ಕರ್ನಾಟಕದ ನಕ್ಸಲ್‌ ನಾಯಕರಾದ ಬಿ.ಜಿ.ಕೃಷ್ಣಮೂರ್ತಿ, ಸಾವಿತ್ರಿ ಬಂಧಿಸಿದ ಕೇರಳ ಭಯೋತ್ಪಾದನಾ ನಿಗ್ರಹ ಪಡೆ

ಬೆಂಗಳೂರು: ಕೇರಳ ಭಯೋತ್ಪಾದನಾ ನಿಗ್ರಹ ಪಡೆ ಕಾರ್ಯಾಚರಣೆಯಲ್ಲಿ ಕರ್ನಾಟಕ ಮೂಲದ ಇಬ್ಬರು ಕುಖ್ಯಾತ ನಕ್ಸಲ್ ನಾಯಕರನ್ನು ಮಂಗಳವಾರ ಬಂಧಿಸಲಾಗಿದೆ.
ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಬಂಧಿತರು. ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ ಎಂಬಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ನಕ್ಸಲ್ ಸೆಂಟ್ರಲ್ ಕಮಿಟಿಯ ಪಶ್ಚಿಮ ಘಟ್ಟದ ಕಾರ್ಯದರ್ಶಿಯಾಗಿ ಬಿ.ಜಿ. ಕೃಷ್ಣಮೂರ್ತಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಈತನ ವಿರುದ್ಧ ಸುಮಾರು 51 ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ. ಮತ್ತೊಬ್ಬ ಆರೋಪಿತೆ ಸಾವಿತ್ರಿ ನಕ್ಸಲ್ ಗ್ರೂಪ್ ಕಬನಿ ದಳಂ ಸದಸ್ಯೆಯಾಗಿದ್ದರು ಎಂದು ಹೇಳಲಾಗಿದ್ದು, ಆಕೆಯ ಮೇಲೆ 21 ಪ್ರಕರಣ ದಾಖಲಾಗಿವೆ ಎಂದು ಹೇಳಲಾಗಿದೆ.
ನೂರ್ ಶ್ರೀಧರ್ ಮತ್ತು ನಿಲ್ಗುಳಿ ಪದ್ಮನಾಭ ಸರ್ಕಾರದ ಜತೆ ಮಾತುಕತೆ ಬಳಿಕ ನಕ್ಸಲ್ ಚಳವಳಿ ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬಂದ ನಂತರ ಬಿ.ಜಿ. ಕೃಷ್ಣಮೂರ್ತಿ ನಕ್ಸಲ್ ಚಳವಳಿ ಮುಂದುವರೆಸಿದ್ದರು. ಆ ಬಳಿಕ ಕಣ್ಮರೆಯಾಗಿದ್ದ ಬಿ.ಜಿ.ಕೃಷ್ಣಮೂರ್ತಿ ದೀರ್ಘ ಕಾಲದ ವರೆಗೆ ಸುದ್ದಿಯಲ್ಲಿರಲಿಲ್ಲ, ನಂತರ 2018 ರಲ್ಲಿ ಬಿ.ಜಿ. ಕೃಷ್ಣಮೂರ್ತಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗುಳ್ಯಾ ಗ್ರಾಮದ ವಾಸುದೇವ ಅವರ ಮನೆಗೆ ಬಂದು ನಕ್ಸಲ್ ಚಳವಳಿಗೆ ಬೆಂಬಲಿಸುವಂತೆ ಒತ್ತಾಯ ಹೇರಿದ್ದರು ಎಂದು ಸುದ್ದಿಯಾಗಿತ್ತು.
ವಾಸುದೇವ ನೀಡಿದ ದೂರು ಆಧರಿಸಿ ಬಿ.ಜಿ. ಕೃಷ್ಣಮೂರ್ತಿ ಮತ್ತು ಇತರರ ವಿರುದ್ಧ ಕುದುರೆಮುಖ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ನೆಮ್ಮಾರಿನ ನಿವಾಸಿ ಕನು ಗೋಪಾಲಯ್ಯ ಅವರ ಪುತ್ರ ಬಿ.ಜಿ. ಕೃಷ್ಣಮೂರ್ತಿ. ಪದವಿ ಬಳಿಕ ಶಿವಮೊಗ್ಗದಲ್ಲಿ ಕಾನೂನು ಪದವಿ ವ್ಯಾಸಂಗ ಮಾಡಿದ್ದರು. ಈ ಸಂದರ್ಭದಲ್ಲೇ ಅವರು ನಕ್ಸಲ್‌ ಚಳವಳಿ ಸಂಪರ್ಕ್ಕೆ ಬಂದರು. ಬರಹಗಾರನಾಗಿ, ಕವಿಯಾಗಿ ಬಿ.ಜಿ. ಕೃಷ್ಣಮೂರ್ತಿ ಗುರುತಿಸಿಕೊಂಡಿದ್ದು, ಅನೇಕ ಕವನ ಸಂಕಲನಗಳು ಕೂಡ ಬಿಡುಗಡೆಯಾಗಿವೆ. 2000 ನೇ ವರ್ಷದಲ್ಲಿ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಚಳವಳಿಯಲ್ಲಿ ಬಿ.ಜಿ. ಕೃಷ್ಣಮೂರ್ತಿ ಗುರುತಿಸಿಕೊಂಡಿದ್ದರು.
ನಕ್ಸಲ್ ನಾಯಕ ಸಾಕೇತ್ ರಾಜನ್ ಎನ್‌ಕೌಂಟರ್ ಬಳಿಕ ಮಲೆನಾಡು ಮತ್ತು ಪಶ್ಚಿಮ ಘಟ್ಟದ ನಕ್ಸಲ್‌ ಚಳವಳಿ ನೇತೃತ್ವ ವಹಿಸಿಕೊಂಡರು ಎಂದು ಹೇಳಲಾಗುತ್ತಿದೆ. ಆ ಬಳಿಕ ನಕ್ಸಲ್ ನಾಯಕರೊಂದಿಗೆ ಒಡನಾಟ ಸಿಕ್ಕಿ ನಕ್ಸಲ್ ಚಳವಳಿಯಲ್ಲಿ ಸಕ್ರಿಯರಾಗಿದ್ದರು ಎನ್ನಲಾಗಿದೆ.
2018 ರಲ್ಲಿ ಬಿ.ಜಿ. ಕೃಷ್ಣಮೂರ್ತಿ ಅವರ ತಂದೆ ಗೋಪಾಲಯ್ಯ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದರು. ಈ ವೇಳೆ ಬಿ.ಜಿ. ಕೃಷ್ಣಮೂರ್ತಿ ಬರಬಹುದು ಎಂಬ ಶಂಕೆಯಿಂದ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿತ್ತು. ಏಕೈಕ ಪುತ್ರ ನಕ್ಸಲ್ ಮುಖಂಡನಾಗಿದ್ದರಿಂದ ಕೃಷ್ಣಮೂರ್ತಿ ತಂದೆ ನೊಂದಿದ್ದರು. ತಂದೆಯ ಅಂತಿಮ ಕಾರ್ಯದಲ್ಲೂ ಬಿ.ಜಿ. ಕೃಷ್ಣಮೂರ್ತಿ ಪಾಲ್ಗೊಂಡಿರಲಿಲ್ಲ. ಹೀಗಾಗಿ ಒಂದು ದಿನ ಕಾದು ಕೃಷ್ಣಮೂರ್ತಿ ಅವರ ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು.

ಪ್ರಮುಖ ಸುದ್ದಿ :-   ಸಿಖ್‌ ಪವಿತ್ರ ಗ್ರಂಥದ ಕೆಲ ಪುಟ ಹರಿದು ಹಾಕಿದ ಆರೋಪ : ಯುವಕನನ್ನು ಬಡಿದುಕೊಂದ ಭಕ್ತರು

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement