ಜಮ್ಮು-ಕಾಶ್ಮೀರದಲ್ಲಿ ಐವರು ಯೋಧರು ಹುತಾತ್ಮ

ನವದೆಹಲಿ : ಜಮ್ಮು-ಕಾಶ್ಮೀರದ ರಜೌರಿ ಸೆಕ್ಟರ್ ನ ಪೀರ್ ಪಂಜಾಲ್ ವಲಯದ ಪ್ರದೇಶದಲ್ಲಿ ಸೋಮವಾರ ನಡೆದ ಎನ್ ಕೌಂಟರ್ ಕಾರ್ಯಾಚರಣೆ ವೇಳೆ ಉಗ್ರರು ನಡೆಸಿದ ಪ್ರತಿದಾಳಿಯಲ್ಲಿ ನಾಲ್ವರು ಸೈನಿಕರು ಹಾಗೂ ಸೇನಾ ಅಧಿಕಾರಿ ಸೇರಿದಂತೆ ಐವರು ಹುತಾತ್ಮರಾಗಿರುವ ಕುರಿತು ರಾಷ್ಟ್ರೀಯ ಸುದ್ದಿ ವಾಹಿನಿಗಳು ವರದಿ ಬಿತ್ತರಿಸಿವೆ.
ಆದರೆ ಈವರೆಗೂ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವರದಿ ಹೇಳಿದೆ. ಇದಕ್ಕೂ ಮುನ್ನ ಅನಂತ್ ನಾಗ್ ಮತ್ತು ಬಂಡಿಪೋರಾ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಮೃತಪಟ್ಟಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದರು.
ಮೃತ ಉಗ್ರರನ್ನು ಲಷ್ಕರ್ ಎ ತೊಯ್ಬಾದ ಜತೆ ನಂಟು ಹೊಂದಿದ್ದ ಇಮ್ತಿಯಾಜ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದ್ದು, ಈತ ಕಣಿವೆ ಪ್ರದೇಶದಲ್ಲಿ ನಾಗರಿಕರನ್ನು ಹತ್ಯೆಗೈದ ಘಟನೆಯಲ್ಲಿ ಶಾಮೀಲಾಗಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.
ಅನಂತ್ ನಾಗ್ ಜಿಲ್ಲೆಯ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದ ಪರಿಣಾಮ ಯೋಧರು ಪ್ರತಿದಾಳಿ ನಡೆಸಿದಾಗ ಉಗ್ರ ಸಾವನ್ನಪ್ಪಿದ್ದ. ಆತನ ಬಳಿ ಇದ್ದ ಪಿಸ್ತೂಲ್, ಗ್ರೆನೇಡ್ ವಶಕ್ಕೆ ತೆಗೆದುಕೊಂಡಿರುವುದಾಗಿ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ