ಸಿದ್ದಾಪುರ: ಸಾಂಬಾರು ಸರಿಯಿಲ್ಲವೆಂದು ತಾಯಿ, ತಂಗಿಯನ್ನು ಗುಂಡು ಹಾರಿಸಿ ಕೊಂದ ಯುವಕ!

posted in: ರಾಜ್ಯ | 0

ಸಿದ್ದಾಪುರ: ಗುಂಡು ಹಾರಿಸಿ ಹೆತ್ತ ತಾಯಿ ಮತ್ತು ತಂಗಿಯನ್ನು ಯುವಕ ಹತ್ಯೆಗೈದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ನಡೆದಿದೆ.
ಸಾಂಬಾರ್ ಸರಿಯಿಲ್ಲ ಅಂತ ಮದ್ಯದ ನಶೆಯಲ್ಲಿ ಕೊಲೆ ಮಾಡಿದ್ದಾನೆ. ಈ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮದ ಕುಡಗೋಡು ಬಳಿ ಸಂಭವಿಸಿದೆ. ತಾಯಿ ಪಾರ್ವತಿ ನಾರಾಯಣ ಹಸ್ಲರ್ (42) ಮತ್ತು ತಂಗಿ ರಮ್ಯಾ ನಾರಾಯಣ (19) ಎಂಬವರೇ ಕೊಲೆಯಾದವರು. ಮಂಜುನಾಥ್ ಎಂಬುವವನೇ ಕೊಲೆ ಮಾಡಿದ ಆರೋಪಿ. ಸದ್ಯ ಸಿದ್ದಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
24 ವರ್ಷದ ಮಂಜುನಾಥ ಹಸ್ಲರ್​ಗೆ ವಿಪರೀತ ಕುಡಿತದ ಚಟ. ನಿನ್ನೆ ಕೂಡಾ ಕುಡಿದು ಬಂದು ಸಾಂಬಾರ್ ಸರಿಯಾಗಿಲ್ಲ ಎಂದು ಮನೆಯಲ್ಲಿ ಜಗಳವಾಡಿದ್ದಾನೆ. ಕುಡಿದ ಅಮಲಿನಲ್ಲೇ ಜಗಳವಾಡಿ ನಾಡ ಬಂದೂಕಿನಿಂದ ಗುಂಡು ಹಾರಿಸಿ ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿದ್ದಾನೆ. ಈ ವೇಳೆ ಇಬ್ಬರೂ ಸ್ಥಳದಲ್ಲೇ ಸಾವು ಕಂಡಿದ್ದು ಘಟನೆ ನಡೆಯುವ ವೇಳೆ ತಂದೆ ನಾರಾಯಣ್ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಕುಡುಕ ಆರೋಪಿ ಮಗನ ವಿರುದ್ಧ ತಂದೆ ನಾರಾಯಣ ಹಸ್ಲರ್ ಪೊಲೀಸರಿಗೆ ದೂರು ನೀಡಿದ್ದು, ಸಿದ್ಧಾಪುರ ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧಿಸಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಡೆಗೋಡಿನಲ್ಲಿ ನಡೆದ ಜೋಡಿ ಕೊಲೆ ನಡೆದ ಸ್ಥಳಕ್ಕೆ ಎಸ್.ಪಿ. ಶಿವಪ್ರಕಾಶ್ ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಲೆ ಹಾಗೂ ಅಕ್ರಮ ಬಂದೂಕು ಹೊಂದಿರುವ ಬಗ್ಗೆ ಆತನ ಮೇಲೆ ಪ್ರಕರಣ ದಾಖಲಾಗಿದೆ. ಮೃತರ ಶವಗಳನ್ನು ಪೋಸ್ಟ್ ಮಾರ್ಟಮ್ ಗೆ ಕಾರವಾರಕ್ಕೆ ಕಳಿಸಲಾಗಿದ್ದು ಈ ಎಲ್ಲದರ ಬಗ್ಗೆ ತನಿಖೆ ನಡೆದಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಡಿ. ಎಸ್. ಪಿ. ರವಿನಾಯ್ಕ್, ಪಿ. ಐ. ಕುಮಾರ್, ಪಿ. ಎಸ್. ಐ. ಮಹಾಂತೇಶ್ ಇದ್ದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ