ನೇರ -ಸರಳ ವ್ಯಕ್ತಿತ್ವದ, ಧೀಮಂತ ನಾಯಕ, ಪ್ರಾಮಾಣಿಕ ರಾಜಕಾರಣಿ ಡಾ.ಎಂ.ಪಿ.ಕರ್ಕಿ ನಿಧನ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆ ಕಂಡ ಧೀಮಂತ ರಾಜಕಾರಣಿ ಹಾಗೂ ಬಿಜೆಪಿ ಹಿರಿಯ ನಾಯಕ, ಮಾಜಿ ಶಾಸಕ ಹಾಗೂ ಖ್ಯಾತ ವೈದ್ಯ ಡಾ. ಎಂ.ಪಿ.ಕರ್ಕಿ (೮೬) ತಮ್ಮ ವಯೋಸಹಜ ಅನಾರೋಗ್ಯದಿಂದ ಇಂದು (ಸೋಮವಾರ) ಸಂಜೆ ನಿಧನರಾಗಿದ್ದಾರೆ.
ಕೆಲವು ದಿನಗಳ ಹಿಂದೆ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಡಿಸ್ಟಾರ್ಜ್ ಮಾಡಿ ಹೊನ್ನಾವರಕ್ಕೆ ಕರೆತಂದು ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇಂದು (ಸೋಮವಾರ) ಸಂಜೆ ೭ ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಮಂಗಳವಾರ ಅವರ ಅಂತ್ಯಕ್ರಿಯೆ ನೆರವೇರಲಿದೆ.

ಅವರಿಗೆ ಪತ್ನಿ ಲಕ್ಷ್ಮೀ, ಮಗ ರವೀಂದ್ರ ಕರ್ಕಿ, ಮಗಳು ಕಾಂಚನಾ ಇದ್ದಾರೆ. ಹಾಗೂ ಅಪಾರ ಬಂಧು-ಮಿತ್ರರು ಹಾಗೂ ಅಭಿಮಾನಿ ಬಳಗವನ್ನು ಅವರು ಅಗಲಿದ್ದಾರೆ.
ಈಗಲೂ ಎಂ.ಪಿ.ಇ ಸೊಸೈಟಿ ಎಸ್.ಡಿಎಂ ಕಾಲೇಜಿನ ಅಧ್ಯಕ್ಷರಾಗಿದ್ದ ಅವರು ೧೬ಜುಲೈ ೧೯೩೫ ರಂದು ಜನಿಸಿದ್ದರು. ಡಾ. ಎಂ.ಪಿ.ಕರ್ಕಿ ಅವರು ಮುಂಬೈಯಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ತಮ್ಮ ಊರಾದ ಹೊನ್ನಾವರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ ಅಪಾರ ಖ್ಯಾತಿ ಗಳಿಸಿದ್ದರು. ಜನಾನುರಾಗಿ ಹಾಗೂ ತಮ್ಮ ಪ್ರಮಾಣಿಕ ವ್ಯಕ್ತಿತ್ವದ ಮೂಲಕ ಹೆಸರಾಗಿದ್ದ ಅವರು, ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವಾಗಲೇ ಜನ ಸಂಘದ ಮೂಲಕ ರಾಜಕೀಯ ಪ್ರವೇಶಿಸಿ ಜಿಲ್ಲೆಯಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕರಲ್ಲೊಬ್ಬರಾಗಿದ್ದರು.
ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಮುಂತಾದ ಬಿಜೆಪಿಯ ಘಟಾನುಘಟಿ ನಾಯಕರ ಆತ್ಮೀಯ ಒಡನಾಟ ಹೊಂದಿದ್ದರು. ವಾಜಪೇಯಿ, ಅಡ್ವಾಣಿ ಮುಂತಾದ ನಾಯಕರು ಇವರ ಮನೆಗೆ ಭೇಟಿ ನೀಡಿದ್ದರು.

ವಾಜಪೇಯಿ ತಮ್ಮ ಮನೆಯಲ್ಲಿ ಜಿಲೇಬಿ ಸವಿದಿದ್ದನ್ನು ನೆನಪಿಸಿಕೊಂಡಿದ್ದರು..

ವಾಜಪೇಯಿ ಅವರ ಜೊತೆ ನಿಕಟ ಒಡನಾಟ ಹೊಂದಿದ್ದ ಡಾ.ಕರ್ಕಿಯವರುಮಾಜಿ ಪ್ರಧಾನಿ ವಾಜಪೇಯಿ ನಿಧನರಾದ ಸಂದರ್ಭದಲ್ಲಿ ವಾಜಪೇಯಿ ತಮ್ಮ ಮನೆಗೆ ಬಂದಿದ್ದ ಕ್ಷಣಗಳನ್ನು ಅವರು ನೆನಪಿಸಿಕೊಂಡಿದ್ದರು. ವಾಜಪೇಯಿ ಅವರಿಗೆ ಸಿಹಿಮೂತ್ರದ ಖಾಯಿಲೆ ಇತ್ತು. ಆದರೆ ತಮ್ಮ ಮನೆಗೆ ಬಂದಾಗ ಅವರು ತನಗೆ ಸಿಹಿಮೂತ್ರದ ಖಾಯಿಲೆ ಇದೆ ಎಂದು ಹೇಳುತ್ತಲೇ ಎರಡ್ಮೂರು ಜಿಲೇಭಿ ತಿಂದಿದ್ದನ್ನು ನೆನಪಿಸಿಕೊಂಡಿದ್ದರು.

೧೯೮೩ ಮತ್ತು ೧೯೯೪ರಲ್ಲಿ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಶಾಸಕರಾಗಿದ್ದಾಗ ಕುಮಟಾ-ಹೊನ್ನಾವರ ಮರಾಕಲ್ ಕುಡಿಯುವ ನೀರಿನ ಯೋಜನೆಯನ್ನು ಕೈಗೊಂಡಿದ್ದು ಇಂದಿಗೂ ಕುಮಟಾ ಹಾಗೂ ಹೊನ್ನಾವರ ಪಟ್ಟಣಗಳು ಸಂಪೂರ್ಣವಾಗಿ ಇದೇ ಕುಡಿಯುವ ನೀರಿನ ಮೇಲೆ ಅವಲಂಬಿತವಾಗಿವೆ.
ನೇರ, ನಡೆ ನುಡಿ ವ್ಯಕ್ತಿತ್ವದ ಡಾ. ಕರ್ಕಿ ಅವರು ಪ್ರಾಮಾಣಿಕತನಕ್ಕೆ ಹೆಸರಾಗಿದ್ದರು. ರಾಜಕೀಯದ ಆರಂಭಿಕ ದಿನಗಳಲ್ಲಿ ಹೊನ್ನಾವರ ಮುನ್ಸಿಪಾಲಿಟಿ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾಗಿ, ಕರ್ಣಾಟಕ ಬ್ಯಾಂಕ್ ನಿರ್ದೇಶಕರಾಗಿ, ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ಕಿಯಲ್ಲಿ ಹವ್ಯಕ ಸಭಾಭವನದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಸಿದ್ದರು. ಅಲ್ಲದೆ ಹೊನ್ನಾಔರ ಕಾಸರಕೋಡಿನ ಸಹಕಾರ ಸಂಸ್ಥೆಯ ಹಂಚಿನ ಕಾರ್ಖಾನೆ ಅಧ್ಯಕ್ಷರಾಗಿದ್ದರು.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

ಬೇರೆ ಪಕ್ಷದಲ್ಲಿದ್ದ ಡಾ.ಕರ್ಕಿ ಅವರನ್ನು ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ಹೊಗಳಿದ್ದರು..

ಒಮ್ಮೆ ರಾಮಕೃಷ್ಣ ಹೆಗಡೆ ಅವರು ಚುನಾವಣಾ ಪ್ರಚಾರಕ್ಕೆ ಕುಮಟಾಕ್ಕೆ ಬಂದಿದ್ದರು. ಆಗ ಜನತಾದಳ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ರಾಮಕೃಷ್ಣ ಹೆಗಡೆ ಅದರ ಅಗ್ರ ನಾಯಕರಾಗಿದ್ದರು. ಆ ಚುನಾವಣೆಯಲ್ಲಿ ಡಾ.ಕರ್ಕಿ ಅವರೂ ಕುಮಟಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು.
ರಾಮಕೃಷ್ಣ ಹೆಗಡೆ ಅವರು ಚುನಾವಣಾ ಪ್ರಚಾರ ಭಾಷಣ ಮಾಡುವಾಗ ಮತ್ತೊಂದು ಪಕ್ಷದ ಅಭ್ಯರ್ಥಿಯಾದ ಡಾ.ಕರ್ಕಿ ಅವರ ಬಗ್ಗೆ ಮೆಚ್ಚುಗೆ ಮಾತನ್ನು ಆಡಿದ್ದರು ಹಾಗೂ ಅವರ  ವ್ಯಕ್ತಿತ್ವದ ಬಗ್ಗೆ ಮುಕ್ತವಾಗಿ ಪ್ರಶಂಸೆ ಮಾಡಿದ್ದರು. ಅಂಥ ಒಂದು ವ್ಯಕ್ತಿತ್ವ ಡಾ.ಎಂ.ಪಿ,ಕರ್ಕಿ ಅವರದ್ದಾಗಿತ್ತು.

ಸುದೀರ್ಘ ಕಾಲದಿಂದ ಹೊನ್ನಾವರ ಎಸ್.ಡಿ.ಎಂ. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಅವರು ಕಾಲೇಜಿನ ಸರ್ವತೋಮುಖ ಅಭಿವೃದ್ದಿಗೆ ಕಾರಣರಾಗಿದ್ದಾರೆ. ಸಿಬಿಎಸ್‌ಸಿ ಶಾಲೆಯನ್ನೂ ಆರಂಭಿಸಿದ್ದಾರೆ.
ಸಂತಾಪ: ಡಾ. ಕರ್ಕಿಯವರ ನಿಧನಕ್ಕೆ ಶಾಸಕ ದಿನಕರ ಶೆಟ್ಟಿ, ಶಾಸಕ ಸುನೀಲ ನಾಯ್ಕ, ಹೊನ್ನಾವರ ಪ.ಪಂ. ಅಧ್ಯಕ್ಷ ಶಿವರಾಜ ಮೇಸ್ತ, ಬಿಜೆಪಿ ಹೊನ್ನಾವರ ಮಂಡಲದ ಅಧ್ಯಕ್ಷ ರಾಜು ಭಂಡಾರಿ ಸೇರದಂತೆ ಗಣ್ಯರು, ಸಾರ್ವಜನಿಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ವಾಜಪೇಯಿ, ಅಡ್ವಾಣಿ ಅವರನ್ನು ತಮ್ಮ ಕಾರಿನಲ್ಲಿ ಅಡ್ಡಾಡಿಸಿದ್ದರು..ಜನಸಂಘದ ಕಾಲದಲ್ಲಿಯೇ (ಈಗಿನ ಬಿಜೆಪಿಯ ಮೂಲ ಸ್ವರೂಪ) ರಾಜಕೀಯದಲ್ಲಿದ್ದ ಅವರು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಮಾಜಿ ಉಪಪ್ರಧಾನಿ ಅಡ್ವಾಣಿ ಅವರನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಅಡ್ಡಡಿದ್ದರು. ಆಗ ಬಿಜೆಪಿ ಇಷ್ಟೊಂದು ಬೆಳೆದಿರಲಿಲ್ಲ. ಬಿಜೆಪಿ ರಾಜ್ಯದಲ್ಲಿ ಅಷ್ಟೊಂದು ಬಲ ಪಡೆದಿರದ ಸಂದರ್ಭದಲ್ಲಿ ತಮ್ಮ ವ್ಯಕ್ತಿತ್ವದ ಮೂಲಕ ಅವರು ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ್ದರು. ತಮ್ಮ ಪ್ರಾಮಾಣಿಕ ಹಾಗೂ ನೇರ ವ್ಯಕ್ತಿತ್ವದಿಂದಾಗಿ ಈಗಲೂ ಅವರು ಪಕ್ಷಾತೀತವಾಗಿ ಅಪಾರ ಗೌರವ ಹೊಂದಿದ್ದರು.
ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರವಿದ್ದಾಗ ಈ ವಿಧಾನಸಭೆ ಕಲಾಪದ ಸಂದರ್ಭದಲ್ಲಿ ಅಂದಿನ ರಾಮಕೃಷ್ಣ ಹೆಗಡೆ ಸರ್ಕಾರ ಅಧಿಕಾರದಲ್ಲಿದ್ದಾಗ ಎಂ.ಪಿ.ಕರ್ಕಿ ಅವರ ಮಾತನಾಡುತ್ತಿದ್ದುದನ್ನು ಗೋವಿಂದ ಕಾರಜೋಳ ನೆನಪು ಮಾಡಿಕೊಂಡಿದ್ದರು.ಆಗ ಕಾರಜೋಳ ಜನತಾದಳದಲ್ಲಿದ್ದರು. ಅಂಥ ವ್ಯಕ್ತಿತ್ವ ಅವರದ್ದಾಗಿತ್ತು.

 

 

5 / 5. 3

ನಿಮ್ಮ ಕಾಮೆಂಟ್ ಬರೆಯಿರಿ

advertisement