ಅಸ್ಸಾಂನ ಒಂದೇ ಜಿಲ್ಲೆಯ ಎರಡು ಜೈಲುಗಳಲ್ಲಿ ಒಂದು ತಿಂಗಳಲ್ಲಿ 85 ಕೈದಿಗಳಲ್ಲಿ ಏಡ್ಸ್ ಪತ್ತೆ.. !

ಅಸ್ಸಾಂನ ನಾಗಂವ್ ಜಿಲ್ಲೆಯ ಎರಡು ಜೈಲುಗಳಲ್ಲಿ ಕಳೆದ ಒಂದು ತಿಂಗಳಲ್ಲಿ 85 ಎಚ್​ಐವಿ ಪಾಸಿಟಿವ್ ಪ್ರಕರಣಗಳು (HIV Positive Cases) ಪತ್ತೆಯಾಗಿವೆ.
ಸೆಂಟ್ರಲ್ ಜೈಲು ಮತ್ತು ಸ್ಪೆಷಲ್​ ಜೈಲಿನಲ್ಲಿ ಈ ಪ್ರಕರಣಗಳು ವರದಿಯಾಗಿವೆ.
ಈ ಜೈಲುಗಳು ಅಸ್ಸಾಂನ ನಾಗಂವ್ ಜಿಲ್ಲೆಯಲ್ಲಿದ್ದು, ಪೂರ್ವ ಗುವಾಹಟಿಯಿಂದ 125 ಕಿ.ಮೀ. ದೂರದಲ್ಲಿದೆ. ಜಿಲ್ಲಾ ಆರೋಗ್ಯ ಸೇವೆ ಜಂಟಿ ನಿರ್ದೇಶಕ ಅತುಲ್ ಪತೋರ್ ಮಾತನಾಡಿ, ಹೆಚ್ಚಿನ ಜನರು ಜೈಲಿಗೆ ಹಾಕುವ ಮುನ್ನವೇ ಎಚ್​ಐವಿಗೆ ತುತ್ತಾಗಿದ್ದಾರೆ. ಕೆಲವು ದಿನಗಳ ಹಿಂದೆ ಅವರಿಗೆ ಕಾಯಿಲೆ ಇರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಏಡ್ಸ್​ಗೆ ತುತ್ತಾಗಿರುವ ಹೆಚ್ಚಿನ ರೋಗಿಗಳನ್ನು ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್, 1985 ರ ಅಡಿಯಲ್ಲಿ ಇಂಟ್ರಾವೆನಸ್ ಡ್ರಗ್ ಬಳಕೆದಾರರಾಗಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
40 ಎಚ್​ಐವಿ ಪಾಸಿಟಿವ್ ಪ್ರಕರಣಗಳು ಸೆಂಟ್ರಲ್ ಜೈಲಿನಲ್ಲಿ ಪತ್ತೆಯಾಗಿವೆ ಎಂದು ಜೈಲರ್ ಪ್ರಬಿನ್ ಹಜಾರಿಕಾ ಅವರು ಹೇಳಿದ್ದಾರೆ. ಹಾಗೂ ಸೋಂಕಿತ ಕೈದಿಗಳಿಗೆ ಡ್ರಗ್ಸ್​ ಸಿಗುತ್ತಿತ್ತು ಎಂಬ ಆರೋಪವನ್ನು ಅವರು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ.
ಸ್ಪೆಷಲ್​ ಜೈಲಿನಲ್ಲಿ 45 ಎಚ್‌ಐವಿ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದು, ಸೋಂಕಿತರ ಕುಟುಂಬ ಸದಸ್ಯರಿಗೆ ಅವರ ಆರೋಗ್ಯ ಮಾಹಿತಿ ನೀಡಲಾಗಿದೆ.
ನಾಗಂವ್ ಎಸ್​ಪಿ ಆನಂದ್ ಮಿಶ್ರಾ ಮಾತನಾಡಿ, ಡ್ರಗ್ಸ್​ ಬಳಕೆ ಮತ್ತು ಲೈಂಗಿಕ ಸಂಪರ್ಕದಿಂದ ಹೆಚ್ಚು ಪ್ರಮಾಣದ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜೈಲಿನಲ್ಲಿ ಕೈದಿಗಳಿಗೆ ಡ್ರಗ್ಸ್ ಸಿಗುತ್ತಿದೆಯೋ ಎಂಬ ಬಗ್ಗೆ ಜೈಲು ಅಧಿಕಾರಿಗಳು ನಿಗಾ ವಹಿಸಬೇಕು. ಇತ್ತೀಚೆಗೆ ಪೊಲೀಸರು ಕೈದಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಪಾರ್ಮಾಸಿಸ್ಟ್​ ಒಬ್ಬನನ್ನು ಬಂಧಿಸಿದ್ದರು ಎಂದು ಅವರು ಹೇಳಿದ್ದಾರೆ.
ಹಿಮಂತ್ ಬಿಸ್ವಾ ಶರ್ಮಾ ನೇತೃತ್ವದ ಅಸ್ಸಾಂ ಬಿಜೆಪಿ ಸರ್ಕಾರ ಕೆಲವು ತಿಂಗಳ ಹಿಂದೆ ಡ್ರಗ್ಸ್ ವಿರುದ್ಧದ ಹಲವು ಕಾರ್ಯಯೋಜನೆಗಳಿಗೆ ಚಾಲನೆ ನೀಡಿತ್ತು. ನಂತರದ ದಿನಗಳಲ್ಲಿ ರಾಜ್ಯಾದ್ಯಂತ 200 ಕೋಟಿ ರೂಪಾಯಿಗೂ ಅಧಿಕ ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಗಿದ್ದು, ಹಲವು ಸ್ಮಗ್ಲರ್, ಪೆಡ್ಲರ್​ ಹಾಗೂ ಡ್ರಗ್ಸ್​ ಬಳಕೆದಾರರನ್ನು ಬಂಧಿಸಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಬಿಹಾರದಲ್ಲಿ ಇಂಡಿಯಾ ಮೈತ್ರಿಕೂಟ ಸೀಟು ಹಂಚಿಕೆ ಅಂತಿಮ; ಆರ್‌ಜೆಡಿ 26, ಕಾಂಗ್ರೆಸ್‌ 9 ಸ್ಥಾನಗಳಲ್ಲಿ ಸ್ಪರ್ಧೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement