ದಶಕಗಳಿಂದ ಭಾರತದ ಅತಿದೊಡ್ಡ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಗ್ರೂಪ್ಸ್‌ ಮುನ್ನಡೆಸಿದ ರತನ್ ಟಾಟಾ ಶ್ರೀಮಂತರ ಪಟ್ಟಿಯಲ್ಲಿ ಏಕೆ ಅಷ್ಟೊಂದು ಕೆಳಗಿದ್ದಾರೆ..?!

ನವದೆಹಲಿ: ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಅವರು ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಅತ್ಯಂತ ಗೌರವಾನ್ವಿತ ಹಾಗೂ ಪ್ರಮುಖ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರು. ರತನ್‌ ಟಾಟಾ 1990 ರಿಂದ 2012ರ ವರೆಗೆ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದರು. ಅವರು ಅಕ್ಟೋಬರ್ 2016 ರಿಂದ ಫೆಬ್ರವರಿ 2017 ರ ವರೆಗೆ ಮಧ್ಯಂತರ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಟಾಟಾ ಗ್ರೂಪ್‌ನ ಟಾಟಾ ಟ್ರಸ್ಟ್ಸ್ ಎಂಬ ಚಾರಿಟೇಬಲ್ ಟ್ರಸ್ಟ್‌ಗಳ ಮುಖ್ಯಸ್ಥರಾಗಿ ಈಗಲೂ ಮುಂದುವರಿದಿದ್ದಾರೆ. ಭಾರತದ ಅತಿ ದೊಡ್ಡ ಕೈಗಾರಿಕೋದ್ಯಮಿಗಳು ಮತ್ತು ಲೋಕೋಪಕಾರಿಗಳಲ್ಲಿ ಒಬ್ಬರಾಗಿದ್ದರೂ, ಭಾರತದ ಶ್ರೀಮಂತರ ಪಟ್ಟಿಯಲ್ಲಿ ಟಾಪ್‌ ಹತ್ತರಲ್ಲೂ ಇಲ್ಲ. ಅಷ್ಟೇ ಅಲ್ಲ, ಟಾಪ್‌ 100ರಲ್ಲೂ ರತನ್‌ ಟಾಟಾ ಇಲ್ಲ..!
ಐಐಎಫ್‌ಎಲ್‌ (IIFL) ವೆಲ್ತ್ ಹುರುನ್ ಇಂಡಿಯಾ-2021 ಶ್ರೀಮಂತರ ಪಟ್ಟಿಯಲ್ಲಿ ಶ್ರೀಮಂತಿಕೆಯಲ್ಲಿ 432 ಭಾರತೀಯರು ರತನ್ ಟಾಟಾ ಅವರಿಗಿಂತ ಮೇಲಿದ್ದಾರೆ ಎಂದು ತೋರಿಸಿದೆ. ಸುಮಾರು ಆರು ದಶಕಗಳ ಕಾಲ ಭಾರತದ ಅತಿದೊಡ್ಡ ಬಿಸಿನೆಸ್‌ ಸಾಮ್ರಾಜ್ಯಗಳಲ್ಲಿ ಒಂದನ್ನು ಮುನ್ನಡೆಸಿದ ಮತ್ತು ಅದರ ಕಂಪನಿಗಳ ಮೇಲೆ ಇನ್ನೂ ಹೆಚ್ಚಿನ ಪ್ರಭಾವ ಹೊಂದಿರುವ ದೇಶದ ಅಗ್ರಗಣ್ಯ ಬಿಸಿನೆಸ್‌ ವ್ಯಕ್ತಿ ದೇಶದ ಅಗ್ರ 10 ಅಥವಾ 20 ಶ್ರೀಮಂತ ಭಾರತೀಯರಲ್ಲಿ ಒಬ್ಬರಾಗಿರಬೇಕು ಎಂದು ಬಹುತೇಕರು ನಿರೀಕ್ಷಿಸತ್ತಾರೆ. ಆದರೆ ರತನ್‌ ಟಾಟಾ ಟಾಪ್ 100ರಲ್ಲೂ ಇಲ್ಲ. ಅಷ್ಟೇ ಅಲ್ಲ ಟಾಪ್‌ 200ರಲ್ಲೂ ಇಲ್ಲ…! ಇದಕ್ಕೆ ಟಾಟಾ ಟ್ರಸ್ಟ್‌ಗಳ ಮೂಲಕ ಟಾಟಾಗಳು ಮಾಡುವ ಬೃಹತ್ ಲೋಕೋಪಕಾರ ಕಾರ್ಯಗಳು ಇದಕ್ಕೆ ಕಾರಣವಾಗಿರಬಹುದು ಎಂದು ಟಾಟಾಗಳನ್ನು ಬಲ್ಲವರು ಹೇಳುತ್ತಾರೆ. ಯಾಕೆಂದರೆ ಟಾಟಾ ಸನ್ಸ್‌ನ ಷೇರುಗಳ 66% ಅನ್ನು ಟಾಟಾ ಟ್ರಸ್ಟ್‌ಗಳೇ ಹೊಂದಿವೆ.
ರತನ್ ಟಾಟಾ ಅವರ ಸಂಪತ್ತು, ಹೆಚ್ಚಾಗಿ ಟಾಟಾ ಸನ್ಸ್‌ನಿಂದ 3,500 ಕೋಟಿ ರೂ.ಗಳಷ್ಟಿತ್ತು, ಅವರನ್ನು IIFL ವೆಲ್ತ್ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ -2021 ರಲ್ಲಿ 433 ನೇ ಸ್ಥಾನದಲ್ಲಿ ಇರಿಸಿದೆ. ಕಳೆದ ವರ್ಷದ ಪಟ್ಟಿಯಲ್ಲಿ, ಟಾಟಾ ಅವರ ಶ್ರೇಯಾಂಕವು 6,000 ಕೋಟಿ ರೂಪಾಯಿಗಳೊಂದಿಗೆ 198 ನೇ ಸ್ಥಾನದಲ್ಲಿತ್ತು. ವಿಶೇಷವೆಂದರೆ ಟಾಟಾ ಕಂಪನಿಗಳ ಈಕ್ವಿಟಿಗಳು ವೇಗವಾಗಿ ಏರಿಕೆಯಾಗುತ್ತಿದ್ದರೂ ರತನ್‌ ಟಾಟಾ ಅವರ ಸಂಪತ್ತು ಏಕೆ ತೀವ್ರವಾಗಿ ಕುಸಿದಿದೆ ಎಂಬುದನ್ನು ಸಂಶೋಧನಾ ಸಂಸ್ಥೆ ನಿರ್ದಿಷ್ಟಪಡಿಸಿಲ್ಲವಾದರೂ ಈ ಬಗ್ಗೆ ಜನರಲ್ಲಂತೂ ಪ್ರಶ್ನೆ ಇದ್ದೇ ಇದೆ.
ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲಿನ ಡಾ ಶಶಾಂಕ್ ಷಾ ಅವರು ತಮ್ಮ ಪುಸ್ತಕ ‘ದಿ ಟಾಟಾ ಗ್ರೂಪ್: ಫ್ರಮ್ ಟಾರ್ಚ್‌ಬೇರರ್ಸ್ ಟು ಟ್ರೇಲ್‌ಬ್ಲೇಜರ್ಸ್’ ನಲ್ಲಿ ಭಾರತೀಯ ಮತ್ತು ಬಹುರಾಷ್ಟ್ರೀಯ ಸಂಘಟಿತ ಸಂಸ್ಥೆಗಳು/ವ್ಯಾಪಾರಗಳಲ್ಲಿ ಕಂಪನಿಯನ್ನು ಮುನ್ನಡೆಸಿದವರು ಸಂಸ್ಥೆಯಲ್ಲಿ ಗರಿಷ್ಠ ವೈಯಕ್ತಿಕ ಸಂಪತ್ತನ್ನು ಹೊಂದಿದ್ದಾರೆ. ಉದಾಹರಣೆಗೆ ಜೆಫ್ ಬೆಜೋಸ್, ಬಿಲ್ ಗೇಟ್ಸ್, ವಾರೆನ್ ಬಫೆಟ್ ಮತ್ತು ಮುಖೇಶ್ ಅಂಬಾನಿ ಹೀಗೆ ಕೆಲವರು ವೈಯಕ್ತಿಕ ಸಂಪತ್ತಿನ ಬಗ್ಗೆ ಹೇಳುತ್ತಾರೆ.
ವಿಶೇಷವಾಗಿ ದೊಡ್ಡ ವ್ಯವಹಾರಗಳ ಸಂದರ್ಭದಲ್ಲಿ, ಸಂಸ್ಥಾಪಕರು ಮತ್ತು ಅದನ್ನು ಮುನ್ನಡೆಸುವವರು ವಿಶ್ವದ ಶ್ರೀಮಂತರಲ್ಲಿ ಸೇರಿದ್ದಾರೆ. ಅವರು ಹೊಂದಿರುವ ಮತ್ತು ನಡೆಸುತ್ತಿರುವ ಕಂಪನಿಗಳಲ್ಲಿ ಅವರು ಹೊಂದಿರುವ ಈಕ್ವಿಟಿ ಪಾಲು ಇದಕ್ಕೆ ಪ್ರಮುಖ ಕಾರಣವೆಂದು ಷಾ ಅವರ ಸಂಶೋಧನೆಯು ತೋರಿಸಿದೆ. ಇಷ್ಟಾಗಿಯೂ ಟಾಟಾ ಗ್ರೂಪ್‌ನ ವಿಷಯದಲ್ಲಿ ಬೇರೆಯೇ ಇದೆ. ಭಾರತದ ಶ್ರೀಮಂತ ಕುಟುಂಬಗಳ ಪಟ್ಟಿಯಲ್ಲಿ ಟಾಟಾ ಕುಟುಂಬ ಅಥವಾ ಅಧ್ಯಕ್ಷ ರತನ್ ಟಾಟಾ ಕಾಣಿಸಿಕೊಳ್ಳುವುದಿಲ್ಲ ಎಂದು ಷಾ ಹೇಳುತ್ತಾರೆ.
ಇದು ಕೇವಲ ರತನ್ ಟಾಟಾ ಅವರ ವಿಷಯವಲ್ಲ ಎಂದು ಅವರ ಸಂಶೋಧನೆಯು ಬಹಿರಂಗಪಡಿಸಿದೆ. ಮಾಜಿ ಚೇರ್ಮನ್‌ ಜೆ.ಆರ್.ಡಿ ವಿಷಯ ತೆಗೆದುಕೊಂಡರೂ ಅದು ಹೀಗೆಯೇ ಇತ್ತು. ಹಾಗೆಯೇ ರತನ್‌ ಟಾಟಾ ವಿಚಾರದಲ್ಲಿಯೂ ಹೀಗೆಯೇ ಇದೆ ಎಂದು ಅವರು ಹೇಳುತ್ತಾರೆ.
ನವೆಂಬರ್ 1985 ರಲ್ಲಿ, ಬಾಂಬೆ ಮ್ಯಾಗಜೀನ್‌ನಲ್ಲಿನ ಲೇಖನವು ಜೆಆರ್‌ಡಿ ಟಾಟಾ ಅವರ ವೈಯಕ್ತಿಕ ಸಂಪತ್ತು ಸುಮಾರು 28 ಕೋಟಿ ರೂಪಾಯಿ ಎಂದು ವರದಿ ಮಾಡಿದೆ. ಜೆಆರ್‌ಡಿ ಪ್ರಕಟಣೆಯನ್ನು ಮರುರೂಪಿಸಿದರು ಮತ್ತು ಅವರ ಪತ್ನಿ ಮತ್ತು ಅವರ ವೈಯಕ್ತಿಕ ಹೂಡಿಕೆಗಳನ್ನು ದಾಖಲೆಯಲ್ಲಿ ಇರಿಸಿದರು. ಒಂದು ಅಪಾರ್ಟ್‌ಮೆಂಟ್‌ನ ಮೌಲ್ಯವು 60 ಲಕ್ಷ ರೂಪಾಯಿಗಳು. ಅವರ ಹೆಸರಿನಲ್ಲಿರುವ ಇತರ ಎಲ್ಲಾ ಷೇರುಗಳು ಅವರು ಯಾವುದೇ ವೈಯಕ್ತಿಕ ಆಸಕ್ತಿಯನ್ನು ಹೊಂದಿರದ ಸಾರ್ವಜನಿಕ ಚಾರಿಟೇಬಲ್ ಟ್ರಸ್ಟ್‌ಗಳ ಟ್ರಸ್ಟಿಯಾಗಿ ಇರುವಂಥದ್ದು ಮಾತ್ರ ಎಂದು 2019 ರ ಲಿಂಕ್ಡ್ ಪೋಸ್ಟ್‌ನಲ್ಲಿ, ಷಾ ಬರೆದಿದ್ದಾರೆ.
ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಪಡೆದ ಏಕೈಕ ಉದ್ಯಮಿ ಜೆಆರ್‌ಡಿ ಟಾಟಾ ಎಂದು ಷಾ ಅವರು ಬರೆಯುತ್ತಾರೆ. ಅವರ ಸರಳತೆ ಮತ್ತು ಪಾರದರ್ಶಕತೆಯನ್ನು ಇದು ಹೇಳುತ್ತದೆ. ಟಾಟಾಗಳು ಭಾರತದಲ್ಲಿ ಏಕೆ ಶ್ರೀಮಂತ ಉದ್ಯಮಿಗಳಾಗಿಲ್ಲ ಎಂಬುದೇ ನಮಗೆ ಕುತೂಹಲ ಮೂಡಿಸಿದೆ.
ಟಾಟಾ ಸನ್ಸ್‌ ಒಡೆತನ ಹೊಂದಿರುವ ಚಾರಿಟಬಲ್ ಟ್ರಸ್ಟ್‌ಗಳೊಂದಿಗೆ ರತನ್ ಮತ್ತು ಇತರ ಟಾಟಾಗಳು ಶ್ರೀಮಂತರಾಗಿದ್ದಾರೆ ಆದರೆ ವೈಯಕ್ತಿಕ ಸಂಪತ್ತಿನಲ್ಲಿ ಬಹುಕೋಟ್ಯಾಧಿಪತಿಗಳಿಂದ ದೂರವಿದ್ದಾರೆ ಎಂದು ಪೀಟರ್ ಕೇಸಿ ತಮ್ಮ ಪುಸ್ತಕ ‘ದಿ ಸ್ಟೋರಿ ಆಫ್ ಟಾಟಾ: 1868 ಟು 2021′ ನಲ್ಲಿ ಬರೆದಿದ್ದಾರೆ.
ರತನ್‌ ಅವರನ್ನು ಭಾರತದ ಅತ್ಯಂತ ಶ್ರೀಮಂತ ಕುಟುಂಬವೊಂದರ ಅಜ್ಜಿಯೊಬ್ಬರು ಬೆಳೆಸಿದರು.’ಆದರೂ,’ ಎಂದು ಬರೆಯುತ್ತಾರೆ ‘ನೀವು ಈಗ ಅವರ ಜೀವನಶೈಲಿಯನ್ನು ನೋಡಿದರೆ, ಅವರು ವೃತ್ತಿಪರ ಮ್ಯಾನೇಜರ್‌ನಂತೆ ಬದುಕುತ್ತಾರೆ ಎಂದು ಬರೆಯುತ್ತಾರೆ.
ಪುಸ್ತಕದ ಆಯ್ದ ಭಾಗದ ಪ್ರಕಾರ, ಟಾಟಾ ಅವರು ಕಳೆದ ಕೆಲವು ವರ್ಷಗಳಿಂದ ಟಿಟೊ ಮತ್ತು ಟ್ಯಾಂಗೋ [ಅವರ ನಾಯಿಗಳು] ಗಾಗಿ ಸಣ್ಣ ಉದ್ಯಾನವನವಿರುವ ಆರಾಮದಾಯಕವಾದ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ. ಅಪಾರ್ಟ್ಮೆಂಟ್ ಸಹ ಟಾಟಾ ಗ್ರೂಪ್ ಒಡೆತನದಲ್ಲಿದೆ ಮತ್ತು ಅವರ ಮರಣದ ನಂತರ ಅದನ್ನು ಟಾಟಾ ಗ್ರೂಪ್‌ಗೆ ಹಿಂತಿರುಗಿಸಲಾಗುತ್ತದೆ.
“ಇದು ಓದುವ ಮತ್ತು ನಾಯಿಗಳನ್ನು ಪ್ರೀತಿಸುವ ಬ್ರಹ್ಮಚಾರಿಯ ಮನೆಯಾಗಿದೆ, ಖಂಡಿತವಾಗಿಯೂ ಭಾರತದ ಅತಿದೊಡ್ಡ ಸಮೂಹದ ಮುಖ್ಯಸ್ಥರ ಮನೆ ಅಲ್ಲ ಎಂದು ರತನ್‌ ಟಾಟಾ ಬಗ್ಗೆ ಈ ಪುಸ್ತಕ ಹೇಳುತ್ತದೆ…!
ಕೇಸಿಯೊಂದಿಗಿನ ಸಂದರ್ಶನದಲ್ಲಿ, ರತನ್‌ ಟಾಟಾ ಅವರು ಬಹಳಷ್ಟು ಸಂಪತ್ತಿನ ನಡುವೆ ಬೆಳೆದಿದ್ದೇನೆ ಎಂದು ಒಪ್ಪಿಕೊಳ್ಳುತ್ತಾರೆ. ಆದರೆ ಅವರು ರಿಸರ್ವ್ ಬ್ಯಾಂಕ್‌ನ ಭತ್ಯೆಗಳ ಮೇಲೆ ಹತ್ತು ವರ್ಷಗಳ ಕಾಲ ಅಮೆರಿಕದಲ್ಲಿ ಕಳೆದರು.. . ಮತ್ತು ಹಣವು ಎಂದಿಗೂ ಸಾಕಾಗಲಿಲ್ಲ. ಹೀಗಾಗಿ ಜೀವನ ನಿರ್ವಹಣೆಗೆ ಪಾತ್ರೆ ತೊಳೆಯುವುದು ಸೇರಿದಂತೆ ಎಲ್ಲ ರೀತಿಯ ಕೆಲಸಗಳನ್ನು ಮಾಡಬೇಕಾಯಿತು. “ನಿಮ್ಮ ಕುಟುಂಬವು ಶ್ರೀಮಂತವಾಗಿದೆ ಎಂಬುದನ್ನು ಮರೆಯಲು ಆ ರೀತಿಯ ವಿಷಯವು ನಿಮಗೆ ಸಹಾಯ ಮಾಡುತ್ತದೆ” ಎಂದು ಸಂದರ್ಶನದಲ್ಲಿ ರತನ್‌ ಟಾಟಾ ಹೇಳುತ್ತಾರೆ.
ಐಐಎಫ್‌ಎಲ್‌ (IIFL) ವೆಲ್ತ್ ಹುರುನ್ ಇಂಡಿಯಾ-2021 ಶ್ರೀಮಂತರ ಪಟ್ಟಿಯಲ್ಲಿ , ರತನ್ ಟಾಟಾ ಅವರು ಹರ್ಷಿಲ್ ಮಾಥುರ್ ಮತ್ತು ಶಶಾಂಕ್ ಕುಮಾರ್, ಎಡ್ವರ್ಡ್ ಮೆನೆಜಸ್ ಮತ್ತು ಸುನೀಲ್ ಚಾರಿ, ಶ್ರೀರಾಮ್ ಸಹೋದರರು ಮತ್ತು ಎನ್ ರಾಧಾಕೃಷ್ಣ ರೆಡ್ಡಿ ಮತ್ತು ಕುಟುಂಬದೊಂದಿಗೆ ಪಟ್ಟಿಯಲ್ಲಿ 433 ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಟಾಟಾದ ಸಂಪತ್ತು ಪ್ರಸಿದ್ಧ ದಲಾಲ್ ಸ್ಟ್ರೀಟ್ ಹೂಡಿಕೆದಾರರಾದ ರಾಕೇಶ್ ಜುಂಜುನ್‌ವಾಲಾ, ಬಿಗ್ ಬುಲ್ (22,300 ಕೋಟಿ ರೂ.) ಮತ್ತು ರಾಮದೇವ್ ಅಗರವಾಲ್ ( 4,400 ಕೋಟಿ ರೂ,) ಗಿಂತ ಕಡಿಮೆಯಿದೆ.
ಜಮ್‌ಸೆಡ್‌ಜಿ ಟಾಟಾ ಅವರ ವಂಶಾವಳಿಯ ಅಡಿಯಲ್ಲಿ, ಅನೇಕ ವರ್ಷಗಳಲ್ಲಿ ಹಲವಾರು ಟ್ರಸ್ಟ್‌ಗಳನ್ನು ಸ್ಥಾಪಿಸಲಾಗಿದೆ – ಟಾಟಾ ಟ್ರಸ್ಟ್‌ಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ದೊಡ್ಡ ಟ್ರಸ್ಟ್‌ಗಳೆಂದರೆ ಸರ್ ರತನ್ ಟಾಟಾ ಟ್ರಸ್ಟ್ ಮತ್ತು ಸರ್ ದೊರಾಬ್ಜಿ ಟಾಟಾ ಟ್ರಸ್ಟ್‌ಗಳು. ಟಾಟಾ ಗ್ರೂಪ್ ಆಫ್ ಕಂಪನಿಗಳ ಅಗ್ರ ಕಂಪನಿಯಾದ ಟಾಟಾ ಸನ್ಸ್‌ನ ಮೂರನೇ ಎರಡರಷ್ಟು ಷೇರುಗಳನ್ನು ಟ್ರಸ್ಟ್‌ಗಳು ಹೊಂದಿವೆ, ಅಂದರೆ ಟಾಟಾ ಸನ್ಸ್‌ನ ಷೇರುಗಳ 66% ಅನ್ನು ಟಾಟಾ ಟ್ರಸ್ಟ್‌ಗಳು ಹೊಂದಿದ್ದು, ಟ್ರಸ್ಟ್‌ಗಳ ಸಾಮಾಜಿಕ ಕೆಲಸವನ್ನು ಬೆಂಬಲಿಸಲು ಈ ಷೇರುಗಳ ಲಾಭಾಂಶಗಳು ನೇರವಾಗಿ ಹರಿಯುತ್ತವೆಯೇ ಹೊರತು ವ್ಯಕ್ತಿಗಲ್ಲ. ಈ ಕಾರಣದಿಂದಾಗಿ ವೈಯಕ್ತಿಕವಾಗಿ ಶ್ರೀಮಂತರಲ್ಲ… ಯಾಕೆಂದರೆ ಟಾಟಾ ಕಂಪನಿಗಳ ಸಂಸ್ಥಾಪಕ ಜಮ್‌ಸೆಟ್‌ಜಿ ಟಾಟಾ ಅವರು ತಮ್ಮ ಕಂಪನಿಗೆ ತಾವೇ ಚೌಕಟ್ಟು ರಚಿಸಿದ ನಂತರ ಟಾಟಾಗಳು ಎಂದಿಗೂ ತಮ್ಮದೇ ಆದ ಕಂಪನಿಯ ಷೇರುಗಳನ್ನು ಹೊಂದಿರಲಿಲ್ಲ. ಬಿಲ್ ಗೇಟ್ಸ್‌ರಂತಹವರು ಮುಂಚೂಣಿಗೆ ಬರುವ ಮುಂಚೆಯೇ ಟಾಟಾಗಳು ಸಾಮಾಜಿಕ ಸೇವೆಯ ಮೂಲಕವೇ ಹೆಸರಾಗಿದ್ದರು, ಲೋಕೋಪಕಾರಿಗಳಾಗಿದ್ದರು. ಹೀಗಾಗಿ ಟಾಟಾ ಕಂಪನಿಗಳ ಈಕ್ವಿಟಿಗಳು ವೇಗವಾಗಿ ಏರುತ್ತಿದ್ದರೂ ಅದರ ಬಹುತೇಕ ಲಾಭಾಂಶಗಳು ಟಾಟಾಗಳಿಗೆ ಹೋಗುತ್ತಿಲ್ಲ. ಬದಲಾಗಿ ಟಾಟಾಗಳೇ ಮುನ್ನಡೆಸುವ ಸಾಮಾಜಿಕ ಕೆಲಸವನ್ನು ಬೆಂಬಲಿಸುವ ಟಾಟಾ ಟ್ರಸ್ಟುಗಳಿಗೆ ಹೋಗುತ್ತಿವೆ..!!
.

ಪ್ರಮುಖ ಸುದ್ದಿ :-   ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ...!

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement