ಡ್ರಗ್ಸ್‌ ಪ್ರಕರಣದಲ್ಲಿ ಆರ್ಯನ್​ ಖಾನ್​ ಅಪಹರಿಸಿ, ನಂತರ ಹಣಕ್ಕಾಗಿ ಬೇಡಿಕೆ ಇಡಲಾಯ್ತು’: ನವಾಬ್​ ಮಲಿಕ್ ಆರೋಪ

ಮುಂಬೈ: ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಅವರ ಡ್ರಗ್ಸ್​ ಪ್ರಕರಣದಲ್ಲಿ ಎನ್‌ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್‌ ವಾಂಖೇಡೆ ಅವರ ಮೇಲೆ ಆರೋಪಗಳು ಮೇಲೆ ಆರೋಪಗಳ ಮಳೆಯನ್ನೇ ಸುರಿಸುತ್ತಿದ್ದಾರೆ ಮಹಾರಾಷ್ಟ್ರ ಸಚಿವ ನವಾಬ್‌ ಮಲ್ಲಿಕ್‌. ಆರೋಪಗಳ ನಂತರ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೇಡೆಗೆ ಈ ಪ್ರಕರಣದಿಂದ ಹೊರಗುಳಿಯುವಂತೆ ಆದೇಶಿಸಲಾಗಿದೆ. ಈಗ ಸಚಿವ ನವಾಬ್​ ಮಲಿಕ್​ ಮತ್ತೊಂದು ಆರೋಪ ಮಾಡಿದ್ದಾರೆ. ಶಾರುಖ್‌ ಖಾನ್‌ ಪುತ್ರ ಆರ್ಯನ್​ ಖಾನ್​ ಅವರನ್ನು ಕಿಡ್ನಾಪ್​ ಮಾಡಿ, ಹಣಕ್ಕಾಗಿ ಬೇಡಿಕೆ ಇಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿ ಮುಖಂಡ ಮೋಹಿತ್​ ಕಂಬೋಜ್​ ಅಲಿಯಾಸ್​ ಮೋಹಿತ್​ ಭಾರತೀಯ ಅವರು ಶನಿವಾರ (ನ.6) ಸುದ್ದಿಗೋಷ್ಠಿ ನಡೆಸಿ ಎನ್​ಸಿಪಿ ನಾಯಕರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಅದರ ಬೆನ್ನಲ್ಲೇ ನವಾಬ್​ ಮಲಿಕ್​ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ. ‘ಆರ್ಯನ್​ ಖಾನ್​ ಬಂಧನದ ಹಿಂದೆ ಮಾಸ್ಟರ್​ ಮೈಂಡ್​ ಆಗಿ ಮೋಹಿತ್​ ಕೆಲಸ ಮಾಡಿದ್ದಾರೆ. ಹಣಕ್ಕಾಗಿ ಶಾರುಖ್​ಗೆ ಬೇಡಿಕೆ ಇಡುವಲ್ಲಿ ಸಮೀರ್​ ವಾಂಖೇಡೆ ಮತ್ತು ಮೋಹಿತ್ ಪಾರ್ಟ್ನರ್​ ಆಗಿದ್ದಾರೆ’ ಎಂದು ನವಾಬ್​ ಮಲಿಕ್​ ಆರೋಪಿಸಿದ್ದಾರೆ.
ಡ್ರಗ್ಸ್​ ಪಾರ್ಟಿ ನಡೆದಿತ್ತು ಎನ್ನಲಾದ ಐಷಾರಾಮಿ ಹಡಗಿನಲ್ಲಿ ಆರ್ಯನ್​ ಖಾನ್​ ಅಂದು ಟಿಕೆಟ್​ ಪಡೆದಿರಲಿಲ್ಲ. ಪ್ರತೀಕ್​ ಗಾಬಾ ಮತ್ತು ಆಮಿರ್​ ಫರ್ನೀಚರ್​ವಾಲ್ ಅವರು ಆರ್ಯನ್​ನನ್ನು ಹಡಗಿಗೆ ಕರೆದುಕೊಂಡು ಹೋಗಿದ್ದರು. ಇದು ಕಿಡ್ನಾಪ್​ ಮತ್ತು ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣ ಆಗಿದೆ. ಇದರ ಹಿಂದಿರುವ ಮಾಸ್ಟರ್​ ಮೈಂಡ್​ ಮೋಹಿತ್​’ ಎಂದು ನವಾಬ್​ ಮಲಿಕ್​ ಆರೋಪಿಸಿದ್ದಾರೆ.
ಆರ್ಯನ್​ ಬಂಧನದ ಆದ ಬಳಿಕ ನಡೆದ ಘಟನೆಗಳಿಂದ ಸಮೀರ್​ ವಾಂಖೇಡೆ ಭಯಗೊಂಡರು. ಹಾಗಾಗಿ ಅ.7ರಂದು ಓಶಿವಾರಾ ಸ್ಮಶಾನದ ಬಳಿ ಮೋಹಿತ್​ ಮತ್ತು ಸಮೀರ್​ ಭೇಟಿ ಆಗಿದ್ದರು. ಅವರ ಅದೃಷ್ಟಕ್ಕೆ ಅಲ್ಲಿನ ಸಿಸಿಟಿವಿ ಹಾಳಾಗಿತ್ತು. ಹಾಗಾಗಿ ಅದಕ್ಕೆ ಸೂಕ್ತ ಸಾಕ್ಷಿ ಸಿಗಲಿಲ್ಲ’ ಎಂದು ನವಾಬ್​ ಮಲಿಕ್​ ಹೇಳಿದ್ದಾರೆ.
ಹೀಗೆ ಸರಣಿ ಆರೋಪಗಳನ್ನು ಹೊರಿಸುತ್ತಿರುವ ನವಾಬ್​ ಮಲಿಕ್ ವಿರುದ್ಧ ಸಮೀರ್​ ವಾಂಖೇಡೆ ತಂದೆ ಧ್ಯಾನದೇವ್​ ವಾಂಖೇಡೆ ಅವರು 1.25 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ‘ನವಾಬ್​ ಮಲ್ಲಿಕ್​ ಅವರು, ಸಮೀರ್​ ವಾಂಖೇಡೆ ಕುಟುಂಬವನ್ನು ವಂಚಕ ಕುಟುಂಬ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲ, ಅವರ ಧಾರ್ಮಿಕ ನಂಬಿಕೆಯನ್ನೇ ಪ್ರಶ್ನಿಸಿದ್ದಾರೆ. ವಾಂಖೇಡೆ ಕುಟುಂಬದವನ್ನು ಹಿಂದೂಗಳಲ್ಲ ಎಂದು ಹೇಳಿದ್ದಾರೆ. ಅವರ ಇಡೀ ಕುಟುಂಬದ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದಾರೆ. ಹಾಗಾಗಿ ಸಮೀರ್​ ವಾಂಖೇಡೆಯ ಕುಟುಂಬದ ಗೌರವ, ಸಾಮಾಜಿಕ ಗೌರವ ಮತ್ತು ಅವರೆಲ್ಲರ ಹೆಸರಿಗೆ ಹಾನಿ ಉಂಟಾಗಿದೆ. ಇದು ಸರಿಪಡಿಸಲಾಗದ ನಷ್ಟವಾಗಿದೆ’ ಎಂದು ಮೊಕದ್ದಮೆಯಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement