ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣ: ವಾಸ್ತವಸ್ಥಿತಿ ವರದಿ ಸಲ್ಲಿಕೆಗೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೂಚನೆ

ನವದೆಹಲಿ: ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣ ಸಂಬಂಧ ವಾಸ್ತವಸ್ಥಿತಿ ವರದಿ ಸಲ್ಲಿಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಗುರುವಾರ ಸೂಚನೆ ನೀಡಿದೆ.
ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದ ಪ್ರಕರಣವನ್ನು ಸುಪ್ರೀಂಕೋರ್ಟ್​ ನಿನ್ನೆ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿತ್ತು. ಇದರಂತೆ ಇಂದು ಮುಖ್ಯನ್ಯಾಯಮೂರ್ತಿ ಎನ್​.ವಿ.ರಮಣ ನೇತೃತ್ವದ ನ್ಯಾ. ಸೂರ್ಯಕಾಂತ್ ಹಾಗೂ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ಪ್ರಕರಣವನ್ನು ವಿಚಾರಣೆ ನಡೆಸಿತ್ತು.
ಲಖಿಂಪುರ ಖೇರಿಯಲ್ಲಿ ಹಿಂಸಾಚಾರ ನಡೆದ ಪ್ರಕರಣದ ಬಗ್ಗೆ ಸುಮೊಟೊ ದಾಖಲಿಸಿಕೊಳ್ಳಬೇಕು ಎಂದು ಇಬ್ಬರು ವಕೀಲರು ಸಿಜೆಐ ಎನ್​. ವಿ.ರಮಣ ಅವರಿಗೆ ಪತ್ರ ಬರೆದಿದ್ದರು. ಅದರಲ್ಲಿ ಒಬ್ಬರಾದ ಶಿವಕುಮಾರ್​ ತ್ರಿಪಾಠಿ ಅವರಿಗೆ ವಾದ ಮಂಡಿಸಲು ಸುಪ್ರೀಂಕೋರ್ಟ್​ ಅವಕಾಶ ಮಾಡಿಕೊಟ್ಟಿತ್ತು.
ತಮ್ಮ ವಾದವನ್ನು ನ್ಯಾಯಾಲಯದ ಎದುರು ಮಂಡಿಸಿದ ತ್ರಿಪಾಠಿ, ಲಖಿಂಪುರ ಖೇರಿಯ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಉತ್ತರಪ್ರದೇಶ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಪ್ರಜಾಪ್ರಭುತ್ವದ ಹಕ್ಕು ರಕ್ಷಣೆ ಮಾಡಲಿಲ್ಲ. ಆರೋಪಿಗಳ ವಿರುದ್ಧ ಕೂಡಲೇ ಎಫ್​ಐಆರ್​ ದಾಖಲು ಮಾಡಬೇಕು ಎಂದು ಹೇಳಿದ್ದರು.
ಅದಕ್ಕೆ ಪ್ರತಿಯಾಗಿ ಸುಪ್ರೀಂಕೋರ್ಟ್​ ಪೀಠ, ಈಗಾಗಲೇ ಎಫ್​ಐಆರ್​ ದಾಖಲಾಗಿದ್ದು ನಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿತು.
ಬಳಿಕ ಉತ್ತರಪ್ರದೇಶ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗರಿಮಾ ಪ್ರಸಾದ​, ಲಖಿಂಪುರದಲ್ಲಿ ಏನು ನಡೆಯಿತೋ ಅದು ನಿಜಕ್ಕೂ ದುರ್ದೈವ. ಈ ಸಂಬಂಧ ತನಿಖೆ ನಡೆಸಲು ಎಸ್​ಐಟಿ ರಚನೆಯಾಗಿದೆ. ಅಷ್ಟೇ ಅಲ್ಲ, ನಿವೃತ್ತ ನ್ಯಾಯಾಧೀಶರೊಬ್ಬರು ತನಿಖೆ ನಡೆಸಲಿದ್ದಾರೆ. ಇನ್ನುಳಿದಂತೆ ಎಲ್ಲ ಸೂಕ್ತ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಪೀಠವು, ಪ್ರಕರಣದಲ್ಲಿ ಆರೋಪಿಗಳು ಯಾರು, ಯಾರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಮತ್ತು ಬಂಧಿತರು ಯಾರು ಎಂಬುದರ ಕುರಿತು ನಾಳೆಯೊಳಗೆ ವರದಿ ನೀಡುವಂತೆ ಉತ್ತರ ಸರ್ಕಾರಕ್ಕೆ ಸೂಚಿಸಿತು.
ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಭೇಟಿಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಹತ್ಯೆಗೀಡಾದ ಎಂಟು ಮಂದಿಯನ್ನು ಉಲ್ಲೇಖಿಸಿದ ನ್ಯಾಯಾಲಯ, ಘಟನೆಯ ಕುರಿತಾಗಿ ಕೈಗೊಂಡಿರುವ ನಿರ್ದಿಷ್ಟ ಕ್ರಮದ ಕುರಿತು ನಾಳೆ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಸರ್ಕಾರವನ್ನು ಕೇಳಿತು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ