ಆತ್ಮಾಹುತಿ ಬಾಂಬರ್‌ಗಳ ಕುಟುಂಬಕ್ಕೆ ನಿವೇಶನದ ಜೊತೆ ನಗದು ಬಹುಮಾನ ಘೋಷಿಸಿದ ತಾಲಿಬಾನ್‌ ಸರ್ಕಾರ..!

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಆತ್ಮಾಹುತಿ ಬಾಂಬರ್‌ಗಳಿಗೆ ಉತ್ತೇಜನ ನೀಡುವ ಹೊಸ ಭರವಸೆಯನ್ನು ತಾಲಿಬಾನ್ ಸರ್ಕಾರ ಜಾರಿಗೊಳಿಸಲು ಮುಂದಾಗಿದೆ.
ಅಮೆರಿಕ ಮತ್ತು ಅಫ್ಘಾನಿಸ್ತಾನದ ಯೋಧರ ಮೇಲೆ ದಾಳಿ ನಡೆಸಿದ ಆತ್ಮಾಹುತಿ ಬಾಂಬರ್ ಗಳ ಕುಟುಂಬಕ್ಕೆ ಭೂಮಿ ಮತ್ತು ನಗದು ಬಹುಮಾನ ನೀಡುವುದಾಗಿ ತಾಲಿಬಾನ್ ಭರವಸೆ ನೀಡಿದೆ. ಅಲ್ಲದೇ ಆತ್ಮಾಹುತಿ ಬಾಂಬರ್‌ಗಳನ್ನು ತಾಲಿಬಾನ್ ಸರ್ಕಾರ ಹುತಾತ್ಮರು ಎಂದು ಬಣ್ಣಿಸಿದೆ.
ತಾಲಿಬಾನ್‌ನ ಹಂಗಾಮಿ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿ, ಕಾಬೂಲ್ ಹೋಟೆಲ್‌ನಲ್ಲಿ ಒಟ್ಟುಗೂಡಿದ ಬಾಂಬರ್‌ಗಳ ಕುಟುಂಬ ಸದಸ್ಯರಿಗೆ ಬಹುಮಾನ ನೀಡಿದ್ದಾರೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಸಯೀದ್ ಖೋಸ್ಟಿ ಮಂಗಳವಾರ ಟ್ವೀಟ್ ಮಾಡಿದ್ದಾರೆ.
ಸೋಮವಾರ ಸಂಜೆ ಸಭೆಯನ್ನುದ್ದೇಶಿಸಿ ಮಾತನಾಡಿದ ಹಕ್ಕಾನಿ, ಆತ್ಮಹತ್ಯಾ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ಉಲ್ಲೇಖಿಸಿ, ಹುತಾತ್ಮರು ಮತ್ತು ಫಿದಾಯೀನ್‌ ತ್ಯಾಗವನ್ನು ಶ್ಲಾಘಿಸಿದರು ಎಂದು ಖೋಸ್ಟಿ ಟ್ವೀಟ್ ಮಾಡಿದ್ದಾರೆ. ಈ ಎಲ್ಲ ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಬೆಂಬಲವನ್ನು ಪಡೆಯುವ ತಾಲಿಬಾನ್ ಸರ್ಕಾರದ ಪ್ರಯತ್ನಕ್ಕೆ ವಿರುದ್ಧವಾಗಿದೆ.
ಅಫ್ಘಾನಿಸ್ತಾನದಲ್ಲಿ ಆತ್ಮಾಹುತಿ ದಾಳಿಕೋರರು “ಇಸ್ಲಾಂ ಮತ್ತು ಅಫ್ಘಾನಿಸ್ತಾನದ ಹಿರೋಗಳು” ಎಂದು ಹಕ್ಕಾನಿ ಹೇಳಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ. ಸೋಮವಾರ ನಡೆದ ಸಭೆಯ ನಂತರದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಂತರದಲ್ಲಿ ಹುತಾತ್ಮರ ಕುಟುಂಬಕ್ಕೆ 10,000 ಅಫ್ಘಾನಿ (112 ಯುಎಸ್ ಡಾಲರ್) ನಗದು ಬಹುಮಾನದ ಜೊತೆಗೆ ಒಂದು ನಿವೇಶನ ಭೂಮಿಯನ್ನು ನೀಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ತುಂಬಿದ ಸಭಾಂಗಣದಲ್ಲಿ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರನ್ನು ಅಪ್ಪಿಕೊಂಡು ಸಂತೈಸುತ್ತಿರುವ ಫೋಟೋಗಳನ್ನು ಆಂತರಿಕ ಸಚಿವಾಲಯದ ವಕ್ತಾರ ಖೋಸ್ತಿ ಟ್ವೀಟ್ ಮಾಡಿದ್ದಾರೆ.
ಅಫ್ಘಾನ್ ಸರ್ಕಾರದಲ್ಲಿ ಸಂಘರ್ಷದ ಸಂಕೇತ:
ಅಫ್ಘಾನಿಸ್ತಾನದಲ್ಲಿ ಆತ್ಮಾಹುತಿ ದಾಳಿಕೋರರಿಗೆ ಬಹುಮಾನ ಘೋಷಿಸಿರುವ ನಿರ್ಧಾರವು ತಾಲಿಬಾನ್ ಸರ್ಕಾರದ ಸಂಘರ್ಷದ ಸಂಕೇತವಾಗಿದೆ ಎಂದು ವ್ಯಾಖ್ಯಾಣಿಸಲಾಗುತ್ತಿದೆ. ಇಸ್ಲಾಮಿಕ್ ಸ್ಟೇಟ್ಸ್ ಆತ್ಮಾಹುತಿ ಬಾಂಬ್ ದಾಳಿಗಳನ್ನು ಖಂಡಿಸುತ್ತಿರುವ ತಾಲಿಬಾನಿಗಳು ತಮ್ಮನ್ನು ಜವಾಬ್ದಾರಿಯುತ ಆಡಳಿತಗಾರರು ಎನಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ದೇಶದ ಪ್ರತಿಯೊಬ್ಬರಿಗೂ ಭದ್ರತೆ ಒದಗಿಸುವ ಭರವಸೆಯನ್ನು ನೀಡುತ್ತಿದ್ದಾರೆ. ಆದರೆ ಇನ್ನೊಂದು ದಿಕ್ಕಿನಲ್ಲಿ ತಮ್ಮ ಅನುಯಾಯಿಗಳ ವಿಚಾರದಲ್ಲಿ ಆತ್ಮಾಹುತಿ ದಾಳಿಕೋರರಿಗೆ ಬಹುಮಾನ ಘೋಷಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರಕ್ಕೆ ಇಸ್ಲಾಮಿಕ್ ಸ್ಟೇಟ್ಸ್ ಬೆದರಿಕೆಯೊಡ್ಡುತ್ತಿದ್ದು, ಅಂತಾರಾಷ್ಟ್ರೀಯ ಬೆಂಬಲ ಪಡೆಯುವುದರ ಜೊತೆಗೆ ತಮ್ಮ ಅಧಿಕಾರವನ್ನು ಕಳೆದುಕೊಳ್ಳುವುದಕ್ಕೆ ತಾಲಿಬಾನ್ ಸಿದ್ಧವಿಲ್ಲ. ಈ ಹಿನ್ನೆಲೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಏಕೆಂದರೆ ಈ ಹಿಂದಿನ 20 ವರ್ಷಗಳಲ್ಲಿ ಅಫ್ಘಾನಿಸ್ತಾನ ಸರ್ಕಾರ ಮತ್ತು ಅಮೆರಿಕ ಸೇನಾಪಡೆಗಳ ವಿರುದ್ಧ ತಾಲಿಬಾನ್ ಇದೇ ರೀತಿ ಆತ್ಮಾಹುತಿ ಬಾಂಬರ್ ಮತ್ತು ರಸ್ತೆ ಬದಿ ಸ್ಫೋಟಗಳ ತಂತ್ರವನ್ನು ಬಳಸಿಕೊಂಡಿತ್ತು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement