬಲ ಕೋರಿದ ಬಿಎಸ್​ಎನ್​ಎಲ್

ನವದೆಹಲಿ: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಅಲ್ಪಾವಧಿ ಸಾಲ ಮರುಪಾವತಿಸುವುದಕ್ಕೆ 40 ಸಾವಿರ ಕೋಟಿ ರೂ.ಗಳ ಹಣಕಾಸು ನೆರವನ್ನು ಕೇಂದ್ರ ಸರ್ಕಾರದ ಬಳಿ ಕೇಳಿದೆ.
ಇದರಲ್ಲಿ ಅರ್ಧದಷ್ಟನ್ನು ಸಾವರಿನ್ ಗ್ಯಾರೆಂಟಿ ರೂಪದಲ್ಲಿ ನೀಡುವಂತೆ ವಿನಂತಿಸಲಾಗಿದೆ ಎಂದು ಕಂಪನಿ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಪಿ.ಕೆ. ಪುರ್ವಾರ್ ತಿಳಿಸಿದ್ದಾರೆ.
ಈಗಿರುವ ವ್ಯಾಪಾರ ವಹಿವಾಟಿಗೆ ಸ್ವಂತವಾಗಿ ಇರುವ ಹಣಕಾಸು ಸಾಕಾಗುತ್ತದೆ. ಆದರೆ ನಮ್ಮ ಅಲ್ಪಾವಧಿ ಸಾಲ ತೀರಿಸಲು 20 ಸಾವಿರ ಕೋಟಿ ರೂಪಾಯಿ ಸಾವರಿನ್ ಗ್ಯಾರೆಂಟಿ ಬೇಕು. ಮೊಬೈಲ್ ನೆಟ್​ವರ್ಕ್ ಮೂಲಸೌಕರ್ಯ ಅಭಿವೃದ್ಧಿ ಪಡಿಸಲು 1 ಲಕ್ಷ ನೋಡ್ ಬಿ (ಮೊಬೈಲ್ ಸೈಟ್)ಗಳನ್ನು ಸ್ಥಾಪಿಸಬೇಕಾಗಿದ್ದು, ಇದಕ್ಕೆ ಮತ್ತೆ 20,000 ಕೋಟಿ ರೂಪಾಯಿ ಬೇಕು ಎಂದು ತಿಳಿಸಿದ್ದಾರೆ. ಈಗ ಕೋರಿರುವ ಹಣಕಾಸಿನ ನೆರವು 2019ರಲ್ಲಿ ಘೋಷಿತವಾಗಿರುವ 69,000 ಕೋಟಿ ರೂಪಾಯಿ ಪ್ಯಾಕೇಜ್​ಗೆ ಹೊರತಾದುದು. ಪ್ರಸ್ತುತ ಬಿಎಸ್​ಎನ್​ಎಲ್ ಮೇಲೆ 30,000 ಕೋಟಿ ರೂಪಾಯಿ ಸಾಲದ ಹೊರೆ ಇದೆ.
ಬಿಎಸ್​ಎನ್​ಎಲ್ (BSNL) ಮತ್ತು ಎಂಟಿಎನ್‌ಎಲ್‌ (MTNL)ಗೆ ಅಕ್ಟೋಬರ್ 2019 ರಲ್ಲಿ ಸರ್ಕಾರವು ಸುಮಾರು 69,000 ಕೋಟಿ ರೂಪಾಯಿಗಳ ಪುನರುಜ್ಜೀವನ ಪ್ಯಾಕೇಜ್ ಅನ್ನು ನೀಡಿತ್ತು, ಇದು ಎರಡೂ ಟೆಲಿಕಾಂ ಪಿಎಸ್‌ಯುಗಳಿಗೆ ನಷ್ಟವನ್ನು ಕಡಿಮೆ ಮಾಡಲು ಸಹಾಯ ಮಾಡಿತು.
ಅಧಿಕೃತ ಮಾಹಿತಿಯ ಪ್ರಕಾರ, ಬಿಎಸ್‌ಎನ್‌ಎಲ್‌ನ ನಷ್ಟವು 2019-20ರಲ್ಲಿ 15,500 ಕೋಟಿಯಿಂದ 2020-21ರಲ್ಲಿ 7,441 ಕೋಟಿಗೆ ಕಡಿಮೆಯಾಗಿದೆ.
MTNL 2019-20ರಲ್ಲಿ 3,811 ಕೋಟಿಗಳಿಗೆ ಹೋಲಿಸಿದರೆ ಕಳೆದ ಹಣಕಾಸು ವರ್ಷದಲ್ಲಿ ಒಟ್ಟು 2,554 ಕೋಟಿ ನಷ್ಟವನ್ನು ವರದಿ ಮಾಡಿದೆ.
ಕಡಿಮೆಯಾದ ಚಂದಾದಾರರು:
ಬಿಎಸ್​ಎನ್​ಎಲ್ ದೂರಸಂಪರ್ಕ ರಂಗದಲ್ಲಿ ಯಾವ ಪರಿ ವರ್ಚಸ್ಸು ಗಳಿಸಿ ಹೊಸ ಎತ್ತರಕ್ಕೆ ತಲುಪಿತ್ತೋ, ಖಾಸಗಿ ಕಂಪನಿಗಳ ಪಾರಮ್ಯದಲ್ಲಿ ಅಷ್ಟೇ ವೇಗವಾಗಿ ಕುಸಿದು, ರೋಗಗ್ರಸ್ತವಾಯಿತು. ಯಾರೂ ಇದಕ್ಕೆ ಬಂಡವಾಳ ಹೂಡುವುದಿರಲಿ, ಸುಧಾರಣೆ ಬಗ್ಗೆ ಮಾತಾಡುವ ಗೋಜಿಗೂ ಹೋಗುತ್ತಿಲ್ಲ. ಬಿಎಸ್​ಎನ್​ಎಲ್​ನ ನಷ್ಟ ಹೆಚ್ಚುತ್ತಲೇ ಸಾಗಿದೆ. ಗ್ರಾಹಕರ ಸಂಖ್ಯೆ ಕರಗತೊಡಗಿದೆ. 2008ರಲ್ಲಿ 80 ಕೋಟಿಯಿದ್ದ ಬಿಎಸ್​ಎನ್​ಎಲ್ ಚಂದಾದಾರರ ಸಂಖ್ಯೆ 2021ರಲ್ಲಿ 80 ಲಕ್ಷಕ್ಕೆ ಇಳಿದಿದೆ.
ಎಂಟಿಎನ್​ಎಲ್ ಹೊಣೆಗಾರಿಕೆ ವಿಸ್ತರಣೆ: ನಷ್ಟದಲ್ಲಿರುವ ಎಂಟಿಎನ್​ಎಲ್ ಮುಖ್ಯಸ್ಥರ ಹೆಚ್ಚುವರಿ ಹೊಣೆಗಾರಿಕೆಯನ್ನು ಪಿಕೆ ಪುರ್ವಾರ್ ಅವರಿಗೆ ಕೇಂದ್ರ ಸರ್ಕಾರ ಕಳೆದ ವರ್ಷ ನೀಡಿತ್ತು. ಈ ಹೊಣೆಗಾರಿಕೆ ಅವಧಿಯನ್ನು 2022ರ ಅಕ್ಟೋಬರ್ ತನಕ ವಿಸ್ತರಣೆ ಮಾಡಿದೆ. ಇನ್ನೊಂದೆಡೆ, ಎಂಟಿಎನ್​ಎಲ್ ಅನ್ನು ಬಿಎಸ್​ಎನ್​ಎಲ್ ಜತೆಗೆ ವಿಲೀನಗೊಳಿಸುವ ಪ್ರಸ್ತಾವನೆಯೂ ಇದೆ.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement