ಸಲೀಂ-ಉಗ್ರಪ್ಪ ನಡುವಿನ ಸಂಭಾಷಣೆಗೂ ನನಗೂ ಸಂಬಂಧವಿಲ್ಲ, ಪರ್ಸೆಂಟೇಜ್ ವ್ಯವಹಾರದ ಅಗತ್ಯವೂ ನನಗಿಲ್ಲ ಶಿಸ್ತುಪಾಲನಾ ಸಮಿತಿ ತೀರ್ಮಾನಕ್ಕೆ ಬದ್ಧ: ಡಿಕೆಶಿ

posted in: ರಾಜ್ಯ | 0

ಬೆಂಗಳೂರು: ಸಲೀಂ ಮತ್ತು ವಿ. ಎಸ್. ಉಗ್ರಪ್ಪನವರ ಸಂಭಾಷಣೆಗಳಿಗೂ ನನಗೂ ಸಂಬಂಧವಿಲ್ಲ, ಪಕ್ಷದ ಶಿಸ್ತು ಪಾಲನಾ ಸಮಿತಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಲೀಂ ಹಾಗೂ ಉಗ್ರಪ್ಪನವರ ಸಂಭಾಷಣೆಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದು ಪಕ್ಷಕ್ಕೆ ಮತ್ತು ನನಗೆ ಖಂಡಿತಾ ಮುಜುಗರವಾಗಿದೆ. ಅದಕ್ಕೇ ಇವತ್ತು ನಾನು ಮಾಧ್ಯಮಗಳ ಮುಂದೆ ಬಂದು ಕುಳಿತಿದ್ದೇನೆ. ನಾನು ಪಕ್ಷದಲ್ಲಿ ಅಶಿಸ್ತು, ಗುಂಪುಗಾರಿಕೆಯನ್ನು ಸಹಿಸುವುದಿಲ್ಲ, ಹಾಗೂ ಅದನ್ನು ಪ್ರೋತ್ಸಾಹಿಸುವುದೂ ಇಲ್ಲ. ಆದರೆ ಕಾಂಗ್ರೆಸ್‌ ಶಿಸ್ತು ಪಾಲನಾ ಸಮಿತಿಯ ಅಧ್ಯಕ್ಷರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಾನು ಯಾವ ಪರ್ಸೆಂಟೇಜ್ ನಲ್ಲಿ ಭಾಗಿಯಾಗಿಲ್ಲ, ಭ್ರಷ್ಟಾಚಾರಕ್ಕೂ ನನಗೂ ದೂರ. ಜೊತೆಗೆ ಪರ್ಸೆಂಟೇಜ್ ತೆಗೆದುಕೊಳ್ಳುವ ಅಗತ್ಯವೂ ನನಗಿಲ್ಲ. ರಾಜಕಾರಣದಲ್ಲಿ ಹಾರ ತುರಾಯಿ ಹಾಕಿ ಸನ್ಮಾನ ಮಾಡಿ ಜೈಕಾರ ಹಾಕುವವರೂ ಇರುತ್ತಾರೆ ಹಾಗೂ ತೆಗಳುವವರೂ ಇರುತ್ತಾರೆ. , ಇಲ್ಲಿ ಕಲ್ಲು, ಚಪ್ಪಲಿ, ಮೊಟ್ಟೆ ಎಸೆಯುವವರೂ ಇರುತ್ತಾರೆ, ನಾವು ರಾಜಕಾರಣಕ್ಕೆ ಬಂದಾಗ ಎಲ್ಲವನ್ನೂ ಸ್ವೀಕರಿಸಲು ಸಿದ್ಧರಾಗಿರಬೇಕು ಎಂದರು.
ಇವರು ಯಾವ ವರ್ಗಕ್ಕೆ ಸೇರಿದವರು ಎಂಬ ಪ್ರಶ್ನೆಗೆ ಅವರು ಅದನ್ನು ನೀವೇ ನಿರ್ಧಾರ ಮಾಡಿ ಎಂದು ಉತ್ತರಿಸಿದರು.
ನಿನ್ನೆ ಇಬ್ಬರು ನಾಯಕರು ಮಾತನಾಡಿಕೊಂಡಿರುವುದು ಆಂತರಿಕ, ಬಹಿರಂಗವಾಗಿ ಹೇಳಿರುವ ಮಾತಲ್ಲ. ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಹೇಳಿದ ಅವರು, ಈ ವಿಚಾರದಲ್ಲಿ ಶಿಸ್ತು ಪಾಲನಾ ಸಮಿತಿ ಕ್ರಮ ತೆಗೆದುಕೊಳ್ಳುವುದು ಪಕ್ಕಾ. ಪಕ್ಷದ ಸಂವಿಧಾನದ ಚೌಕಟ್ಟಿನೊಳಗೆ ಕ್ರಮ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದರು.
ಗೃಹ ಸಚಿವರು ದೂರು ಸಲ್ಲಿಸಿದರೆ ತೆಗೆದುಕೊಳ್ಳುತ್ತೇನೆ ಎಂದಿದ್ದಾರಂತೆ, ಅವರೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವುದಾದರೆ ದಾಖಲಿಸಿಕೊಳ್ಳಲಿ ಎಂದರು.
ನಾನು ಗ್ರಾಮೀಣ ಪ್ರದೇಶದಿಂದ ಬಂದಿರುವವನು. ನನ್ನ ಬಾಡಿ ಲಾಂಗ್ವೇಜ್, ಶೈಲಿ, ನಡತೆ, ದೇಹ ಇದನ್ನು ಯಾರ್ಯಾರಿಗೋಸ್ಕರ ನಾನು ಬದಲಿಸಲು ಆಗುವುದಿಲ್ಲ ಎಂದು ಹೇಳಿದರು.
ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತವಾಗಲೀ, ಬಣಗಳಾಗಲೀ ಇಲ್ಲ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದ ಅವರು, ‘ಶಿವಕುಮಾರ್ ಅಧ್ಯಕ್ಷರಾಗಲು ನಾನು ಕೆಲಸ ಮಾಡಿದ್ದೆ. ಅವರು ನನ್ನ ನಿರೀಕ್ಷೆ ಹುಸಿ ಮಾಡಿದರು’ ಎಂಬ ಉಗ್ರಪ್ಪ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಎಲ್ಲರನ್ನೂ ಸಮಾಧಾನಪಡಿಸಲು ಸಾಧ್ಯವಿಲ್ಲದ ಮಾತು ಎಂದು ತಿಳಿಸಿದರು.
ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಒಬ್ಬ ಮಂತ್ರಿ ಬೆಡ್​ರೂಮ್​ನಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತಾಡಿದ್ದನ್ನು ನೀವು ಕೇಳಲಿಲ್ಲ ಏಕೆ ಎಂದು ಶಿವಕುಮಾರ್ ಪರೋಕ್ಷವಾಗಿ ಬಿಜೆಪಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿರಿಯ ಸಚಿವರೊಬ್ಬರ ಬಗ್ಗೆ ಪ್ರಸ್ತಾಪಿಸಿದರು.
ಭ್ರಷ್ಟಾಚಾರದ ವಿಚಾರದಲ್ಲಿ ಬಿಜೆಪಿಯನ್ನು ಯಾರೂ ಮೀರಿಸಲು ಅಗುವುದಿಲ್ಲ. ಈ ಸರ್ಕಾರ ಬದುಕಿರುವುದೇ ಭ್ರಷ್ಟಾಚಾರದಲ್ಲಿ ಎಂದು ನೇರ ಆರೋಪ ಮಾಡಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ