ನದಿಯಲ್ಲಿ ದೋಣಿ ಮಗುಚಿ 50 ಸಾವು; 60 ಪ್ರಯಾಣಿಕರು ನಾಪತ್ತೆ

ಮಂಗೋಲಾ: ಕಾಂಗೋದಲ್ಲಿ ದೋಣಿ ಮಗುಚಿ 50ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಹಾಗೂ 60 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕಾಂಗೋ ನದಿಯಲ್ಲಿ ಈ ದುರ್ಘಟನೆ ನಡೆದಿದ್ದು, ಇದುವರೆಗೂ 51 ಶವಗಳನ್ನು ಹೊರಗೆ ತೆಗೆಯಲಾಗಿದೆ. ಸ್ಥಳೀಯರು ಮತ್ತು ಪ್ರಯಾಣಿಕರ ಮಾಹಿತಿ ಮೇರೆಗೆ ಇನ್ನೂ 60 ಜನ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. 39 ಜನರು ಸುರಕ್ಷಿತವಾಗಿದ್ದು, ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಪ್ರಯಾಣಿಕರನ್ನು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಉತ್ತರ ಪಶ್ಚಿಮ ಪ್ರಾಂತ್ಯದ ಮಂಗೋಲಾ ಗವರ್ನರ್ ವಕ್ತಾರ ನೆಸ್ಟರ್ ಮೈಗ್ಬಾಡೋ ಹೇಳಿದ್ದಾರೆ.
ದೋಣಿ ಹೊರಡುವಾಗ ಸಿಬ್ಬಂದಿ ಪ್ರಯಾಣಿಕರನ್ನು ಸಂಖ್ಯೆಯನ್ನು ದಾಖಲು ಮಾಡಿಕೊಂಡಿರಲಿಲ್ಲ. ಹಾಗಾಗಿ ಪ್ರಯಾಣಿಕರ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ನಿಮ್ಮ ಕುಟುಂಬಸ್ಥರು ದುರಂತದ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರೆ ಮಾಹಿತಿ ನೀಡಿ ಎಂದು ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ದೋಣಿಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ಪ್ರಯಾಣಿಸುತ್ತಿದ್ದರಿಂದ ದುರಂತ ಸಂಭವಿಸಿರುವ ಸಾಧ್ಯತೆಗಳಿವೆ. ಶೋಧ ಮತ್ತು ರಕ್ಷಣಾ ಕಾರ್ಯ ಮುಂದುವರಿದಿದೆ. ಹೆಚ್ಚು ಹೆಚ್ಚು ಜನರನ್ನು ಸುರಕ್ಷಿತವಾಗಿ ರಕ್ಷಿಸುವ ವಿಶ್ವಾಸ ಹೊಂದಿದ್ದೇವೆ ಎಂದು ನೆಸ್ಟರ್ ಮೈಗ್ವಾಡೋ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಹವಾಮಾನ ವೈಪರೀತ್ಯದಿಂದಲೂ ದುರಂತ ಸಂಭವಿಸಿರುವ ಸಾಧ್ಯತೆಗಳಿವೆ. ಈ ಹಿನ್ನೆಲೆ ಶುಕ್ರವಾರ ರಾತ್ರಿ ಹವಾಮಾನದ ವರದಿಯನ್ನು ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಮತ್ತೊಂದು ಕಾರಣ ಸಾಮಥ್ರ್ಯಕ್ಕಿಂತ ಹೆಚ್ಚಿನ ಜನರ ಪ್ರಯಾಣ. ಕೆಲವೊಮ್ಮೆ ಈ ಎರಡೂ ಕಾರಣಗಳಿಂದ ದೋಣಿ ದುರಂತಕ್ಕೆ ಒಳಗಾಗಿರುವ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿವೆ. ದೋಣಿಯಲ್ಲಿ ಎಷ್ಟು ಜನ ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿಯನ್ನು ಶೀಘ್ರದಲ್ಲಿ ತಿಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement