ವಿಚಾರಣೆಗೆ ಉನ್ನತ ಅಧಿಕಾರಿಗಳು‌ ಗೈರು; ಬಂಧಿಸಿ ಕರೆತರುವ ಎಚ್ಚರಿಕೆ ನೀಡಿದ ಹೈಕೋರ್ಟ್‌

ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಖುದ್ದು ಹಾಜರಾತಿಗೆ ಆದೇಶಿಸಿದ್ದ ಹೊರತಾಗಿಯೂ ಅವರು ಪೀಠದ ಮುಂದೆ ಉಪಸ್ಥಿತರಿರದ್ದಕ್ಕೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಕೆಂಡಾಮಂಡಲವಾಗಿದ್ದು, ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.
ಹೈಕೋರ್ಟ್ ಸೂಚನೆ ನೀಡಿದರೂ‌ ಉನ್ನತ ಮಟ್ಟದ ಅಧಿಕಾರಿಗಳು ವಿಚಾರಣೆಗೆ ಹಾಜರಾಗುತ್ತಿಲ್ಲ. ಇದೇ ಪ್ರವೃತ್ತಿ ಮುಂದುವರಿದರೆ ಬಂಧಿಸಿ ಕರೆತರುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ‌‌(ಡಿಜಿ ಐಜಿಪಿ)ರಿಗೆ ಸೂಚನೆ ನೀಡಬೇಕಾಗುತ್ತದೆ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಎಚ್ಚರಿಕೆ ನೀಡಿದರು.
ಹೈಕೋರ್ಟ್ ಸೂಚಿಸಿದಾಗ ಅಧಿಕಾರಿಗಳು ವಿಚಾರಣೆಗೆ ಹಾಜರಾಗಬೇಕು. ಸಚಿವ ಸಂಪುಟ ಸಭೆಯಿದ್ದರೂ ನ್ಯಾಯಾಲಯದ ಕಲಾಪ ತಪ್ಪಿಸಿಕೊಳ್ಳುವಂತಿಲ್ಲ. ಗೈರುಹಾಜರಿಯನ್ನು ನಾವು ಸಹಿಸುವುದಿಲ್ಲ. ವಿಚಾರಣೆಗೆ ಹಾಜರಾಗದ ಅಧಿಕಾರಿಗಳನ್ನು ಬಂಧಿಸಿ ಕರೆತರುವಂತೆ ಡಿಜಿ ಐಜಿಪಿಗೆ ಸೂಚಿಸುವ ಅಧಿಕಾರ ನಮಗಿದೆ. ಅಂಥ ಪರಿಸ್ಥಿತಿ ಬಾರದಂತೆ ನೋಡಿಕೊಳ್ಳಿ ಎಂದು ಪ್ರಭುಲಿಂಗ ನಾವದಗಿ ಅವರಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು.
ಹೈಕೋರ್ಟ್‌ ಅನ್ನು ಅಧಿಕಾರಿಗಳು ಲಘುವಾಗಿ ಪರಿಗಣಿಸಿದರೆ ಅಂತಹ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಆದೇಶಿಸುತ್ತೇವೆ. ಸಂಬಳ ಬರದಂತೆ ತಡೆಹಿಡಿಯಲು ಸೂಚಿಸುತ್ತೇವೆ ಎಂದು ಕಟುವಾಗಿ ಎಚ್ಚರಿಸಿದರು.
ರಾಜ್ಯ ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಚಾರಣೆಗೆ ಗೈರು ಹಾಜರಾಗಿದ್ದರು. ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರೂ ಬಂದಿರಲಿಲ್ಲ. ಇದು ನ್ಯಾಯಮೂರ್ತಿಗಳ ಕೋಪಕ್ಕೆ ಕಾರಣವಾಯಿತು.
ಮತ್ತೆ ಇಂತಹ ತಪ್ಪು ಮಾಡಬೇಡಿ. ನಿಮ್ಮ ವೃತ್ತಿಗೆ ಯಾವುದೇ ರೀತಿ ತೊಂದರೆ ತಂದುಕೊಳ್ಳಬೇಡಿ ಎಂದು ಹಾಜರಾಗಿದ್ದ ಅಧಿಕಾರಿಗಳಿಗೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಚ್ಚರಿಕೆ ನೀಡಿದರು.

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement