ಭಾರತದಲ್ಲೇ ನಡೆದ ಪವಾಡ..70ನೇ ವರ್ಷಕ್ಕೆ ಮೊದಲ ಮಗುವನ್ನು ಹೆತ್ತಳಾ ಮಹಾತಾಯಿ..!

ಸಾಮಾನ್ಯವಾಗಿ ಮೊಮ್ಮಕ್ಕಳೋ ಮರೊಮೊಕ್ಕಳನ್ನೋ ಪಡೆಯುವ ವಯಸ್ಸಿನ ಅಜ್ಜಿಯೊಬ್ಬಳು ತಾಯಿಯಾಗಿದ್ದಾಳೆ. ಬರೋಬ್ಬರಿ 70 ವರ್ಷ ವಯಸ್ಸಿನ ಮಹಿಳೆಯು ತನ್ನ ಮೊಮ್ಮಕ್ಕಳು ಮತ್ತು ಮರಿ ಮೊಮ್ಮಕ್ಕಳೊಂದಿಗೆ ಸಮಯ ಕಳೆಯ ಬೇಕಾದ ವಯಸ್ಸಿನಲ್ಲಿ ಮೊದಲ ಮಗುವಿಗೆ ಜನ್ಮ (Delivery) ನೀಡಿದ್ದಾರೆ…! ಅದೂ ಭಾರತದಲ್ಲಿ..!! ಇದನ್ನು ಒಮ್ಮೆಗೇ ನಂಬುವುದು ಕಷ್ಟ. ಆದರೆ ಇದು ಒಂದು ತಿಂಗಳ ಹಿಂದೆ ಗುಜುರಾತಿನ ಕಛ್‌ನಲ್ಲಿ ನಡೆದಿದೆ ಮತ್ತು ಇದು ಸಾಧ್ಯವಾಗಿದ್ದು ಐವಿಎಫ್ (IVF) ಮೂಲಕ. ಈ ಪ್ರಕ್ರಿಯೆಯು ಭುಜ್‌ ವೈದ್ಯರಿಗೆ ದೊಡ್ಡ ಸವಾಲಾಗಿತ್ತು. ಆದರೂ ಈ ವೃದ್ಧೆಯ ಮಕ್ಕಳನ್ನು ಪಡೆಯುವ ಬಯಕೆಯನ್ನು ವೈದ್ಯರು ಪೂರೈಸಿದ್ದಾರೆ.
ಜಿವುಬೆನ್ ವಾಲಾಭಾಯಿ ರಬಾರಿ ಅವರು ಮಕ್ಕಳನ್ನು ಪಡೆಯಬೇಕು ಎಂದು ಧೈರ್ಯ ತೋರಿದ್ದಕ್ಕೆ ವೈದ್ಯರು ಈ ಅಸಾಧ್ಯವಾದುದನ್ನು ಸಾಧ್ಯವಾಗಿಸಿದರು. ಜಿವುಬೆನ್ ಮೂಲತಃ ರಾಪರ್ ತಾಲ್ಲೂಕಿನ ಮೋರಾ ಗ್ರಾಮದ ನಿವಾಸಿಯಾಗಿದ್ದು ತನ್ನ ವಯಸ್ಸನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳನ್ನು ಹೊಂದಿಲ್ಲ.

ವೈದ್ಯರ ಮುಂದೆ ತನ್ನ ಆಸೆ ಮುಂದಿಟ್ಟ ವೃದ್ಧೆ..
ನನಗೆ ಸುಮಾರು 65 -70 ವರ್ಷ ವಯಸ್ಸಾಗಿರಬಹುದು ಎಂದು ಜಿವುಬೆನ್ ವೈದ್ಯರಿಗೆ ಹೇಳಿದ್ದರು. ಈ ವಯಸ್ಸಿನಲ್ಲಿ ತಾನು ಒಂದು ಮಗುವಿಗೆ ಜನ್ಮ ನೀಡಲೇಬೇಕು ಎನ್ನುವ ಆಕೆಯ ಅಚಲ ನಿರ್ಧಾರ ನಾವು ಈ ಪ್ರಕ್ರಿಯೆ ಪ್ರಾರಂಭಿಸುವಂತೆ ಮಾಡಿತು ಎಂದು ವೈದ್ಯರು ಹೇಳುತ್ತಾರೆ.
ಈ ವೃದ್ಧ ದಂಪತಿಗಳ ಬಯಕೆಗೆ ನಾವು ಮಣಿಯಲೇ ಬೇಕಾಯಿತು ಮತ್ತು ಅವರ ಮೊದಲ ಮಗು, ಅವರು ಮದುವೆಯಾದ ಸರಿ ಸುಮಾರು 45 ವರ್ಷಗಳ ನಂತರ ಜನಿಸಿದೆ ಎಂದು ವೈದ್ಯರು ಹೇಳುತ್ತಾರೆ. ಈ ವಯಸ್ಸಿನಲ್ಲಿ ಗರ್ಭಧಾರಣೆಯ ಅಪಾಯ ತೆಗೆದುಕೊಳ್ಳದಂತೆ ಜಿವುಬೆನ್‌ಗೆ ವೈದ್ಯರು ಸಲಹೆ ಮಾಡಿದ್ದರಂತೆ. ಆದರೆ ಮಗುವನ್ನು ಪಡೆಯುವ ಕುರಿತು ಅವರು ಭಾವೋದ್ವೇಗಕ್ಕೆ ಒಳಗಾಗಿದ್ದರಂತೆ.
ಸ್ತ್ರೀರೋಗ ತಜ್ಞ ಡಾ. ನರೇಶ್ ಭಾನುಶಾಲಿ, “ನಾವು ಮೊದಲು ಔಷಧಿಗಳನ್ನು ನೀಡುವ ಮೂಲಕ ಅವರ ಋತುಚಕ್ರವನ್ನು ನಿಯಮಿತವಾಗಿ ಆಗುವಂತೆ ಮಾಡಿದ್ದೇವೆ. ನಂತರ ವಯಸ್ಸಿನ ಕಾರಣದಿಂದಾಗಿ ಕುಗ್ಗಿದ ಅವರ ಗರ್ಭಾಶಯವನ್ನು ಹಿಗ್ಗಿಸಿದ್ದೇವೆ. ನಂತರ ಬ್ಲಾಸ್ಟೋಸಿಸ್ಟ್ ತಯಾರಾಗುವಂತೆ ಮಾಡಿ ಅದನ್ನು ಗರ್ಭಾಶಯಕ್ಕೆ ವರ್ಗಾಯಿಸಿದೆವು ಎಂದು ಅವರು ಹೇಳಿದ್ದಾರೆ.
ಸ್ಕ್ಯಾನಿಂಗ್ ನೋಡಿ ವೈದ್ಯರೇ ಶಾಕ್..:
ಎರಡು ವಾರಗಳ ನಂತರ ವೈದ್ಯರು ಜಿವುಬೆನ್ ಅವರ ಸೋನೋಗ್ರಫಿ ಮಾಡಿದರು ಮತ್ತು ಭ್ರೂಣವು ಬೆಳೆಯುವುದನ್ನು ನೋಡಿ ಖುದ್ದು ವೈದ್ಯರೇ ಅಚ್ಚರಿಪಟ್ಟಿದ್ದಾರೆ. ನಂತರ ಸಮಯಕ್ಕೆ ಸರಿಯಾಗಿ ಹೃದಯ ಬಡಿತ ನಡೆಯುತ್ತಿತ್ತು. ಅದರಲ್ಲಿ ಯಾವುದೇ ದೋಷ ಕಾಣಲಿಲ್ಲ ಮತ್ತು ಆದ್ದರಿಂದ, ಗರ್ಭಧಾರಣೆಯೊಂದಿಗೆ ಮುಂದುವರಿಯಲಾಯಿತು.
ಆಕೆಯ ರಕ್ತದೊತ್ತಡ ಅಧಿಕವಾಗಿತ್ತು ಮತ್ತು ಗರ್ಭಾವಸ್ಥೆಯ ಎಂಟನೇ ತಿಂಗಳಲ್ಲಿ ನಾವು ಮಗುವನ್ನು ಸಿ-ಸೆಕ್ಷನ್ ಮೂಲಕ ಹೆರಿಗೆ ಮಾಡಬೇಕಾಗಿತ್ತು” ಎಂದು ಡಾ ಭಾನುಶಾಲಿ ದಿ ನ್ಯಾಷನಲ್‌ಗೆ ತಿಳಿಸಿದ್ದಾರೆ.
ನಾವು ಹೃದ್ರೋಗ ತಜ್ಞರು, ಸ್ಟ್ಯಾಂಡ್‌ಬೈನಲ್ಲಿರುವ ವೈದ್ಯರು ಸೇರಿದಂತೆ ವೈದ್ಯರ ತಂಡವನ್ನು ಹೊಂದಿದ್ದೆವು … ಆಕೆಯ ವಯಸ್ಸಿನ ಕಾರಣ ಏನಾದರೂ ತಪ್ಪಾಗಿರಬಹುದು ಎಂಬ ಆತಂಕವಿತ್ತು, ಆದರೆ ಆಕೆ ಚೆನ್ನಾಗಿದ್ದಳು ಮತ್ತು ಆರೋಗ್ಯವಂತ ಮಗುವಿಗೆ ಜನ್ಮ ನೀಡಿದಳು ಎಂದು ಅವರು ಹೇಳಿದರು.
ತಾಯಿಗೆ ವೈದ್ಯರು ಎಂಟು ತಿಂಗಳ ಗರ್ಭಧಾರಣೆಯ ನಂತರ ಸಿ-ಸೆಕ್ಷನ್ ಮಾಡಿದರು ಮತ್ತು ಮಗು ಹಾಗೂ ತಾಯಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಒಟ್ಟಿನಲ್ಲಿ ಒಂದು ಮಗುವಿಗೆ ಜನ್ಮ ನೀಡಬೇಕು ಎಂಬ ತಾಯಿಯ ಭಾವನಾತ್ಮಕ ಹಂಬಲ ಈಡೇರಿದೆ ಎಂದು ಹೇಳಬಹುದು.
ಹಿರಿಯ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದ ಪ್ರಸಕ್ತ ವಿಶ್ವ ದಾಖಲೆ ಹೊಂದಿರುವ ಮರಿಯಾ ಡೆಲ್ ಕಾರ್ಮೆನ್ ಬೌಸಾಡಾ ಲಾರಾ ಅವರಿಗೆ ಸ್ಪೇನ್‌ನಲ್ಲಿ 66 ವರ್ಷ, 358 ದಿನ ವಯಸ್ಸಾಗಿದ್ದಾಗ ಅವಳಿ ಗಂಡು ಮಕ್ಕಳನ್ನು ಸಿಸೇರಿಯನ್ ಮೂಲಕ ತೆಗೆಯಲಾಯಿತು. ಜಿವುನ್ಬೆನ್ ರಬಾರಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪುಸ್ತಕಗಳಲ್ಲಿ ಅಧಿಕೃತ ಪ್ರವೇಶವನ್ನು ಬಯಸುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ ಮತ್ತು ಆಕೆಯ ವಯಸ್ಸನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ. ಯಾಕೆಂದರೆ ಈ ಬಗ್ಗೆ ದಾಖಲೆಗಳು ಇನ್ನೂ ಸ್ಪಷ್ಟವಾಗಬೇಕಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ