ಲಖಿಂಪುರ್ ಘಟನೆ ಹಿಂದೂ- ಸಿಖ್ ನಡುವಿನ ಕದನ ಮಾಡುವ ಪ್ರಯತ್ನ: ವರುಣ್ ಗಾಂಧಿ ಕಿಡಿ

ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ್ ಖೇರಿ ಘಟನೆಯನ್ನು ಹಿಂದೂ-ಸಿಖ್ಖರ ನಡುವಿನ ಕದನ ಮಾಡಲು ನಡೆಸುತ್ತಿರುವ ಪ್ರಯತ್ನ ವಿರುದ್ಧ ಬಿಜೆಪಿ ಸಂಸದ ವರುಣ್ ಗಾಂಧಿ ಎಚ್ಚರಿಸಿದ್ದಾರೆ. ಹಾಗೂ ಇದನ್ನು ಅನೈತಿಕ ಮತ್ತು ತಪ್ಪು ಕ್ರಮ ಎಂದು ಕಿಡಿಕಾರಿದ್ದಾರೆ.
ಈ ತಪ್ಪುಗಳನ್ನು ಸೃಷ್ಟಿಸುವುದು ದೇಶಕ್ಕೆ ಮತ್ತು ಸಮಾಜಕ್ಕೆ ಅಪಾಯಕಾರಿ. ಗಾಯ ಆರಲು ತಲೆಮಾರುಗಳನ್ನು ತೆಗೆದುಕೊಂಡದ್ದಕ್ಕೆ ಮತ್ತೆ ಗಾಯವಾಗುವಂತೆ ಮಾಡುವುದು ಸರಿಯಲ್ಲ. ದೇಶದ ಐಕ್ಯತೆ ಮುಂದೆ ನಮ್ಮ ರಾಜಕೀಯ ಲಾಭಕ್ಕಾಗಿ ಕ್ಷುಲ್ಲಕ ವಿಷಯಗಳಿಗೆ ಹೊಡೆದಾಡಿ ನಾವು ಸಣ್ಣತನ ತೋರಿಸಬಾರದು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಲಖಿಂಪುರ್ ಖೇರಿಯಲ್ಲಿ ನ್ಯಾಯಕ್ಕಾಗಿ ಹೋರಾಟವು “ದುರಹಂಕಾರಿ ಸ್ಥಳೀಯ ಅಧಿಕಾರದ ಮುಂದೆ ಬಡ ರೈತರ ಕ್ರೂರ ಹತ್ಯಾಕಾಂಡವಾಗಿದ್ದು ಇದರಲ್ಲಿ ಯಾವುದೇ ಧಾರ್ಮಿಕ ಅರ್ಥವಿಲ್ಲ ಎಂದು ಹೇಳಿರುವ ಅವರು, “ಖಲಿಸ್ತಾನಿ” ಎಂಬ ಪದವನ್ನು ಧಾರಾಳವಾಗಿ ಪ್ರತಿಭಟಿಸುವ ರೈತರಿಗೆ ಬಳಸುವುದು ನಮ್ಮ ಗಡಿಗಳಲ್ಲಿ ಹೋರಾಡಿ ರಕ್ತ ಚೆಲ್ಲಿದ ಈ ಹೆಮ್ಮೆಯ ಪುತ್ರರ ತಲೆಮಾರುಗಳಿಗೆ ಮಾಡಿದ ಅವಮಾನವಾಗಿದೆ, ಇದು ನಮ್ಮ ರಾಷ್ಟ್ರೀಯ ಏಕತೆಗೆ ಅತ್ಯಂತ ಅಪಾಯಕಾರಿ, ಇದು ಜನರಲ್ಲಿ ತಪ್ಪು ರೀತಿಯ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ” ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ವರುಣ್ ಗಾಂಧಿ ಹೇಳಿದ್ದಾರೆ.
ಉತ್ತರ ಪ್ರದೇಶದ ಬಿಜೆಪಿ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿರುವ ಸೀತಾಪುರದ ಲಖೀಂಪುರಖೇರಿಯಲ್ಲಿ ನಡೆದ ರೈತರ ಹತ್ಯೆ ಮತ್ತು ಹಿಂಸಾಚಾರ ಪ್ರಕರಣದ ಕುರಿತು ವರಣ್ ಗಾಂಧಿ ಸತತ ಟ್ವೀಟ್ ಮಾಡುತ್ತಿದ್ದರು. ಈ ಕಾರಣದಿಂದ ಅವರನ್ನು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಅವರು ಇಂದೂ ಕೂಡ ಲಖೀಂಪುರ ಹಿಂಸಾಚಾರದ ಕುರಿತು ತಮ್ಮದೇ ಸರ್ಕಾರದ ವಿರುದ್ಧ ಮತ್ತೆ ಮಾತನಾಡಿದ್ದಾರೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ