ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಮಾಡಿದರೆ ಮತ್ತೊಮ್ಮೆ ಸರ್ಜಿಕಲ್​ ಸ್ಟ್ರೈಕ್​​ ನಡೆಸ್ತೇವೆ: ಪಾಕಿಸ್ತಾನಕ್ಕೆ ಅಮಿತ್​ ಶಾ ಖಡಕ್​ ವಾರ್ನಿಂಗ್‌

ಪಣಜಿ: ಗಡಿಯಲ್ಲಿ ಯಾವುದೇ ರೀತಿಯ ಉಪಟಳ, ದಾಳಿಗಳನ್ನೂ ನಾವು ಸಹಿಸುವುದಿಲ್ಲ. ಪದೇಪದೇ ನಿಯಮ ಉಲ್ಲಂಘನೆ ಮಾಡಿದರೆ, ನಾವು ಇನ್ನಷ್ಟು ಸರ್ಜಿಕಲ್​ ಸ್ಟ್ರೈಕ್​ ನಡೆಸುತ್ತೇವೆ’ ಎಂದು ಗೃಹಸಚಿವ ಅಮಿತ್​ ಶಾ ಪಾಕಿಸ್ತಾನಕ್ಕೆ ಖಡಕ್​ ಎಚ್ಚರಿಕೆ ನೀಡಿದ್ದಾರೆ.
ಗೋವಾದ ಧರ್‌ಬಂದೋರಾದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತಿಕ್ರಮಣ, ಕಾಶ್ಮೀರದಲ್ಲಿ ನಾಗರಿಕರ ಹತ್ಯೆಯಂಥ ಕೃತ್ಯಗಳು ಮುಂದುವರಿದರೆ ಇನ್ನೊಮ್ಮೆ ಸರ್ಜಿಕಲ್​ ಸ್ಟ್ರೈಕ್​ ನಿಶ್ಚಿತ ಎಂದು ಎಚ್ಚರಿಸಿದ್ದಾರೆ.
ಮನೋಹರ್​ ಪರಿಕ್ಕರ್​ ರಕ್ಷಣಾ ಮಂತ್ರಿಯಾಗಿದ್ದಾಗ, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಡೆಸಿದ ಸರ್ಜಿಕಲ್​ ಸ್ಟ್ರೈಕ್​ ಒಂದು ಮಹತ್ವದ ಹೆಜ್ಜೆ. ಭಾರತದ ಗಡಿ ಪ್ರದೇಶಕ್ಕೆ ತೊಂದರೆ ನೀಡುವ ಯಾರನ್ನೂ ನಾವು ಬಿಡುವುದಿಲ್ಲ ಎಂದು ಆಗ ಸರ್ಜಿಕಲ್​ ಸ್ಟ್ರೈಕ್​ ಮೂಲಕ ಸಂದೇಶ ನೀಡಿದ್ದೇವೆ. ಹಿಂದೆ ಮಾತುಕತೆಗೆ ಸಮಯವಿತ್ತು. ಆದರೆ ಈಗ ಮಾತುಕತೆಗೆ ಅರ್ಥ ಉಳಿದಿಲ್ಲ. ಹೀಗಾಗಿ ಏನಿದ್ದರೂ ತೆಗೆದುಕೊಂಡಿದ್ದಕ್ಕೆ ತಿರುಗಿ ಕೊಡುವುದನ್ನು ಮಾತ್ರ ಮಾಡುತ್ತೇವೆ ಎಂದು ಅಮಿತ್‌ ಶಾ ಹೇಳಿದ್ದಾರೆ.
ಭಾರತ ಪಾಕಿಸ್ತಾನದ ಉಗ್ರನೆಲೆಗಳ ಮೇಲೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್​ ಇಂದಿಗೂ ಮೈನವಿರೇಳಿಸುವ ಒಂದು ಸಂದರ್ಭ. ಉರಿಯಲ್ಲಿ ಯೋಧರ ಮೇಲೆ ನಡೆದ ಉಗ್ರದಾಳಿಗೆ ಪ್ರತೀಕಾರವಾಗಿ 2016ರ ಸೆಪ್ಟೆಂಬರ್ 29ರಂದು ಭಾರತ ಪಾಕಿಸ್ತಾನದ ಉಗ್ರರ ಅಡಗುತಾಣದ ಮೇಲೆ ದಾಳಿ ನಡೆಸಿತ್ತು. ಉರಿಯಲ್ಲಿ ದಾಳಿ ನಡೆಸಿದ್ದು ಜೈಷ್​ ಎ ಮೊಹಮ್ಮದ್​ ಸಂಘಟನೆ ಎಂಬುದು ಸಾಬೀತಾಗಿತ್ತು. ಇವರ ದಾಳಿಗೆ ಸುಮಾರು 19 ಯೋಧರು ಹುತಾತ್ಮರಾಗಿದ್ದರು. ಅದಕ್ಕೆ ಪ್ರತಿಯಾಗಿ ಭಾರತ ಸೇನೆ ನಡೆಸಿದ ದಾಳಿಯಲ್ಲಿ 20ಕ್ಕೂ ಹೆಚ್ಚಿನ ಉಗ್ರರು ಮೃತರಾಗಿದ್ದರು. ಅದಾದ ನಂತರ ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ಆತ್ಮಾಹುತಿ ಬಾಂಬ್​ ದಾಳಿ ನಡೆಸಿ, ಸುಮಾರು 40 ಸೈನಿಕರನ್ನು ಹತ್ಯೆ ಮಾಡಿದ್ದ ಉಗ್ರರಿಗೆ ಭಾರತ ಬಾಲಾಕೋಟ್​ ಏರ್​ಸ್ಟ್ರೈಕ್​ ಮೂಲಕ ಪಾಠ ಕಲಿಸಿತ್ತು. ಇದೀಗ ಪಾಕ್​ ಅಂಥ ಕೃತ್ಯ ಮುಂದುವರಿಸಿದರೆ ಸರ್ಜಿಕಲ್​ ಸ್ಟ್ರೈಕ್​ ಮುಂದುವರಿಯುತ್ತದೆ ಎಂದು ಅಮಿತ್​ ಶಾ ಎಚ್ಚರಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ