ತಂದೆ-ತಾಯಿ ಸಮಾಧಿ ಪಕ್ಕದಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದ ಪುನೀತ್‌ ರಾಜಕುಮಾರ ಅಂತ್ಯಕ್ರಿಯೆ

ಬೆಂಗಳೂರು: ಪವರ್‌ ಸ್ಟಾರ್‌   ಪುನೀತ್ ರಾಜ್​ಕುಮಾರ್​ ಇಂದು (ಭಾನುವಾರ) ಪಂಚಭೂತಗಳಲ್ಲಿ ಲೀನರಾದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೊದಲ್ಲಿ ತಾಯಿ ಪಾರ್ವತಮ್ಮನವರ ಸಮಾಧಿ ಪಕ್ಕದಲ್ಲೇ ಅಂತ್ಯಸಂಸ್ಕಾರ ನಡೆಸಲಾಯಿತು.
ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನ ನೆರವೇರಿಸಲಾಯಿತು. ರಾಘವೇಂದ್ರ ರಾಜಕುಮಾರ್​ ಮಗ ವಿನಯ್​ ರಾಜ್​ಕುಮಾರ್​ ಪುನೀತ್‌ ಪಾರ್ಥಿವ ಶರೀರಕ್ಕೆ ಅಂತಿಮ ಸಂಸ್ಕಾರ ನೆರವೇರಿಸಿದರು. ಮೂರು ಬಾರಿ ಕುಶಾಲು ತೋಪು ಸಿಡಿಸಿ ಅಪ್ಪುಗೆ ಗೌರವ ಸಲ್ಲಿಸಲಾಯಿತು. ವಿನಯ್ ರಾಜ್ ಕುಮಾರ್ ಅವರು ಮೂರು ಸುತ್ತು ಸಮಾಧಿ ಸುತ್ತಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.

ನಂತರ ರಥದಲ್ಲಿ ಪುನೀತ್ ಶವವವನ್ನು ಮಲಗಿಸಿ ಪೂಜೆ ಸಲ್ಲಿಸಲಾಯಿತು. ಇದಾದ ಬಳಿಕ ಮೃತದೇಹವನ್ನು ಗುಂಡಿಗೆ ಇಳಿಸಿ ಅಲ್ಲಿ ಕೆಲವೊಂದು ವಿಧಿವಿಧಾನಗಳು ನಡೆದ ನಂತರ ಅಪ್ಪುವನ್ನು ಮಣ್ಣಲ್ಲಿ ಮಣ್ಣು ಮಾಡಲಾಯಿತು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತು. ನಟ ಶಿವರಾಜಕುಮಾರ ಬಿಕ್ಕಿಬಿಕ್ಕಿ ಅತ್ತರು.

ಡಾ.ರಾಜ್​ಕುಮಾರ್​ ಕುಟುಂಬಸ್ಥರು ಹಾಗೂ ಮುಖ್ಯಮಂತ್ರಿ ಸೇರಿ ಗಣ್ಯಾತಿಗಣ್ಯರು, ಚಿತ್ರರಂಗದ ನಟ-ನಟಿಯರು ದೊಡ್ಮನೆ ಹುಡುಗನಿಗೆ ಅಂತಿಮ ನಮನ ಸಲ್ಲಿಸಿದರು.
ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಕಂಠೀರವ ಸ್ಟೇಡಿಯಂನಿಂದ ಪುನೀತ್​ ರಾಜ್​ಕಮಾರ್​ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಮೂಲಕ ಕಂಟೀರವ ಸ್ಟುಡಿಯೊಕ್ಕೆ ಕರೆತರಲಾಯಿತು. ನಂತರ ಡಾ. ರಾಜ್​ಕುಮಾರ್​ ಸಮಾಧಿಯಿಂದ 125 ಅಡಿ ಅಂತರ ಹಾಗೂ ಪಾರ್ವತಮ್ಮ ರಾಜ್​ಕುಮಾರ್​ ಸಮಾಧಿಯಿಂದ 45 ಅಡಿ ಅಂತರದಲ್ಲಿ ಪುನೀತ್​ ರಾಜ್​ಕುಮಾರ್​​ ಅವರ ಅಂತ್ಯಕ್ರಿಯೆ ಮಾಡಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಕಂಠೀರವ ಸ್ಟುಡಿಯೋ ಮುಂಭಾಗ ಜಮಾಯಿಸಿದ್ದರು.
ಮಂಗಳವಾರ ಪುನೀತ್​ ಸಮಾಧಿಗೆ ಹಾಲು-ತುಪ್ಪ ಬಿಡುವ ಕಾರ್ಯ ಇದೆ. ಅಲ್ಲಿ ವರೆಗೂ ಕಂಠೀರವ ಸ್ಟುಡಿಯೋಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಕಂಠೀರವ ಸ್ಟುಡಿಯೋ ಬಳಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಮಾಡಿಕೊಂಡು ನಂತರ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಿದೆ ಎಂದು ಜಿಲ್ಲಾಧಿಕಾರಿ ಮಂಜುನಾಥ್ ಹೇಳಿದ್ದಾರೆ.
ಶುಕ್ರವಾರ, ಅಕ್ಟೋಬರ್ 29  ನಟ ಪುನೀತ್ ರಾಜ್​ಕುಮಾರ್​ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದರು.ಇದು ನಂಬಲಾಗದ, ಅರಗಿಸಿಕೊಳ್ಳಲಾಗದ ಸುದ್ದಿಯಾಗಿತ್ತು.  ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಕಂಠೀರವ ಸ್ಟೇಡಿಯಂನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.ಲಕ್ಷಾಂತರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಅಂತಿಮ ದರ್ಶನ ಪಡೆಯಲು ದೂರದೂರುಗಳಿಂದ ಬಂದಿದ್ದರು. ವರದಿಗಳ ಪ್ರಕಾರ, ಕಳೆದ ಎರಡು ದಿನಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

ಜಿಮ್​ ಮಾಡುತ್ತಿದ್ದಾಗಲೇ ಅಪ್ಪುಗೆ ಸಣ್ಣದಾಗಿ ಎದೆನೋವು ಕಾಣಿಸಿಕೊಂಡಿತ್ತು. ತುಂಬಾ ಸುಸ್ತಾಗಿದ್ದ ಅವರು, ಕೂಡಲೇ ತಮ್ಮ ಫ್ಯಾಮಿಲಿ ಡಾಕ್ಟರ್​ನ್ನು ಸಂಪರ್ಕಿಸಿದ್ದಾರೆ. ಅವರು ಇಸಿಜಿ ಮಾಡಿ, ಹೃದಯದಲ್ಲಿ ತೊಂದರೆ ಇದೆ, ಕೂಡಲೇ ಆಸ್ಪತ್ರೆಗೆ ಅಡ್ಮಿಟ್ ಆಗಿ ಎಂದು ಸೂಚಿಸಿದ್ದಾರೆ. ಅದರಂತೆ ಪುನೀತ್ ಅವರನ್ನು ಕಾರಿನಲ್ಲಿ ಮಲಗಿಸಿಕೊಂಡು ಕೂಡಲೇ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಪುನೀತ್​ ಅವರ ಹೃದಯ ಸಂಪೂರ್ಣ ಕೆಲಸ ನಿಲ್ಲಿಸಿತ್ತು. ವೈದ್ಯರು ಸುಮಾರು 3 ಗಂಟೆಗಳ ನಿರಂತರ ಚಿಕಿತ್ಸೆ ನೀಡಿ, ಮತ್ತೆ ಹೃದಯದ ಬಡಿತ ಶುರುವಾಗಲಿ ಎಂದು ಸತತ ಪ್ರಯತ್ನಪಟ್ಟರು. ಆದರೆ ಚಿಕಿತ್ಸೆ ಫಲಿಸದರೆ ಅವರು ನಿಧನರಾಗಿದ್ದರು.
ನಿನ್ನೆ ಅಂದರೆ ಶನಿವಾರವೇ ನಟ ಪುನೀತ್​ ರಾಜ್​ಕುಮಾರ್ ಅವರ ಅಂತ್ಯಸಂಸ್ಕಾರ ನೆರವೇರಿಸಲು ನಿರ್ಧರಿಸಲಾಗಿತ್ತು. ಆದರೆ ಅವರ ಹಿರಿಯ ಮಗಳು ಧೃತಿ ಅಮೆರಿಕಾದಿಂದ ಭಾರತಕ್ಕೆ ಬರುವುದು ತಡವಾಗುವ ಹಿನ್ನೆಲೆ ಭಾನುವಾರಕ್ಕೆ ಅಂತ್ಯಕ್ರಿಯೆಯನ್ನು ಮುಂದೂಡಲಾಯಿತು. ಜೊತೆಗೆ ಕತ್ತಲಾಗುವ ಸಮಯದಲ್ಲಿ ಅಂತ್ಯಸಂಸ್ಕಾರ ಮಾಡುವುದು ಬೇಡ ಎಂದು ಕುಟುಂಬಸ್ಥರು ನಿರ್ಧರಿಸಿದ್ದರು. ಜೊತೆಗೆ ಅಭಿಮಾನಿಗಳ ಸಂಖ್ಯೆಯೂ ಕಡಿಮೆಯಾಗದ ಹಿನ್ನೆಲೆ, ನಿನ್ನೆ ಇಡೀ ದಿನ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಯಿತು. ಮುಖ್ಯಮಂತ್ರ ಬಸವರಾಜ್​ ಬೊಮ್ಮಾಯಿ ಮಾಧ್ಯಮಗಳ ಜೊತೆ ಮಾತನಾಡಿ ಈ ಘೋಷಣೆ ಮಾಡಿದ್ದರು. ಅದರಂತೆ ನಿನ್ನೆ ಇಡೀ ದಿನ ಲಕ್ಷಾಂತರ ಅಭಿಮಾನಿಗಳು ಅಪ್ಪುವಿನ ಅಂತಿಮ ದರ್ಶನ ಪಡೆದರು.
ಅಮೆರಿಕಾದಿಂದ ಬಂದ ಹಿರಿಯ ಮಗಳು ಧೃತಿ ತನ್ನ ತಂದೆಯ ಪಾರ್ಥಿವ ಶರೀರ ನೋಡಿ ಗದ್ಗದಿತರಾದರು. ತಂದೆಯ ತಲೆ ಮುಟ್ಟಿ ನೇವರಿಸಿ ನಮಸ್ಕರಿಸಿದರು. ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಟ್ಟಂತ ಪರಿಸ್ಥಿತಿ ಧೃತಿಯದಾಗಿತ್ತು.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

ಪುನೀತ್​​ ಮುಖ ನೋಡಿ ಇಬ್ಬರೂ ಮಕ್ಕಳು ಹಾಗೂ ಪತ್ನಿ ಅಶ್ವಿನಿ ಬಿಕ್ಕಿ-ಬಿಕ್ಕಿ ಅಳುತ್ತಿದ್ದರು. ಅಣ್ಣದಿಂರಾದ ಶಿವರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್​ ಕೆಳಗೆ ಕುಸಿದು ತಮ್ಮನನ್ನು ನೆನೆದು ಅಳುತ್ತಿದ್ದರು.
ಸ್ಯಾಂಡಲ್​ವುಡ್ ಮಾತ್ರವಲ್ಲದೇ, ಟಾಲಿವುಡ್, ಕಾಲಿವುಡ್ ನಟರೂ ಸಹ ನಟ ಪುನೀತ್​ನ ಅಂತಿಮ ದರ್ಶನ ಪಡೆದರು. ಶಿವಣ್ಣನನ್ನು ತಬ್ಬಿ ಧೈರ್ಯ ಹೇಳಿದರು. ಪವರ್​ ಸ್ಟಾರ್ ಅಗಲಿಕೆಯಿಂದ ಇಡೀ ಕನ್ನಡ ಚಿತ್ರರಂಗವೇ ಪವರ್​ ಕಳೆದುಕೊಂಡು ಸೊರಗಿದೆ. ಇಡೀ ಕರುನಾಡಲ್ಲಿ ಸೂತಕದ ಛಾಯೆ ಆವರಿಸಿದೆ. ಮನೆ ಮಗನನ್ನು ಕಳೆದುಕೊಂಡ ಭಾವ ಎಲ್ಲರ ಮನಸ್ಸಲ್ಲಿದೆ. ಇದು ಸಾಯುವ ವಯಸ್ಸಾ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ. ಸದಾ ನಗುಮೊಗದ ‘ಅಪ್ಪು‘ ಇನ್ನಿಲ್ಲ ಎಂಬ ಸುದ್ದಿಯನ್ನು ಈವರೆಗೂ ಯಾರಿಗೂ ಸಹ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement