ಲಾಹೋರ್: ಮಗಳು ತನ್ನ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿದ್ದಾಳೆ ಎಂಬ ಕಾರಣಕ್ಕೆ ಸ್ವತಃ ತಂದೆಯೇ ತನ್ನ ಹೆಣ್ಣುಮಕ್ಕಳಿದ್ದ ಮನೆಗೆ ಬೆಂಕಿ ಹಚ್ಚಿದ ಪರಿಣಾಮ 7 ಮಂದಿ ಸಜೀವ ದಹನವಾದ ಘಟನೆ ಆಘಾತಕಾರಿ ಘಟನೆ ಪಾಕಿಸ್ತಾನದ ಮುಜಾಫರ್ಗರ್ ಜಿಲ್ಲೆಯ ಪೀರ್ ಜಹನೈನ್ ಪಟ್ಟಣದಲ್ಲಿ ವರದಿಯಾಗಿದೆ. ಈ ಸಂಬಂಧ ಆರೋಪಿ ಮಂಜೂರ್ ಹುಸೇನ್ ವಿರುದ್ಧ ಪೊಲೀಸರು ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ಮಂಜೂರ್ ಹುಸೇನ್ ಬೆಂಕಿ ಹಚ್ಚಿದ ಮನೆಯಲ್ಲಿ ಆತನ ಇಬ್ಬರು ಹೆಣ್ಣು ಮಕ್ಕಳಾದ ಫೌಜಿಯಾ ಬೀಬಿ ಹಾಗೂ ಖುರ್ಷಿದ್ ಮಾಯಿ ಅವರ ಕುಟುಂಬ ವಾಸವಾಗಿತ್ತು. ಈ ದುರ್ಘಟನೆಯಲ್ಲಿ ಫೌಜಿಯಾ ಬೀಬಿ, ಖುರ್ಷಿದ್ ಮಾಯಿ, ಫೌಜಿಯಾ ಬೀಬಿ ನಾಲ್ಕು ತಿಂಗಳ ಪುತ್ರ, ಖುರ್ಷಿದ್ ಮಾಯಿ ಮೂರು ಮಕ್ಕಳು ಹಾಗೂ ಅವರ ಪತಿ ಸಜೀವವಾಗಿ ದಹನವಾಗಿದ್ದಾರೆ.
ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ನಡೆಯುವ ವೇಳೆ ಫೌಜಿಯಾ ಪತಿ ಮೆಹಬೂಬ್ ಅಹಮದ್ ಕೆಲಸದ ನಿಮಿತ್ತ ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಹಮದ್ ಹಾಗೂ ಫೌಜಿಯಾ ಬೀಬಿ 18 ತಿಂಗಳ ಹಿಂದೆ ವಿವಾಹವಾಗಿದ್ದರು. ಈ ಮದುವೆಗೆ ಮಂಜೂರ್ ಹುಸೇನ್ ವಿರೋಧವಿತ್ತು. ಫೌಜಾಯಿ ಬೀಬಿ ಹಾಗೂ ಸಹೀದರಿ ಖುರ್ಷಿದಾ ಮಾಯಿ ಕುಟುಂಬ ಒಂದೆ ಮನೆಯಲ್ಲಿ ವಾಸಿಸುತ್ತಿತ್ತು. ಫೌಜಿಯಾ ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ದ್ವೇಷ ಬೆಳೆಸಿಕೊಂಡಿದ್ದ ಹುಸೇನ್ ತಮ್ಮ ಪುತ್ರಿಯರಿದ್ದ ಮನೆಗೆ ಬೆಂಕಿ ಇಟ್ಟಿದ್ದಾನೆ. ಪ್ರಕರಣ ಸಂಬಂಧ ಮೆಹಬೂಬ್ ಅಹಮದ್ ಅವರು ತನ್ನ ಮಾವ ಮಂಜೂರ್ ಹುಸೇನ್ ಹಾಗೂ ಅವರ ಪುತ್ರ ಸಬೀರ್ ಹುಸೇನ್ ವಿರುದ್ಧ ದೂರು ದಾಖಲಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ