ನವದೆಹಲಿ: ದಕ್ಷಿಣ ಅಫ್ಗಾನಿಸ್ತಾನದ ಕಂದಹಾರ್ ನಗರದಲ್ಲಿರುವ ಶಿಯಾ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆ ಸಂದರ್ಭದಲ್ಲೇ ಸ್ಫೋಟ ಸಂಭವಿಸಿದೆ. ದುರ್ಘಟನೆಯಲ್ಲಿ ಕನಿಷ್ಠ 32ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮೂರು ಕಡೆ ಸ್ಫೋಟ ಸಂಭವಿಸಿದೆ. ಮಸೀದಿಯ ಮುಖ್ಯದ್ವಾರ, ದಕ್ಷಿಣ ಭಾಗ ಮತ್ತು ಪ್ರಾರ್ಥನೆಗೆ ಹಾಜರಾಗುವುದಕ್ಕೂ ಮುನ್ನ ಜನರು ಮುಖ ತೊಳೆಯುವ ಜಾಗದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಅಫ್ಘಾನಿಸ್ತಾನದ ಕುಂಡುಜ್ ನಗರದ ಸೈದ್ ಅಬಾದ್ ಮಸೀದಿಯಲ್ಲಿ ಸಂಭವಿಸಿದ ಭೀಕರ ಸ್ಫೋಟವು 100 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಒಂದು ವಾರದ ನಂತರ ಕಂದಹಾರ್‌ನಲ್ಲಿ ಶಿಯಾ ಮಸೀದಿಯಲ್ಲೇ ಈ ಘಟನೆ ನಡೆದಿದೆ. ಅಮೆರಿಕ ಪಡೆಗಳು ಅಫ್ಘಾನಿಸ್ತಾನವನ್ನು ತೊರೆದ ನಂತರ ಇಂತಹ ದಾಳಿಗಳು ಹೆಚ್ಚುತ್ತಿವೆ.
ಸ್ಫೋಟಕ್ಕೆ ಕಾರಣವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ವಾರದ ಹಿಂದೆಯೂ ಕುಂದುಜ್‌ನಲ್ಲಿ ಶಿಯಾ ಮಸೀದಿಯೊಂದರಲ್ಲಿ ಪ್ರಾರ್ಥನೆ ಸಲ್ಲಿಸುವವರನ್ನು ಗುರಿಯಾಗಿರಿಸಿ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿತ್ತು. ಇಸ್ಲಾಮಿಕ್ ಸ್ಟೇಟ್ಸ್ (ಐಎಸ್) ಉಗ್ರ ಸಂಘಟನೆ ಕೃತ್ಯದ ಹೊಣೆಹೊತ್ತಿತ್ತು. 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.
ಬಿಬಿಸಿಯ ವರದಿಯ ಪ್ರಕಾರ, ಐಎಸ್‌ಕೆಪಿ ಜಿಹಾದಿ ಸಂಘಟನೆ ತಾಲಿಬಾನ್ ಅನ್ನು “ಧರ್ಮಭ್ರಷ್ಟರು” ಎಂದು ಪರಿಗಣಿಸುತ್ತದೆ, ಇದು ಇಸ್ಲಾಮಿಕ್ ಕಾನೂನಿನ ವ್ಯಾಖ್ಯಾನದ ಪ್ರಕಾರ ತಮ್ಮ ಹತ್ಯೆಯನ್ನು ಕಾನೂನುಬದ್ಧಗೊಳಿಸುತ್ತದೆ.
ಈ ಭಯೋತ್ಪಾದಕ ದಾಳಿಯನ್ನು ಭಾರತವು ಖಂಡಿಸಿತು, “ಸಂತ್ರಸ್ತರ ಕುಟುಂಬಗಳಿಗೆ ಅವರ ಕಷ್ಟದ ಸಮಯದಲ್ಲಿ ನಾವು ನಮ್ಮ ಸಂತಾಪ ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇವೆ ಎಂದು ಹೇಳಿದೆ.
ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡಾಗಿನಿಂದ, ಐಎಸ್ಐಎಲ್-ಸಂಬಂಧಿತ ಭಯೋತ್ಪಾದಕರ ದಾಳಿಗಳು ಎರಡು ಗುಂಪುಗಳ ನಡುವೆ ವ್ಯಾಪಕ ಸಂಘರ್ಷದ ಸಾಧ್ಯತೆಯನ್ನು ಸೂಚಿಸುತ್ತವೆ.
ನಿಮ್ಮ ಕಾಮೆಂಟ್ ಬರೆಯಿರಿ