ಲಖಿಂಪುರ ಹಿಂಸಾಚಾರ: ಕೇಂದ್ರ ಸಚಿವರ ಪುತ್ರ ಆಶಿಶ್‌ ಮಿಶ್ರಾ 3 ದಿನ ಪೊಲೀಸ್ ಕಸ್ಟಡಿಗೆ

ಲಕ್ನೋ: ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಬಂಧನದಲ್ಲಿರುವ ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾನನ್ನು ನ್ಯಾಯಾಲಯ ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಆಶಿಶ್ ಮಿಶ್ರಾಗೆ ಕೋರ್ಟ್‌ ಶಾಕ್ ನೀಡಿದ್ದು, ಮೂರು ದಿನಗಳ ಕಾಲ ಪೊಲೀಸರ ವಿಚಾರಣೆ ಎದುರಿಸಬೇಕಿದೆ. ಶನಿವಾರ ವಿಚಾರಣೆಗೆ ಹಾಜರಾಗಿದ್ದ ಆರೋಪಿ ಆಶಿಶ್ ಮಿಶ್ರಾ ತನಿಖೆಗೆ ಸಹಕರಿಸದ ಕಾರಣ ತಡರಾತ್ರಿ ಪೊಲೀಸರು ಬಂಧಿಸಿದ್ದರು. ಇಂದು (ಸೋಮವಾರ) ಲಖೀಂಪುರನ ಸಿಜೆಎಂ (CJM) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಕೋರ್ಟ್‌ ಆರೋಪಿಯನ್ನು ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದೆ.
14 ದಿನ ಕಸ್ಟಡಿಗೆ ಕೇಳಿದ್ದ ಎಸ್‍ಐಟಿ: ಎಸ್‍ಐಟಿ ಆರೋಪಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿತ್ತು. ಪ್ರಕರಣದಲ್ಲಿ ಆಶಿಶ್ ಮಿಶ್ರಾ ಪ್ರಮುಖ ಆರೋಪಿಯಾಗಿದ್ದು, ವಿಚಾರಣೆಯ ಅಗತ್ಯವಿದೆ. ಹಾಗಾಗಿ ಆರೋಪಿಯನ್ನು 14 ದಿನ ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ಎಸ್‍ಐಟಿ ಪರ ವಕೀಲರಾದ ರಾಜೇಶ್ ಶ್ರೀವಾಸ್ತವ ವಾದ ಮಂಡಿಸಿದ್ದರು.
ಆರೋಪಿಯನ್ನು ಕೇವಲ 12 ಗಂಟೆ ವಿಚಾರಣೆ ನಡೆಸಲಾಗಿದೆ. ಆದ್ರೆ ಆಶಿಶ್ ಮಿಶ್ರಾ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ. ಆದ್ದರಿಂದ ಆರೋಪಿ 14 ದಿನ ನಮ್ಮ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಪೊಲೀಸರು ಹೇಳಿದ್ದರು. ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಆಶಿಶ್ ಮಿಶ್ರಾ ಪರ ವಕೀಲರು, ಕಕ್ಷಿದಾರರನ್ನು ನಿರಂತರವಾಗಿ 12 ಗಂಟೆ ವಿಚಾರಣೆ ನಡೆಸಲಾಗಿದೆ. ಮಧ್ಯದಲ್ಲಿ ಕೇವಲ ಒಂದು ಬಾರಿ ಮಾತ್ರ ನೀರು ಕುಡಿಯಲು ಅವಕಾಶ ನೀಡಲಾಗಿದೆ. ಆಶಿಶ್ ಮಿಶ್ರಾ ವಿಚಾರಣೆಗೆ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಚಿವ ಜಯ್ ಮಿಶ್ರಾ ರಾಜೀನಾಮೆಗೆ ವಿಪಕ್ಷಗಳ ಆಗ್ರಹ..:
ಲಖೀಂಪುರ ಹಿಂಸಾಚಾರ ನಡೆದ ದಿನದಿಂದಲೂ ವಿಪಕ್ಷಗಳು ಕೇಂದ್ರ ಗೃಹ ರಾಜ್ಯ ಸಚಿವ ಅಜಯ್‍ಮಿಶ್ರಾ ರಾಜೀನಾಮೆಗೆ ಪಟ್ಟು ಹಿಡಿದಿವೆ. ಉತ್ತರ ಪ್ರದೇಶದಲ್ಲಿ ಅಜಯ್ ಮಿಶ್ರಾ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗಳು ಸಹ ನಡೆಯುತ್ತಿವೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಇದೇ ವಿಷಯವನ್ನು ಮುಂದಿರಿಸಿ ವಾಗ್ದಾಳಿ ನಡೆಸುತ್ತಿದ್ದಾರೆ. ಅಲ್ಲದೇ ಎಸ್ಪಿ, ಬಿಎಸ್‍ಪಿ ಮತ್ತು ಇತರ ಸ್ಥಳೀಯ ಪ್ರಾದೇಶಿಕ ಪಕ್ಷಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿವೆ.

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ