ದೇಶೀಯವಾಗಿ ಅಭಿವೃದ್ಧಿಪಡಿಸಿದ ಬಿಎಸ್​ಎನ್​ಎಲ್ 4ಜಿ ಮೂಲಕ ಮೊದಲ ಕರೆ ಮಾಡಿದ ಅಶ್ವಿನಿ ವೈಷ್ಣವ್

ನವದೆಹಲಿ: ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಬಿಎಸ್​ಎನ್​ಎಲ್ 4ಜಿ ನೆಟ್​ವರ್ಕ್​ನ ಮೊದಲ ಫೋನ್ ಕರೆ ಮಾಡಿದ್ದಾರೆ.
ಈ ಬಗ್ಗೆ, ಟ್ವಿಟರ್ ಮೂಲಕ ಅವರು ಸಂತಸ ಹಂಚಿಕೊಂಡಿದ್ದಾರೆ. ಪ್ರಧಾನಿನರೇಂದ್ರ ಮೋದಿ ಅವರ ಆತ್ಮನಿರ್ಭರ್ ಭಾರತ್ ಪರಿಕಲ್ಪನೆ ಸಾಕಾರಗೊಳ್ಳುತ್ತಿದೆ ಎಂದು ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ. ಇದು ಭಾರತದ್ದೇ ಆದ ಮೊದಲ 4ಜಿ ನೆಟ್​ವರ್ಕ್. ಬಿಎಸ್​ಎನ್​ಎಲ್ 4ಜಿ ಭಾರತದ ಹಲವು ಪ್ರದೇಶಗಳಲ್ಲಿ ಚಾಲ್ತಿಯಲ್ಲಿ ಇದೆ. ಹಾಗೂ ಡಿಸೆಂಬರ್ 31 ರ ವರೆಗೆ ಗ್ರಾಹಕರಿಗೆ ಉಚಿತ 4ಜಿ ಸಿಮ್​ನ್ನು ಬಿಎಸ್​ಎನ್​ಎಲ್ ನೀಡುತ್ತಿದೆ.
ವರದಿಗಳು ಹೇಳುವಂತೆ ಬಿಎಸ್​ಎನ್​ಎಲ್ ರೋಲ್​ಔಟ್​ನ ಮುಂದಿನ ಹಂತಗಳಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕೂಡ ಯೋಜನೆಯ ಸಹಭಾಗಿತ್ವ ಹೊಂದಬಹುದು. ಬಿಎಸ್​ಎನ್​ಎಲ್ ತನ್ನ 4ಜಿ ನೆಟ್​ವರ್ಕ್​ಗಾಗಿ ಇಂಡಿಯನ್ ಟೆಕ್ನಾಲಜಿ ಜೊತೆಗೆ ಕೆಲವು ಕಾಲದಿಂದ ಕೆಲಸ ಮಾಡುತ್ತಿದೆ.
ಐಟಿ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ಬಿಎಸ್​ಎನ್​ಎಲ್ ಭಾರತೀಯ 4ಜಿ ನೆಟ್​ವರ್ಕ್ ಮೂಲಕ ಮೊದಲ ಕರೆ ಮಾಡಿದರು. ಕೇಂದ್ರ ಸರ್ಕಾರ 4ಜಿ ಸೇವೆಗಳಿಗಾಗಿ 24,084 ಕೋಟಿ ರೂಪಾಯಿಗಳನ್ನು 2021-22 ರ ಬಜೆಟ್​ನಲ್ಲಿ ಮೀಸಲಿರಿಸಿದೆ. ಇದು ಒಟ್ಟಾರೆ 69,000 ಕೋಟಿ ರೂ.ಗಳ ಬಿಎಸ್​ಎನ್​ಎಲ್ ಹಾಗೂ ಎಮ್​ಟಿಎನ್​ಎಲ್ ಪ್ಯಾಕೇಜ್​ನ ಭಾಗವಾಗಿದೆ.
ಬಿಎಸ್​ಎನ್​ಎಲ್​ ಈ ಹಣಕಾಸು ವರ್ಷದಲ್ಲಿ 4ಜಿ ನೆಟ್​ವರ್ಕ್ ಕಾರ್ಯಾರಂಭಿಸಿದ್ದರೆ, ಅದರ ಆರ್​-ಡಿ ಆರ್ಗನೈಸೇಷನ್ ಸಿ-ಡಾಟ್​ಗೆ 6ಜಿ ನೆಟ್​ವರ್ಕ್ ಟೆಕ್ನಾಲಜಿ ಮೇಲೆ ಕೆಲಸ ಮಾಡಲು ಟೆಲಿಕಾಂ ಡಿಪಾರ್ಟ್​ಮೆಂಟ್ ಸೂಚಿಸಿದೆ. ಭವಿಷ್ಯದ ತಂತ್ರಜ್ಞಾನಗಳ ಮೇಲೆ ಕೆಲಸ ಮಾಡಲು ಹಾಗೂ ಜಾಗತಿಕ ಸ್ಪರ್ಧಾ ಮಾರುಕಟ್ಟೆಯೊಂದಿಗೆ ಬೆಳೆಯಲು ಸೂಚಿಸಲಾಗಿದೆ. ಸ್ಯಾಮ್​ಸಂಗ್, ಹುವಾಯಿ, ಎಲ್​ಜಿ ಮತ್ತು ಇತರ ಕೆಲವು ಕಂಪೆನಿಗಳು 6ಜಿ ಟೆಕ್ನಾಲಜಿಗಾಗಿ ಕೆಲಸ ಮಾಡುತ್ತಿವೆ ಎಂದು ಹೇಳಲಾಗಿದೆ. 6ಜಿ ತಂತ್ರಜ್ಞಾನವು 5ಜಿ ಗಿಂತ 50 ಪಟ್ಟು ವೇಗವಾಗಿ ಇರಲಿದೆ ಎನ್ನಲಾಗಿದೆ. ಈ ತಂತ್ರಜ್ಞಾನ 2028- 2030 ರ ವೇಳೆಗೆ ವಾಣಿಜ್ಯ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement