2020ರಲ್ಲಿ ಭಾರತದಲ್ಲಿ ಪ್ರತಿದಿನ 31 ಮಕ್ಕಳ ಆತ್ಮಹತ್ಯೆ, ಶೇ 21ರಷ್ಟು ಹೆಚ್ಚಳ: ಎನ್​ಸಿಆರ್​ಬಿ ವರದಿ

ನವದೆಹಲಿ: ಭಾರತದಲ್ಲಿ ಪ್ರತಿದಿನ ಸರಾಸರಿ 31 ಮಕ್ಕಳು ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆ ಎಂದು ಸರ್ಕಾರದ ದತ್ತಾಂಶಗಳು ಈ ಅಂಶವನ್ನು ಪುಷ್ಟೀಕರಿಸಿವೆ.
ಕೊರೊನಾ ಪಿಡುಗು ಮಕ್ಕಳ ಮಾನಸಿಕ ಸಮಸ್ಯೆಗಳನ್ನು ಹೆಚ್ಚಿಸಿರಬಹುದು ಎಂದು ಮನಃಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (National Crime Records Bureau – NCRB) ಪ್ರಕಾರ 2020ರಲ್ಲಿ ಒಟ್ಟು 11,396 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019ರಲ್ಲಿ ಒಟ್ಟು 9,614 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದರು ಹಾಗೂ 2018ರಲ್ಲಿ 9,413 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ ಮೂರು ವರ್ಷದ ದತ್ತಾಂಶಗಳನ್ನು ವಿಶ್ಲೇಷಿಸಿದರೆ ಆತ್ಮಹತ್ಯೆ ಪ್ರಮಾಣದ ಸರಾಸರಿ ಶೇ 21ರಷ್ಟು ಹೆಚ್ಚಾಗಿರುವುದು ಕಂಡುಬರುತ್ತದೆ..
ಕೌಟುಂಬಿಕ ಸಮಸ್ಯೆಗಳು (4006), ಪ್ರೇಮಕ್ಕೆ ಸಂಬಂಧಿಸಿದ ವಿಚಾರ (1337) ಮತ್ತು ರೋಗ (1327) 18 ವರ್ಷದೊಳಗಿನ ಮಕ್ಕಳ ಆತ್ಮಹತ್ಯೆಗೆ ಮುಖ್ಯ ಕಾರಣ. ಇದರ ಜೊತೆಗೆ ಸೈದ್ಧಾಂತಿಕ ವಿಚಾರಗಳು ಅಥವಾ ನಾಯಕನ ಆರಾಧನೆ, ನಿರುದ್ಯೋಗ, ದಿವಾಳಿ ಮತ್ತು ಮಾದಕ ವ್ಯಸನ ಮಕ್ಕಳ ಆತ್ಮಹತ್ಯೆಗೆ ಕಾರಣವಾಗಿರುವ ಇತರ ಅಂಶಗಳಾಗಿವೆ.
ಎನ್​ಸಿಆರ್​ಬಿ ದತ್ತಾಂಶಗಳ ಪ್ರಕಾರ 2020ರಲ್ಲಿ ಆತ್ಮಹತ್ಯೆ ಮಾಡಿಕೊಂಡ 11,396 ಮಕ್ಕಳ ಪೈಕಿ 5,392 ಬಾಲಕರು ಹಾಗೂ 6,004 ಬಾಲಕಿಯರು. ದಿನದ ಸರಾಸರಿಯಲ್ಲಿ ಇದು 31 ಆಗುತ್ತದೆ. ಗಂಟೆಯ ಲೆಕ್ಕದಲ್ಲಿ ವಿಶ್ಲೇಷಿಸಿದರೆ ಸರಾಸರಿ ಪ್ರತಿಗಂಟೆಗೆ ಒಂದಕ್ಕಿಂತ ಹೆಚ್ಚು ಮಗು ಆತ್ಮಹತ್ಯೆ ಮಾಡಿಕೊಂಡಿದೆ. ಗೆಳೆಯರು, ಶಿಕ್ಷಕರ ಅಥವಾ ನಂಬುಗೆಯ ಯಾವುದೇ ವ್ಯಕ್ತಿಯೊಡನೆ ಮಾತನಾಡಲು ಆಗದ ವಾತಾವರಣದಲ್ಲಿ ಮಕ್ಕಳ ಮನಸ್ಸು ಮುದುಡಿ ಹೋಗಿತ್ತು. ಶಾಲೆಗಳು ಬಾಗಿಲು ಹಾಕಿದ್ದವು, ಸಾಮಾಜಿಕ ಸಂವಹನಕ್ಕೂ ನಿರ್ಬಂಧಗಳಿದ್ದವು. ಹೀಗಾಗಿ ಮಕ್ಕಳ ಮೇಲೆ ಭಾವನಾತ್ಮಕ ಒತ್ತಡ ಹೆಚ್ಚಾಗಿತ್ತು ಎಂದು ಮಕ್ಕಳ ಹಕ್ಕು ಸಂಸ್ಥೆಯ (CRY) ನೀತಿ ಸಂಶೋಧನಾ ವಿಭಾಗದ ನಿರ್ದೇಶಕಿ ಪ್ರೀತಿ ಮಹರಾ ಹೇಳುತ್ತಾರೆ.

ಪ್ರಮುಖ ಸುದ್ದಿ :-   ಐಪಿಎಲ್‌ (IPL)2024: ಹಾರ್ದಿಕ್ ಪಾಂಡ್ಯ- ಲಸಿತ್ ಮಾಲಿಂಗ ನಡುವೆ ಮುನಿಸು..? ಈ ವೀಡಿಯೊಗಳನ್ನು ನೋಡಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement