
ಬೆಂಗಳೂರು:ಹೃದಯಾಘಾತದಿಂದ ನಿಧನರಾದ ಕನ್ನಡದ ಸೂಪರ್ ಸ್ಟಾರ್ ಪುನೀತ ರಾಜಕುಮಾರ ಅವರ ಅಂತ್ಯಕ್ರಿಯೆ ಭಾನುವಾರ ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ. ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲಿ ಅಭಿಮಾನಿಗಳಿಗೆ ಪ್ರವೇಶವಿಲ್ಲ ಎಂದು ಸರ್ಕಾರ ತಿಳಿಸಿದೆ.
ಪ್ರಸ್ತುತ ಕಂಠೀರವ ಕ್ರೀಡಾಂಗಣದಿಂದ ಭಾನುವಾರ ಬೆಳಗ್ಗೆ 6 ಗಂಟೆಯಿಂದ ಪಾರ್ಥೀವ ಶರೀರವನ್ನು ಕಂಠೀರವ ಸ್ಟುಡಿಯೊಕ್ಕೆ ಮೆರವಣಿಗೆ ಮೂಲಕ ತರಲಾಗುತ್ತದೆ. ನಾಳೆ ಬೆಳಗ್ಗೆ 10.30 ರ ಒಳಗೆ ನಟ ಪುನೀತ್ ಅಂತ್ಯಕ್ರಿಯೆ ನಡೆಯಲಿರುವುದರಿಂದ ಬೆಳಗ್ಗೆ 6 ರಿಂದ ಕಂಠೀರವ ಸ್ಟೇಡಿಯಂನಿಂದ ಅಂತಿಮಯಾತ್ರೆ ಸಾಗಲಿದೆ.
ಅಂತಿಮ ಯಾತ್ರೆ ಮಾರ್ಗ
ಕಂಠೀರವ ಕ್ರೀಡಾಂಗಣದಿಂದ, ಕಾರ್ಪೋರೇಷನ್ ಸರ್ಕಲ್, ಕೆಜಿ ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್, ಕೆಆರ್ ಸರ್ಕಲ್, ಶೇಷಾದ್ರಿ ರಸ್ತೆ, ಚಾಲುಕ್ಯ ವೃತ, ಚೌಡಯ್ಯ ರಸ್ತೆ, ವಿಂಡ್ಸರ್ ಮ್ಯಾನರ್, ಬಿಡಿಎ ಜಂಕ್ಷನ್, ಕಾವೇರಿ ಜಂಕ್ಷನ್, ಸ್ಯಾಂಕಿ ರಸ್ತೆ, ಮಾರಮ್ಮ ಟೆಂಪಲ್ ಸರ್ಕಲ್, ಯಶವಂತಪುರ, ಆರ್ ಎಂಸಿ ಯಾರ್ಡ್, ಗೊರಗುಂಟೆಪಾಳ್ಯ ಮೂಲಕ ಕಂಠೀರವ ಸ್ಟುಡಿಯೋಗೆ ಅಂತಿಮ ಯಾತ್ರೆ ತಲುಪಲಿದೆ.
ಪುನೀತ್ ರಾಜಕುಮಾರ್ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಡಾ.ರಾಜ್ ಹಾಗೂ ಪಾರ್ವತಮ್ಮ ಸಮಾಧಿ ಪಕ್ಕದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ಬೆಳಿಗ್ಗೆ 5 ಗಂಟೆಗೆ ಕಂಠೀರವ ಸ್ಟುಡಿಯೋದಲ್ಲಿ ಕುಟುಂಬದವರೆಲ್ಲ ಸೇರಲಿದ್ದೇವೆ, ನಂತರ ವಿಧಿ ವಿಧಾನ ಕಾರ್ಯ ಆರಂಭವಾಗಲಿದೆ ಎಂದು ಪುನೀತ್ ಅವರ ಭಾವ ಹಾಗೂ ನಟ ರಾಮಕುಮಾರ್ ತಿಳಿಸಿದರು. ಅವನ ಪಯಣ ಸುಖಕರವಾಗಿರಲಿ, ಇಷ್ಟು ವರ್ಷ ನಮ್ಮೆಲ್ಲರನ್ನ ತೃಪ್ತಿದಾಯಕವಾಗಿ ನೋಡಿಕೊಂಡಿದ್ದಾನೆ. ನಾವು ಆತನನ್ನ ಅಷ್ಟೇ ಗೌರವಯುತವಾಗಿ ಕಳಿಸಿಕೊಡಬೇಕು. ಅವನು ತಂದೆಗೆ ತಕ್ಕ ಮಗ ಅಂತ ನಿರೂಪಿಸಿದ್ದಾರೆ ಎಂದರು.



ನಿಮ್ಮ ಕಾಮೆಂಟ್ ಬರೆಯಿರಿ