ಫೇಸ್ಬುಕ್‌, ಟ್ವಿಟ್ಟರ್‌ಗೆ ಡೊನಾಲ್ಡ್ ಟ್ರಂಪ್ ಸಡ್ಡು..? : ಸ್ವಂತ ಸಾಮಾಜಿಕ ಜಾಲತಾಣ ಟ್ರುತ್ ಸೋಶಿಯಲ್ ಆರಂಭಿಸಲಿರುವ ಅಮೆರಿಕ ಮಾಜಿ ಅಧ್ಯಕ್ಷ ..!

ವಾಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರುತ್‌ ಸೋಶಿಯಲ್ (TRUTH Social) ಎನ್ನುವ ನೂತನ ಸಾಮಾಜಿಕ ಜಾಲತಾಣ ಆರಂಭಿಸಲಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರ ಹೊಸ ಸಾಮಾಜಿಕ ಜಾಲತಾಣ ನವೆಂಬರ್‌ನಲ್ಲಿ ಇದು ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. ಪ್ರಬಲ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಟ್ವಿಟ್ಟರ್ ತನ್ನನ್ನು ಬ್ಯಾನ್ ಮಾಡಿದ ಬಳಿಕ ಡೊನಾಲ್ಡ್ ಟ್ರಂಪ್ ಈ ಮಹತ್ವದ ಹೆಜ್ಜೆಯಿರಿಸಿದ್ದಾರೆ.
ಟ್ರಂಪ್‌ ಮೀಡಿಯಾ ಆಂಡ್ ಟೆಕ್ನಾಲಜಿ ಗ್ರೂಪ್‌ (ಟಿಎಂಟಿಜಿ) ಸಂಸ್ಥೆಯಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ ಆರಂಭವಾಗಲಿದೆ. ಇದರೊಂದಿಗೆ ಮನರಂಜನೆ ಕಾರ್ಯಕ್ರಮಗಳನ್ನು ಒಳಗೊಂಡ ವಿಡಿಯೊ ವಿತರಣೆ ಸೇವೆ (ವಿಡಿಯೊ ಆನ್‌ ಡಿಮಾಂಡ್‌), ಸುದ್ದಿ ಹಾಗೂ ಪಾಡ್‌ಕಾಸ್ಟ್‌ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಟ್ರಂಪ್‌ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ವೇದಿಕೆಯು “ದೊಡ್ಡ ತಂತ್ರಜ್ಞಾನದ ದಬ್ಬಾಳಿಕೆಯನ್ನು ನಿಲ್ಲಿಸುತ್ತದೆ” ಎಂದು ಟ್ರಂಪ್ ಹೇಳಿದ್ದಾರೆ, ಅವರು ಅಮೆರಿಕದಲ್ಲಿ ವಿರೋಧಿ ಧ್ವನಿಗಳನ್ನು ಮೌನಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಬೃಹತ್‌ ಟೆಕ್‌ ಕಂಪನಿಗಳ ದಬ್ಬಾಳಿಕೆಗೆ ಎದುರಾಗಿ ನಾನು ಟ್ರುತ್ ಸೋಶಿಯಲ್‌ ಮತ್ತು ಟಿಎಂಟಿಜಿ ರೂಪಿಸಿದ್ದೇನೆ. ತಾಲಿಬಾನಿಗಳೇ ಹೆಚ್ಚು ತುಂಬಿರುವ ಟ್ವಿಟ್ಟರ್‌ನ್ನು ನಾವು ಬಳಕೆ ಮಾಡುತ್ತಿದ್ದೇವೆ, ಇಷ್ಟಾದರೂ ಅಮೆರಿಕದ ಅಧ್ಯಕ್ಷರು ಮೌನವಾಗಿದ್ದಾರೆ ಇದು ಸ್ವೀಕಾರಾರ್ಹವಲ್ಲ ಎಂದು ಟ್ರಂಪ್‌ ಹೇಳಿದ್ದಾರೆ.
ಕ್ಯಾಪಿಟಲ್‌ ಹಿಲ್‌ನಲ್ಲಿ ಜನವರಿ 6ರಂದು ನಡೆದ ಹಿಂಸಾಚಾರದ ಬಳಿಕ ಫೇಸ್‌ಬುಕ್‌ ಮತ್ತು ಟ್ವಿಟರ್‌ನಿಂದ ಟ್ರಂಪ್‌ ಅವರ ಖಾತೆಯನ್ನು ನಿರ್ಬಂಧಿಸಲಾಗಿತ್ತು. ಆಗಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬೆಂಬಲಿಗರು ಸಂಸತ್‌ ಭವನಕ್ಕೆ (ಕ್ಯಾಪಿಟಲ್‌) ನುಗ್ಗಿ ದಾಂದಲೆ ನಡೆಸಿದ್ದರು. ಸ್ಪೀಕರ್‌ ಕಚೇರಿಗೆ ನುಗ್ಗಿ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದರು. ಪ್ರಮುಖ ಸಾಮಾಜಿಕ ಮಾಧ್ಯಮಗಳು ಟ್ರಂಪ್‌ ಅವರನ್ನು ನಿರ್ಬಂಧಿಸುತ್ತಿದ್ದಂತೆ, ತಮ್ಮದೇ ಸ್ವಂತ ಸಾಮಾಜಿಕ ಮಾಧ್ಯಮ ರೂಪಿಸುವುದಾಗಿ ಘೋಷಿಸಿದ್ದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement