ಡಿಕೆ ಶಿವಕುಮಾರ್ ನನಗೆ ಗಾಡ್ ಫಾದರ್, ಅವರ ಬಳಿ ಕ್ಷಮೆ ಕೋರುತ್ತೇನೆ, ಈ ವಿಷಯ ಇಲ್ಲಿಗೇ ಕೈಬಿಡಬೇಕು: ಸಲೀಂ

ಬೆಂಗಳೂರು: ಕೆಪಿಸಿಸಿಯಿಂದ ಆರು ವರ್ಷಗಳ ಕಾಲ ಉಚ್ಚಾಟನೆಗೊಂಡಿರುವ ಎಂ.ಎ. ಸಲೀಂ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಗುರುವಾರ ಕೈಮುಗಿದು ಕ್ಷಮೆ ಕೋರಿದ್ದಾರೆ.
ಸಲೀಂ ಕೆಪಿಸಿಸಿ ಮಾಧ್ಯಮ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಡಿ.ಕೆ. ಶಿವಕುಮಾರ್ ಕುರಿತು ಲಘುವಾಗಿ ಮತ್ತು ಬೇಜವಾಬ್ದಾರಿಯಿಂದ ಮಾತನಾಡಿದ ಕಾರಣ ಸಲೀಂ ಅವರನ್ನು ಪಕ್ಷದ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಡಾ.ಕೆ. ರೆಹಮಾನ್ ಖಾನ್ ಬುಧವಾರ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಿದ್ದರು.
ಈ ಎಲ್ಲ ಬೆಳವಣಿಗೆಗಳ ಕುರಿತು ಖಾಸಗಿ ಸುದ್ದಿವಾಹಿನಿಯೊಂದರ ಜೊತೆಗೆ ಮಾತನಾಡಿರುವ ಸಲೀಂ ಅವರು, “ಡಿ.ಕೆ. ಶಿವಕುಮಾರ್ ಬಗ್ಗೆ ಮಾತನಾಡಬಾರದಿತ್ತು. ಅಚಾತುರ್ಯದಿಂದ ಇಂತಹ ಘಟನೆ ನಡೆದಿದೆ. ನನ್ನಿಂದಲೇ ದೊಡ್ಡ ತಪ್ಪಾಗಿದೆ. ಅವರು ಯಾವುದೇ ಶಿಕ್ಷೆ ನೀಡಿದರೂ ಅನುಭವಿಸಲು ಸಿದ್ಧ. ಶಿವಕುಮಾರ್ ಅವರು ನನಗೆ ರಾಜಕೀಯವಾಗಿ ಗಾಡ್‌ಫಾದರ್. ಅವರೇ ನನಗೆ ಅವಕಾಶಗಳನ್ನು ನೀಡಿದ್ದರು. ಈ ರೀತಿ ಆಗಿರುವುದಕ್ಕೆ ಬಹಳ ನೊಂದಿದ್ದೇನೆ” ಎಂದು ಹೇಳಿ ಕ್ಷಮೆ ಕೋರಿದ್ದಾರೆ.
ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ ನಿಜ. ಆದರೆ, ಕೊನೆಯ ಉಸಿರು ಇರುವವರೆಗೂ ನಾನು ಕಾಂಗ್ರೆಸ್ ಪಕ್ಷಕ್ಕಾಗಿಯೇ ಕೆಲಸ ಮಾಡುತ್ತೇನೆ. ಪಕ್ಷದ ಸದಸ್ಯತ್ವ ಇಲ್ಲದಿದ್ದರೂ ಸಹ ಪಕ್ಷಕ್ಕಾಗಿ ನನ್ನ ಬದ್ಧತೆಯನ್ನು ಪಕ್ಷಕ್ಕಾಗಿ ಉಳಿಸಿಕೊಂಡು ಕೆಲಸ ಮುಂದುವರಿಸುತ್ತೇನೆ,
ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಯಾವುದೇ ಕೆಟ್ಟ ದೃಷ್ಟಿಯಿಂದ ಹೇಳಿಕೆ ನೀಡಿಲ್ಲ. ಕೆಲ ದಿನಗಳ ಹಿಂದೆ ಅವರು ರಾಜಭವನದ ಮುಂದೆ ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಶಿವಕುಮಾರ್ ಅವರು ಕುಡಿದಿದ್ದಾರೆ, ಲೋ ಬಿಪಿ ಆಗಿದೆಯಾ ಎಂಬ ಕುರಿತು ಚರ್ಚೆಗಳು ನಡೆದಿದ್ದವು. ಆ ಬಗ್ಗೆ ಉಗ್ರಪ್ಪನವರಿಗೆ ಹೇಳುತ್ತಿದ್ದೆ. ಸಿದ್ದರಾಮಯ್ಯ ಅವರ ತರ ಖಡಕ್ ಆಗಿ ಇರಬೇಕು. ಆ ರೀತಿಯ ಬಾಡಿ ಲಾಂಗ್ವೇಜ್ ಇದ್ದರೆ ಮುಂದೆ ಪಕ್ಷ ಅಧಿಕಾರಕ್ಕೆ ಬರಲು ಸುಲಭವಾಗುತ್ತದೆ ಎಂಬ ಕುರಿತು ಮಾತನಾಡಿದ್ದೆ ಅಷ್ಟೇ ಎಂದು ಅವರು ಹೇಳಿದರು.
ಜಲಸಂಪನ್ಮೂಲ ಇಲಾಖೆಯಲ್ಲಿ ಹಿಂದೆ ಶೇ.6 ಕಮಿಷನ್ ಇತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿ.ವೈ. ವಿಜಯೇಂದ್ರ ಅವರು ಶೇ.12ಕ್ಕೆ ಹೆಚ್ಚಿಸಿದ್ದಾರೆ ಎಂದು ಹೇಳಿದ್ದೇನೆ. ಡಿ.ಕೆ. ಶಿವಕುಮಾರ್ ಅವರು ಕಮಿಷನ್ ಹೆಚ್ಚಿಸಿದ್ದಾರೆ, ಕಮಿಷನ್ ಪಡೆಯುತ್ತಿದ್ದಾರೆ ಎಂದು ನಾನು ಹೇಳಿಲ್ಲ. ಆದರೆ, ವಿಡಿಯೋದಲ್ಲಿ ನನ್ನ ಪೂರ್ಣ ಮಾತುಗಳು ಬಾರದೆ ಮಧ್ಯದಿಂದ ಮಾತನಾಡಿರುವುದನ್ನೇ ತೆಗೆದುಕೊಂಡು ಪ್ರಸಾರ ಮಾಡಲಾಗಿದೆ” ಎಂದು ಅವರು ಹೇಳಿದ್ದಾರೆ.
ಒಟ್ಟಾರೆಯಾಗಿ ನನ್ನಿಂದ ತಪ್ಪಾಗಿದೆ. ನನ್ನ ಅಭಿಪ್ರಾಯವನ್ನೂ ಕೇಳದೆ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ನಾನು ಯಾವ ಮುಖ ಇಟ್ಟುಕೊಂಡು ಶಿವಕುಮಾರ್ ಅವರನ್ನು ಭೇಟಿ ಮಾಡಬೇಕು ಗೊತ್ತಿಲ್ಲ. ಶಿವಕುಮಾರ್ ಅವರು ನೀಡುವ ಯಾವುದೇ ಶಿಕ್ಷೆ ಅನುಭವಿಸಲು ನಾನು ಸಿದ್ಧ, ಈ ವಿಷಯವನ್ನು ಇಲ್ಲಿಗೇ ಕೈಬಿಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಭಟ್ಕಳ : ಮೀನುಗಾರಿಕಾ ಬೋಟ್ ಮುಳುಗಡೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement