ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ: ಇಬ್ಬರು ಸಾವು, ಹಲವರಿಗೆ ಗಾಯ

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿ ಭಾನುವಾರ ಬಾಂಬ್ ಸ್ಫೋಟಿಸಿದ್ದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಕಾಬೂಲಿನ ಈದ್ಗಾ ಮಸೀದಿಯಲ್ಲಿ ಸೇರಿದ್ದವರನ್ನು ಈ ಬಾಂಬ್ ಸ್ಫೋಟದ ಮೂಲಕ ಗುರಿಯಾಗಿಸಲಾಗಿತ್ತು. ಬಾಂಬ್ ಸ್ಫೋಟ ಸಂಭವಿಸಿದಾಗ ಮಸೀದಿಯಲ್ಲಿ ಪ್ರಾರ್ಥನೆ ನಡೆಯುತ್ತಿತ್ತು ಎಂದು ತಾಲಿಬಾನ್ ವಕ್ತಾರ ಝಬಿಯುಲ್ಲಾ ಮುಜಾಹಿದ್ ಹೇಳಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಇಬ್ಬರು ನಾಗರಿಕರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ’ ಎಂದು ಎಎಫ್​ಪಿ ಸುದ್ದಿಸಂಸ್ಥೆಯು ಆಂತರಿಕ ಸಚಿವಾಲಯದ ವಕ್ತಾರ ಖಾರಿ ಸಯ್ಯದ್ ಖೋಸ್ತಿ ಹೇಳಿಕೆಯನ್ನು ವರದಿ ಮಾಡಿದೆ. ಮಸೀದಿ ಸುತ್ತಮುತ್ತಲ ಪ್ರದೇಶದಲ್ಲಿ ಜನಸಂಚಾರ ನಿಷೇಧಿಸಲಾಗಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ತಾಲಿಬಾನ್ ಸರ್ಕಾರದ ಮಾಹಿತಿ ಮತ್ತು ಸಂಸ್ಕೃತಿ ಸಚಿವರೂ ಆಗಿರುವ ಮುಜಾಹಿದ್, ಈಗಾ ಮಸೀದಿಯಲ್ಲಿ ಭಾನುವಾರ ಮಧ್ಯಾಹ್ನ ಬಾಂಬ್​ಸ್ಫೋಟದಿಂದ ಸಾವುನೋವು ಸಂಭವಿಸಿದೆ ಎಂದು ಟ್ವೀಟ್ ಮಾಡಿದ್ದರು.
ವಿಶ್ವಸಂಸ್ಥೆಯು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿರುವ ತಾಲಿಬಾನ್ ಉಗ್ರರು ಕಳೆದ ಆಗಸ್ಟ್ 15ರಂದು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಗರವನ್ನು ವಶಪಡಿಸಿಕೊಂಡಿದ್ದರು. ಅಮೆರಿಕ ನೇತೃತ್ವದ ವಿದೇಶಿ ಭದ್ರತಾ ಪಡೆಗಳು ಹೊರನಡೆದ ನಂತರ ಉಂಟಾಗಿದ್ದ ನಿರ್ವಾತವನ್ನು ತಾಲಿಬಾನ್ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿತು.
ಆಗಸ್ಟ್ ತಿಂಗಳಲ್ಲಿ ಕಾಬೂಲ್​ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದಿಂದ ಅಮೆರಿಕ ಭದ್ರತಾಪಡೆಗೆ ಸೇರಿದ 12 ಮಂದಿಯ ಜೊತೆಗೆ ಹತ್ತಾರು ಮಂದಿ ಮೃತಪಟ್ಟಿದ್ದರು. ದೇಶಬಿಟ್ಟು ಹೋಗಲು ಉದ್ದೇಶಿಸಿದ್ದ ಜನರನ್ನು ಗುರಿಯಾಗಿಸಿ ಬಾಂಬ್ ಸ್ಫೋಟ ನಡೆದಿತ್ತು. ನಂತರದ ದಿನಗಳಲ್ಲಿ ಬಾಂಬ್ ಸ್ಫೋಟದ ಹೊಣೆಯನ್ನು ಐಸಿಸ್-ಕೆ ಹೊತ್ತುಕೊಂಡಿತ್ತು.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement