ಸುಧಾರಿಸದ ತಾಲಿಬಾನ್‌…ಅಫ್ಘಾನ್ ಮಹಿಳಾ ರಾಷ್ಟ್ರೀಯ ತಂಡದಲ್ಲಿದ್ದ ಜೂನಿಯರ್ ವಾಲಿಬಾಲ್ ಆಟಗಾರ್ತಿಯ ಶಿರಚ್ಛೇದ ಮಾಡಿದ ತಾಲಿಬಾನ್: ವರದಿ…!

ತಾಲಿಬಾನ್ ಉಗ್ರರು ಅಫ್ಘಾನ್ ಜೂನಿಯರ್ ಮಹಿಳಾ ರಾಷ್ಟ್ರೀಯ ವಾಲಿಬಾಲ್ ತಂಡದ ಆಟಗಾರ್ತಿಯ ಶಿರಚ್ಛೇದ ಮಾಡಿದ್ದಾರೆ ಎಂದು ತಂಡದ ತರಬೇತುದಾರ ತಿಳಿಸಿದ್ದಾರೆ ಎಂದು ಪರ್ಷಿಯನ್ ಇಂಡಿಪೆಂಡೆಂಟ್‌ ವರದಿ ಮಾಡಿದೆ.
ಸಂದರ್ಶನವೊಂದರಲ್ಲಿ, ತರಬೇತುದಾರರು ಮಹಜಬಿನ್ ಹಕಿಮಿ ಎಂಬ ಮಹಿಳಾ ಆಟಗಾರ್ತಿಯನ್ನು ಅಕ್ಟೋಬರ್ ಆರಂಭದಲ್ಲಿ ತಾಲಿಬಾನ್ ಹತ್ಯೆಗೈದಿತ್ತು, ಆದರೆ ಉಗ್ರರು ಆಕೆಯ ಬಗ್ಗೆ ಮಾತನಾಡದಂತೆ ಬೆದರಿಕೆ ಹಾಕಿದ್ದರಿಂದ ಯಾರೂ ಈ ಭೀಕರ ಹತ್ಯೆಯ ಬಗ್ಗೆ ಮಾತನಾಡಲಿಲ್ಲ ಎಂದು ಅವರು ಹೇಳಿದ್ದಾರೆ.
ಅಶ್ರಫ್ ಘನಿ ಸರ್ಕಾರದ ಪತನದ ಮೊದಲು ಮಹಜಬಿನ್ ಕಾಬೂಲ್ ಮುನ್ಸಿಪಾಲಿಟಿ ವಾಲಿಬಾಲ್ ಕ್ಲಬ್‌ಗಾಗಿ ಆಡಿದ್ದರು ಮತ್ತು ಕ್ಲಬ್‌ನ ಸ್ಟಾರ್ ಆಟಗಾರರಲ್ಲಿ ಒಬ್ಬರಾಗಿದ್ದರು. ನಂತರ, ಕೆಲವು ದಿನಗಳ ಹಿಂದೆ, ಆಕೆಯ ಕತ್ತರಿಸಿದ ತಲೆ ಮತ್ತು ರಕ್ತಸಿಕ್ತ ಕುತ್ತಿಗೆಯಂತೆ ಕಾಣುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದುದಾಡಿದ್ದವು.
ಆಗಸ್ಟ್ ನಲ್ಲಿ ತಾಲಿಬಾನ್ ಸಂಪೂರ್ಣ ನಿಯಂತ್ರಣ ಸಾಧಿಸುವ ಮುನ್ನ ತಂಡದ ಇಬ್ಬರು ಆಟಗಾರರು ಮಾತ್ರ ದೇಶದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು. ಮಹಜಬಿನ್ ಹಕೀಮಿ ಉಳಿದ ಅನೇಕ ದುರದೃಷ್ಟಕರ ಮಹಿಳಾ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದರು ಎಂದು ಅಫ್ಘಾನ್ ಮಹಿಳಾ ರಾಷ್ಟ್ರೀಯ ವಾಲಿಬಾಲ್ ತಂಡದ ಕೋಚ್ ಹೇಳಿದ್ದಾರೆ.
ಅಫ್ಘಾನಿಸ್ತಾನವನ್ನು ಸಾಔಧೀನಕ್ಕೆ ತೆಗೆದುಕೊಂಡ ನಂತರ ತಾಲಿಬಾನಿಗಳು ಮಹಿಳಾ ಕ್ರೀಡಾಪಟುಗಳನ್ನು ಗುರುತಿಸಿ ಕೊಲ್ಲಲು ಪ್ರಯತ್ನಿಸಿದ್ದಾರೆ. ಉಗ್ರಗಾಮಿಗಳು ಅಫ್ಘಾನಿಸ್ತಾನದ ಮಹಿಳಾ ವಾಲಿಬಾಲ್ ತಂಡದ ಸದಸ್ಯರನ್ನು ಹುಡುಕಲು ಉತ್ಸುಕರಾಗಿದ್ದರು, ಈ ಮಹಿಳಾ ಆಟಗಾರರು ವಿದೇಶಿ ಮತ್ತು ದೇಶೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು ಮತ್ತು ಹಿಂದೆ ಮಾಧ್ಯಮ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ತರಬೇತುದಾರ ಹೇಳಿದ್ದಾರೆ.
“ವಾಲಿಬಾಲ್ ತಂಡದ ಎಲ್ಲಾ ಆಟಗಾರರು ಮತ್ತು ಉಳಿದ ಮಹಿಳಾ ಕ್ರೀಡಾಪಟುಗಳು ಹತಾಶೆ ಮತ್ತು ಭಯದಲ್ಲಿದ್ದಾರೆ” ಎಂದು ಅವರು ಪರ್ಷಿಯನ್ ಇಂಡಿಪೆಂಡೆಂಟ್‌ಗೆ ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ರಾಷ್ಟ್ರೀಯ ಮಹಿಳಾ ವಾಲಿಬಾಲ್ ತಂಡವನ್ನು 1978 ರಲ್ಲಿ ಸ್ಥಾಪಿಸಲಾಗಿತ್ತು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ