ಕನ್ನಡ ಕವಿಗಳ ಕಾವ್ಯ ಕೃತಿಗಳನ್ನು ಓದಿದರೆ ಬದುಕಿಗೆ ಹೊಸ ಅರ್ಥ

ಧಾರವಾಡ : ಕರ್ನಾಟಕ ರಾಜ್ಯೋತ್ಸವವನ್ನು ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಮತ್ತು ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ‘ಐಕ್ಯೂಎಸಿ’ ಮತ್ತು ಕರ್ನಾಟಕ ಸಂಘದ ಸಹಯೋಗದೊಂದಿಗೆ ಜೆ.ಎಸ್.ಎಸ್. ಡಿ.ಆರ್.ಎಚ್. ಸಭಾಭವನದಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮದ ಉದ್ಘಾಟಕರಾದ ಜನತಾ ಶಿಕ್ಷಣ ಸಮಿತಿಯ ವಿತ್ತಾಧಿಕಾರಿ ಡಾ. ಅಜಿತಪ್ರಸಾದ ಕನ್ನಡ ತಾಯಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ,
ಕರ್ನಾಟಕದ ಏಕೀಕರಣ, ನಾಡು-ನುಡಿ ಹಾಗೂ ಕರ್ನಾಟಕವನ್ನು ಕಟ್ಟುವಲ್ಲಿ ಹಲವಾರು ರಾಜ ಮನೆತನಗಳು, ಸಂಸ್ಥೆಗಳು, ಸಂಘಟನೆಗಳನ್ನು ಸ್ಮರಿಸಿದರು.
ಪ್ರಾಥಃಸ್ಮರಣಿಯರಾದ ಅರಟಾಳ ರುದ್ರಗೌಡ, ಡ್ಯೆಪ್ಯೂಟಿ ಚನ್ನಬಸಪ್ಪ, ರಾ.ಹ. ದೇಶಪಾಂಡೆ, ಆಲೂರ ವೆಂಕಟರಾಯ, ಹುಯಲಗೋಳ ನಾರಾಯಣರಾಯ, ರೊದ್ದಶ್ರೀನಿವಾಸ, ಶಾಂತರಸ, ಬಿ.ಎಂ.ಶ್ರೀಕಂಠಯ್ಯ ಮುಂತಾದ ಮಹನೀಯರ ಕಾರ್ಯತತ್ಪರತೆಯಿಂದ ಅವರ ಸಾಹಿತ್ಯಿಕ ದುಡಿಮೆಯಿಂದ ಕನ್ನಡ ಇಂದು ವಿಶ್ವಮಾನ್ಯತ್ವದೆಡೆಗೆ ಸಾಗಿದೆ. ಈಗಾಗಲೇ ಕರ್ನಾಟಕ ಸರ್ಕಾರದ ಆದೇಶದಂತೆ ‘ಮಾತಾಡ್ ಮಾತಡ್ ಕನ್ನಡ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿ, ಕನ್ನಡದ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿರುವೆವು. ಕನ್ನಡ ಸಂಸ್ಕೃತಿ, ಬದುಕು, ನಿತ್ಯ ನೂತನವಾಗಬೇಕು, ‘ಕನ್ನಡವ ಮಾತಾಡು ಕಲ್ಪತರು ನೀನಾಗುವೆ’ ಎಂದು ಹೇಳುತ್ತಾ ನಮ್ಮ ಕನ್ನಡ ಭಾಷೆ ಸುಮಾರು ಎರಡು ಸಾವಿರ ವರ್ಷಗಳಷ್ಟು ಹಿಂದಿನ ಇತಿಹಾಸ ಹೊಂದಿದ್ದು, ಕನ್ನಡದಲ್ಲಿ ಸಾಕಷ್ಟು ಕೃತಿಗಳು ಮೂಡಿಬಂದಿವೆ. ಹಾಗಾಗಿ ನಮ್ಮ ನಾಡು ಭವ್ಯ ಪರಂಪರೆ ಹೊಂದಿದ್ದು, ಈ ಪರಂಪರೆಯನ್ನು ಬೆಳೆಸುತ್ತ ಮುನ್ನಡೆಸೋಣ’ ಎಂದು ಕರೆ ಕೊಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಚಿಂತಕ ಶ್ರೀನಿವಾಸ ವಾಡಪ್ಪಿ ಅವರು ಕನ್ನಡ ನಾಡಿನ ಸಂಘಟನೆಗಳ ಕುರಿತು ಮಾತನಾಡಿ, ‘ಕನ್ನಡ ನಾಡನ್ನು ಶ್ರೀಮಂತಗೊಳಿಸಿದ ಪಂಪ, ರನ್ನ, ಕುವೆಂಪು, ಬೇಂದ್ರೆ, ಕೆ.ಎಸ್. ನಿಸಾರ್ ಅಹ್ಮದರು ನಾಡು-ನುಡಿ-ಭಾಷೆಯ ಬಗೆಗಿನ ಚಿಂತನೆಯನ್ನು ಕುರಿತು ವಿಭಿನ್ನ ನೆಲೆಗಳಲ್ಲಿ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ‘ಭಾಷೆ ಎಂಬ ಜ್ಯೋತಿ ಬೆಳಗದಿದ್ದರೆ ಜಗತ್ತು ಕತ್ತಲೆಯಲ್ಲಿ ಇರುತಿತ್ತು’ ಎಂಬ ದಂಡಿಯ ಮಾತಿನಂತೆ ಕನ್ನಡ ಭಾಷೆ ಜ್ಞಾನ ವಿಕಾಸದ ಜ್ಯೋತಿಯಾಗಿ ನಾಡನ್ನು ಬೆಳಗಿಸಿರುವುದು ಸತ್ಯ. ಇಂತಹ ಜ್ಞಾನದಿಂದ ಬದುಕಿನ ಮೌಲ್ಯಗಳನ್ನು ಹೆಚ್ಚಿಸಿಕೊಂಡು, ಕನ್ನಡ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬದುಕಬೇಕಾಗಿದೆ. ಕನ್ನಡದಲ್ಲಿ ಪುಸ್ತಕ ಭಂಡಾರ ಅಪಾರವಾಗಿದ್ದು, ಓದುವವರ ಸಂಖ್ಯೆ ಹೆಚ್ಚಾಗಬೇಕು. ಕನ್ನಡ ಕವಿಗಳ ಕಾವ್ಯ ಕೃತಿಗಳನ್ನು ಓದಿರಿ, ಬದುಕಿಗೆ ಹೊಸ ಅರ್ಥ ಬರುತ್ತದೆ, ಜ್ಞಾನ ಬೆಳೆಯುತ್ತದೆ’ ಎಂದರು.
ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ಇಂದು ಎಲ್. ಪಂಡಿತ ವಹಿಸಿ ಮಾತನಾಡಿ, ‘ನಾಡು-ನುಡಿ ಉಳಿವಿಗಾಗಿ, ಭಾಷೆಯ ರಕ್ಷಣೆಗಾಗಿ ನಾವು ನಮ್ಮ ಮನೆಯಿಂದ ರಕ್ಷಿಸುವ ಪಣತೊಡಬೇಕಿದೆ’ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷರಾದ ಡಾ. ಜೆ.ಎ. ಹಡಗಲಿ ಅವರು ಕರ್ನಾಟಕ ರಾಜ್ಯೋತ್ಸವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಮಾತೃ ಭಾಷೆಯಲ್ಲಿ ‘ಯಾರಿಗೆ ಪ್ರಭುತ್ವ ವಿರುತ್ತದೆಯೋ ಅವರು ಎಲ್ಲ ಭಾಷೆಯಲ್ಲಿಯೂ ವ್ಯವಹರಿಸಬಲ್ಲರು’ ಎಂದು ಹೇಳಿದರು.
ಕಾಲೇಜು ಅಭಿವೃದ್ಧಿ ಅಧಿಕಾರಿಗಳಾದ ಡಾ. ಸೂರಜ ಜೈನ, ಐಟಿಐ ಕಾಲೇಜಿನ ಪ್ರಾಚಾರ್ಯರಾದ ಮಹಾವೀರ ಉಪಾದ್ಯೆ ಹಾಗೂ ಐಕ್ಯೂಎಸಿ ಸಂಯೋಜಕರಾದ ಡಾ. ವೆಂಕಟೇಶ ಮುತಾಲಿಕ, ಕರ್ನಾಟಕ ಸಂಘದ ಸಂಯೋಜಕರಾದ ಡಾ. ಆರ್.ವಿ. ಪಾಟೀಲ, ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾ ಪಲ್ಲವಿ ಹಾಗೂ ಸಂಗಡಿಗರು ನಿತ್ಯೋತ್ಸವ ಗೀತೆ ಹಾಡಿದರು. ಮೇಘನಾ ನಾಯಕ ಕಾರ್ಯಕ್ರಮ ನಿರೂಪಿಸಿದರು. ಜಯಶ್ರೀ ಉಣಕಲ್ ವಂದಿಸಿದರು.

advertisement

 

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

advertisement