ಲಖಿಂಪುರ ಹಿಂಸಾಚಾರದ ವರದಿ; ತನಿಖೆ ತೃಪ್ತಿಕರವಾಗಿಲ್ಲ, ಆಶಿಶ್ ಮಿಶ್ರಾನನ್ನು ಇನ್ನೂ ಯಾಕೆ ಬಂಧಿಸಿಲ್ಲ: ಸುಪ್ರೀಂ ಕೋರ್ಟ್ ಪ್ರಶ್ನೆ

ನವದೆಹಲಿ: ಅಕ್ಟೋಬರ್ 3 ರಂದು ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದ ತನಿಖೆ ತೃಪ್ತಿಕರವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಇನ್ನೂ ಏಕೆ ಬಂಧಿಸಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದೆ ಹಾಗೂ ಸರ್ಕಾರ ಇದುವರೆಗೆ ಕೈಗೊಂಡ ಕ್ರಮದಿಂದ ತೃಪ್ತಿ ಹೊಂದಿಲ್ಲ ಎಂದೂ ಹೇಳಿದೆ.
ಪ್ರಕರಣ ಸಂಬಂಧ ಉತ್ತರ ಪ್ರದೇಶ ಸರ್ಕಾರ ವಸ್ತುಸ್ಥಿತಿ ವರದಿ ಸಲ್ಲಿಸಿದ ನಂತರ, ಸುಪ್ರೀಂ ಕೋರ್ಟ್, ” ಆರೋಪಿಯನ್ನು ತಕ್ಷಣವೇ ಏಕೆ ಬಂಧಿಸಲಿಲ್ಲ? ಅವರನ್ನು ಇತರ ನಾಗರಿಕರಂತೆ ಏಕೆ ಪರಿಗಣಿಸುವುದಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಸ್ಥಳೀಯ ಪೊಲೀಸರು ಈ ಕೆಲಸವನ್ನು ಸರಿಯಾಗಿ ಮಾಡಿಲ್ಲ ಎಂದು ಹೇಳಿರುವ ನ್ಯಾಯಾಲಯವು ರಜೆಯ ನಂತರ ಅಕ್ಟೋಬರ್ 20ರ ಬೆಳಿಗ್ಗೆ 10: 30 ಕ್ಕೆ ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿದೆ ಹಾಗೂ ಅತ್ಯುನ್ನತ ಪೊಲೀಸ್ ಅಧಿಕಾರಿ ಪ್ರಕರಣದ ಸಾಕ್ಷ್ಯವನ್ನು ರಕ್ಷಿಸಬೇಕು ಎಂದು ಸೂಚಿಸಿದೆ.
ನಾಲ್ವರು ರೈತರು ಸೇರಿ ಒಟ್ಟು ಎಂಟು ಮಂದಿ ಮೃತಪಟ್ಟ ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಸರ್ವೋಚ್ಚ ನ್ಯಾಯಾಲಯವು (Supreme Court) ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು ಅದರ ವಿಚಾರಣೆ ಆರಂಭಿಸಿದೆ. ಗುರುವಾರ ವಿಚಾರಣೆ ವೇಳೆ ಕೋರ್ಟ್​, “ಲಖೀಂಪುರ್​ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಉತ್ತರಪ್ರದೇಶ ಪೊಲೀಸರಿಗೆ ಎಷ್ಟು ಜನರನ್ನು ಬಂಧಿಸಿದ್ದೀರಿ? ಈ ಬಗ್ಗೆ ನಾಳೆಯ ಒಳಗೆ ಸರ್ವೋಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ” ಎಂದು ತಾಕೀತು ಮಾಡಿತ್ತು. ಅದರಂತೆ ಇಂದು ಉತ್ತರ ಪ್ರದೇಶ ಸರ್ಕಾರ ಕೋರ್ಟ್​ಗೆ ವರದಿ ಸಲ್ಲಿಸಿದೆ. ಆದರೆ, ವರದಿ ನೋಡಿದ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಉತ್ತರ ಪ್ರದೇಶ ಸರ್ಕಾರಕ್ಕೆ ಚಾಟಿ ಬೀಸಿದೆ.
ಲಖಿಂಪುರ ಖೇಲಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದ ರೈತರ ಮೇಲೆ ಎಸ್‌ಯುವಿ ಚಲಿಸಿ ರೈತರು ಮೃತಪಟ್ಟಿದ್ದರು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಇದರಲ್ಲಿ ಪ್ರಮುಖ ಆರೋಪಿ. ಆಶಿಶ್‌ ಮಿಶ್ರಾ ಅವರಿಗೆ ಲಖಿಂಪುರ್ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಪೊಲೀಸರ ಮುಂದೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಬೆಳಿಗ್ಗೆ 10.30 ರವರೆಗೆ ಪೊಲೀಸ್ ಠಾಣೆಗೆ ತಲುಪಿಲ್ಲ ಎಂದು ಮೂಲಗಳು ತಿಳಿಸಿವೆ. ತನಿಖಾ ತಂಡದ ಮುಖ್ಯಸ್ಥರಾಗಿರುವ ಇನ್ಸ್‌ಪೆಕ್ಟರ್ ಜನರಲ್ (ಪ್ರಧಾನ ಕಚೇರಿ) ಉಪೇಂದ್ರ ಅಗರ್ವಾಲ್ ಸಮಯಕ್ಕೆ ಸರಿಯಾಗಿ ಕಚೇರಿಗೆ ಬಂದಿದ್ದಾರೆ ಎಂದು ಅವರು ಹೇಳಿದರು. “ಆಶಿಶ್ ಮಿಶ್ರಾ ಇಲ್ಲಿಯವರೆಗೆ ಬಂದಿಲ್ಲ” ಎಂದು ಅಧಿಕೃತ ಮೂಲವು ಬೆಳಿಗ್ಗೆ 10.30 ರ ಸುಮಾರಿಗೆ ತಿಳಿಸಿದೆ. ಪ್ರಕರಣದ ಸಂಬಂಧ ಗುರುವಾರ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ ನಂತರ, ಪೊಲೀಸರು ಆಶಿಶ್‌ ಮಿಶ್ರಾ ಮನೆಯ ಹೊರಗೆ ನೋಟಿಸ್ ಅಂಟಿಸಿ, ತನ್ನ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆಶಿಶ್ ಅವರ ಸಹೋದರ, ಅಶಿಶ್ ಇಂದು ತನಿಖೆಗೆ ಹಾಜರಾಗುತ್ತಾರೆ ಮತ್ತು ಅವರು ಲಖಿಂಪುರದಲ್ಲಿಯೇ ಇದ್ದಾರೆ ಎಂದು ಭರವಸೆ ನೀಡಿದ್ದಾರೆ.
ಪೊಲೀಸರ ಮುಂದೆ ಹಾಜರಾಗದ ಆಶಿಶ್
ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಬೆಳಿಗ್ಗೆ 10 ಗಂಟೆಗೆ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್ ನೀಡಲಾಗಿತ್ತು. ಆದರೆ, ಪೊಲೀಸರು ನೀಡಿದ್ದ ಗಡುವನ್ನು ತಪ್ಪಿಸಿಕೊಂಡಿದ್ದಾನೆ. ನಾಲ್ವರು ರೈತರು ಸೇರಿದಂತೆ ಎಂಟು ಜನರ ಸಾವಿಗೆ ಕಾರಣವಾದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಆತ ತಲೆಮರೆಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಭಾನುವಾರ ನಡೆದ ಘಟನೆಯನ್ನು ತನಿಖೆ ಮಾಡುವ ತಂಡದ ಮುಖ್ಯಸ್ಥರಾಗಿರುವ ಉಪ ಇನ್ಸ್‌ಪೆಕ್ಟರ್ ಜನರಲ್ (ಪ್ರಧಾನ ಕಚೇರಿ) ಉಪೇಂದ್ರ ಅಗರ್ವಾಲ್ ಆಶಿಶ್‌ ಮಿಶ್ರಾನಿಗಾಗಿ ಕಾಯುತ್ತಿದ್ದರು. ಆದರೆ ಅವರು ಮಧ್ಯಾಹ್ನ 1 ಗಂಟೆಯಾದರೂ ಹಾಜರಾಗಲಿಲ್ಲ ಬಂದಿಲ್ಲ ಎಂದು ವರದಿಗಳು ತಿಳಿಸಿವೆ.
ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಸುಪ್ರೀಂಕೋರ್ಟ್
ನಾಳೆ ಹಾಜರಾಗುತ್ತಾರೆ…
ಮಗ ಅಶಿಶ್ ನಾಳೆ ಪೊಲೀಸರಿಗೆ ಹೋಗುತ್ತಾನೆ ಎಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಹೇಳಿದ್ದಾರೆ
ಕೇಂದ್ರ ಸಚಿವರಾಧ ಅಜಯ್ ಮಿಶ್ರಾ, “ನನ್ನ ಮಗ ನಾಳೆ ಪೊಲೀಸರ ಬಳಿ ಹೋಗುತ್ತಾನೆ ಮತ್ತು ತನಿಖೆಗೆ ಸಹಾಯ ಮಾಡುತ್ತಾನೆ. ಅವನು ಎಲ್ಲಿಯೂ ತಪ್ಪಿಸಿಕೊಂಡಿಲ್ಲ” ಎಂದು ಹೇಳಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. “ಪ್ರತಿ ವಿಷಯದಲ್ಲೂ ಪ್ರತಿಪಕ್ಷಗಳು ರಾಜೀನಾಮೆ ಬಯಸುತ್ತಾರೆ. ತನಿಖೆ ಆರಂಭವಾಗಲಿ, ಸತ್ಯವು ಮೇಲುಗೈ ಸಾಧಿಸುತ್ತದೆ ಎಂದು ಅವರು ಹೇಳಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ