ಮುಂದೂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿಗೆ ನವೆಂಬರ್‌ 21ರಂದು ಚುನಾವಣೆ

ಬೆಂಗಳೂರು: ಕೋವಿಡ್-19 ಎರಡನೇ ಅಲೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯನ್ನು ನವೆಂಬರ್ 21ರಂದು ನಡೆಸಲು ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಕಸಾಪ ಚುನಾವಣಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಈ ವೇಳಾಪಟ್ಟಿ ಪ್ರಕಟಿಸಿದ್ದಾರೆ. ಕಸಾಪ ಚುನಾವಣೆ ನಿಮಿತ್ತ ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮತ್ತು ಮತಯಾಚನೆ ಕಾರ್ಯ ಆರಂಭವಾಗಿ ಸ್ಥಗಿತಗೊಂಡಿತ್ತು. ಮುಂದೂಡಿದ ಹಂತದಿಂದ ಯಥಾವತ್ತಾಗಿ ಮುಂದುವರಿಸಲು ಈಗ ನಿರ್ಧಾರ ಕೈಗೊಳ್ಳಲಾಗಿದೆ. ಮತದಾನ ಪ್ರಕ್ರಿಯೆಯು ನವೆಂಬರ್ 21ರ ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಮತದಾನ ನಂತರ ಮತ ಎಣಿಕೆಯು ಪ್ರಕ್ರಿಯೆ ಆರಂಭವಾಗಲಿದ್ದು, ನ.23ರೊಳಗೆ ಫಲಿತಾಂಶವನ್ನು ಕ್ರೋಢೀಕರಿಸಿ ರಾಜ್ಯ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತದೆ. ನವೆಂಬರ್ 24ರಂದು ಬೆಳಗ್ಗೆ 11 ಗಂಟೆಗೆಯಿಂದ ಬೆಂಗಳೂರಿನಲ್ಲಿ ಕಸಾಪ ಕೇಂದ್ರ ಚುನಾವಣಾಧಿಕಾರಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷರಿಗೆ ಬಿದ್ದ ಮತಗಳ ಎಣಿಕೆ ನಡೆದು, ವಿಜಯ ಸಾಧಿಸಿದ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಲಾಗುತ್ತದೆ ಎಂದು ವೇಳಾಪಟ್ಟಿ ಪ್ರಕಟಿಸಲಾಗಿದೆ
ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ 21 ಅಭ್ಯರ್ಥಿಗಳು, 30 ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ 223 ಅಭ್ಯರ್ಥಿಗಳು ಹಾಗೂ ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಗಡಿನಾಡು ಘಟಕಗಳ ಅಧ್ಯಕ್ಷ ಸ್ಥಾನಗಳಿಗೆ 16 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. 3,10,109 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ರಾಜ್ಯದ ಎಲ್ಲಾ ತಾಲ್ಲೂಕು ಮತ್ತು ಕೆಲವು ಹೋಬಳಿ ಕೇಂದ್ರಗಳು ಸೇರಿದಂತೆ ಒಟ್ಟು 420 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ನ.21ರಂದು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳು ಹಾಗೂ ಬೆಂಗಳೂರು ನಗರ ಜಿಲ್ಲೆಯ 27 ವಿಧಾನಸಭೆ ಕ್ಷೇತ್ರಗಳ ಗುರುತಿಸಲಾದ ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಜಿಲ್ಲಾ ಘಟಕಗಳ ಅಧ್ಯಕ್ಷರ ಫಲಿತಾಂಶ ಅದೇ ದಿನ ಘೋಷಣೆಯಾಗಲಿದೆ.
ನ.24 ರಂದು ಪರಿಷತ್ತಿನ ಚುನಾವಣಾಧಿಕಾರಿಯ ಕೇಂದ್ರ ಕಚೇರಿಯಲ್ಲಿ ರಾಜ್ಯಾಧ್ಯಕ್ಷರ ಆಯ್ಕೆಗೆ ಎಲ್ಲ ಜಿಲ್ಲೆಗಳಿಂದ ಬಂದ ಮತಗಳು ಹಾಗೂ ಅಂಚೆ ಮತಗಳನ್ನು ಕ್ರೋಢೀಕರಿಸಿದ ನಂತರ ಮತೆಣಿಕೆ ನಡೆಸಿ ಅದೇ ದಿನ ಫಲಿತಾಂಶವನ್ನು ಘೋಷಿಸಲಾಗುತ್ತದೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement