
ಧಾರವಾಡ: ಅಯೋಧ್ಯೆ ರಾಮಮಂದಿರ ನಿಧಿ ಸಂಗ್ರಹ ಅಭಿಯಾನ ದೇಶವ್ಯಾಪಿ ಹಿಂದೂಗಳ ಸಂಘಟನೆಗೆ ಪೂರಕವಾಯಿತು. ನಿಧಿ ಸಮರ್ಪಣೆ ಕೇವಲ ಸಾಂಕೇತಿಕ, ಆದರೆ, ಪ್ರತಿಯೊಬ್ಬ ಹಿಂದು ಇದರಲ್ಲಿ ಪಾಲ್ಗೊಳ್ಳುವಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಸಂಘಟನೆ ಮಾಡಿತು ಎಂದು ಆರ್ಎಸ್ಎಸ್ ಸಹ ಸರಕಾರ್ಯವಾಹ ಅರುಣಕುಮಾರ ಹೇಳಿದರು.
ಧಾರವಾಡ ಗರಗ ರಸ್ತೆಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಜನ್ಮಭೂಮಿ ನಿಧಿ ಸಮರ್ಪಣೆ ಸಂದರ್ಭದಲ್ಲಿ ಆರ್ಎಸ್ಎಸ್ ಸಂಘಟನೆ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ೨೫ರಿಂದ ೩೦ ಲಕ್ಷ ಕಾರ್ಯಕರ್ತರು ೫.೩೪ ಲಕ್ಷ ಗ್ರಾಮಗಳಿಗೆ ಭೇಟಿ ನೀಡಿ ಒಟ್ಟು ೧೨.೭೩ ಕೋಟಿ ಕುಟುಂಬಗಳನ್ನು ತಲುಪಿದ್ದಾರೆ. ಇದನ್ನೇ ಸಂಘಟನೆ ಬಲವರ್ಧನೆಗೆ ಬಳಸಿಕೊಳ್ಳುವ ಕುರಿತು ಚರ್ಚೆ ನಡೆಯಿತು. ಕೇವಲ ಸಂಘಟನೆ ಮಾತ್ರವಲ್ಲದೇ ಹೊಸಬರೂ ಸಹ ನಮ್ಮೊಂದಿಗೆ ಸೇರಿಕೊಂಡು ಕೆಲಸ ಮಾಡಿದ್ದಾರೆ. ಇದರಿಂದ ಹೊಸ ಕಾರ್ಯಕರ್ತರು ಸಂಘಟನೆಗೆ ಸೇರ್ಪಡೆ ಆದಂತಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕೊರೊನಾ ಸಾಂಕ್ರಾಮಿಕ ದೇಶ ಮಾತ್ರವಲ್ಲದೇ ಇಡೀ ಜಗತ್ತಿಗೆ ಸವಾಲೊಡ್ಡಿದೆ. ಆದರೆ, ಜನರು ಆರೋಗ್ಯ ರಕ್ಷಣೆ ಕಾರ್ಯಗಳಿಗೆ ಸರ್ಕಾರದ ಜೊತೆ ಸ್ಪಂದಿಸಿದರು. ಈ ಸಂದರ್ಭದಲ್ಲಿ ಸಂಘಟನೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ತಿಳವಳಿಕೆ ಮೂಡಿಸಿತ್ತು. ಇದಕ್ಕೆ ಜನರೂ ಸಹ ಬೆಂಬಲಿಸಿದ್ದರು ಎಂದು ಅರುಣಕುಮಾರ ಹೇಳಿದರು.ಸದ್ಯ ಆರ್ಎಸ್ಎಸ್ ಸಂಘಟನೆಯಿಂದ ವರ್ಷದಲ್ಲಿ ಮೂರು ಭಾಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಮೊದಲದಾಗಿ ಜಲ, ಸ್ವಚ್ಛತೆ ಹಾಗೂ ವೃಕ್ಷಾರೋಹಣಕ್ಕೆ ಆದ್ಯತೆ ನೀಡಲಾಗುತ್ತಿದೆ. ನಂತರದಲ್ಲಿ ಕುಟುಂಬ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಕುಟುಂಬ ಪದ್ಧತಿಯಿಂದಲೇ ಭಾರತ ಸದೃಢವಾಗಲು ಸಾಧ್ಯ ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದು ಕುಟುಂಬಗಳು ಒಡೆದು ಹೋಗುತ್ತಿದ್ದು, ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದ ಅವರು ಕೊನೆಯದಾಗಿ ಸಮಾಜದಲ್ಲಿ ಸಾಮರಸ್ಯ ಮತ್ತು ಸದ್ಭಾವನೆ ಮೂಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಒಟ್ಟಾರೆ, ದೇಶದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಂಘಟನೆ ಮುಂದುವರೆಯಲಿದೆ ಎಂದು ತಿಳಿಸಿದರು.



ನಿಮ್ಮ ಕಾಮೆಂಟ್ ಬರೆಯಿರಿ